- * ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ
- * ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರಿಂದ ಪ್ರಶಸ್ತಿ ಪ್ರದಾನ
ಬೆಂಗಳೂರು: ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆ ಹಾಗೂ ಅತ್ಯುತ್ತಮನಾಯಕತ್ವಕ್ಕಾಗಿ ಏಕ್ಯಾ ಶಾಲೆಗಳ ಸಂಸ್ಥಾಪಕಿ ಹಾಗೂ ಸಿಎಂಆರ್ ವಿಶ್ವವಿದ್ಯಾಲಯದ ಪ್ರೊವೋಸ್ಟ್ ಡಾ. ತ್ರಿಸ್ತಾ ರಾಮಮೂರ್ತಿ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಾಡಪ್ರಭು ಕೆಂಪೇಗೌಡರ 517ನೇ ಜನ್ಮದಿನಾಚರಣೆ ಅಂಗವಾಗಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಮತ್ತು ವಿ. ಸೋಮಣ್ಣ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ, ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಅಧ್ಯಕ್ಷರಾ ಪ್ರೊ. ಎಂ. ಕೃಷ್ಣೇಗೌಡ ಸೇರಿ ವಿವಿಧ ಕ್ಷೇತ್ರದ ಗಣ್ಯರು ಹಾಜರಿದ್ದರು.
ಡಾ. ತ್ರಿಸ್ತಾ ರಾಮಮೂರ್ತಿ ಅವರು ಏಕ್ಯಾ ಶಾಲೆಗಳ ಮೂಲಕ ವಿದ್ಯಾರ್ಥಿಗಳಿಗೆ ನಾವೀನ್ಯತೆ ಮತ್ತು ಸೃಜನಶೀಲ ಕಲಿಕೆಯ ಜತೆಗೆ ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆಯಾಗಿ, ಸಿಎಂಆರ್ ವಿವಿಯ ಪ್ರೊವೊಸ್ಟ್ ಆಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ಶ್ರೇಷ್ಠತೆ ಕಾಯ್ದುಕೊಂಡಿದ್ದು, ಯುವ ಪೀಳಿಗೆಯನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುತ್ತಿದ್ದಾರೆ. ಇವರ ಶಿಕ್ಷಣ ಕ್ಷೇತ್ರದ ಅವಿರತ ಸೇವೆಗಾಗಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದಿಂದ ಪ್ರಶಸ್ತಿ ಪಡೆದಿರುವುದು ನನ್ನ ಪಾಲಿಗೆ ಸಂದ ದೊಡ್ಡ ಗೌರವ. ಕೆಂಪೇಗೌಡರ ದೂರದೃಷ್ಟಿ, ನಾಯಕತ್ವ ಮತ್ತು ಜನಸೇವೆಯೇ ನಮಗೆ ಸ್ಫೂರ್ತಿ. ಈ ಪ್ರಶಸ್ತಿಯನ್ನು ನಮ್ಮ ಶಿಕ್ಷಕ ವೃಂದಕ್ಕೆ ಸಮರ್ಪಿಸುತ್ತೇನೆ.
— - ಏಕ್ಯಾ ಶಾಲೆಗಳ ಸಂಸ್ಥಾಪಕಿ ಡಾ. ತ್ರಿಸ್ತಾ ರಾಮಮೂರ್ತಿ