- 18 ವರ್ಷ ಪೂರೈಸಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
- ಭಾರತೀಯ ಅಂಚೆ ಇಲಾಖೆಯಿಂದ ವಿಶೇಷ ಗೌರವ
- ನಾಡಪ್ರಭು ಕೆಂಪೇಗೌಡರ ಚಿತ್ರದೊಂದಿಗೆ ವಿಮಾನ ನಿಲ್ದಾಣದ ಭವ್ಯ ನೋಟ ವಿನ್ಯಾಸದ ಲಕೋಟೆ ರಿಲೀಸ್
ಬೆಂಗಳೂರು: ಇಲ್ಲಿನ ಟರ್ಮಿನಲ್ 2 ಮತ್ತು ಹಳೆಯ ಕೆಂಪೇಗೌಡ ವಿಮಾನ ನಿಲ್ದಾಣವು ಒಂದಿಲ್ಲ ಒಂದು ವಿಚಾರಕ್ಕೆ ಹೆಸರು ಮಾಡುತ್ತಲೇ ಇರುತ್ತದೆ. ಇದೀಗ ಭಾರತೀಯ ಅಂಚೆ ಇಲಾಖೆಯು 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' (Kempegowd Airport)18 ವರ್ಷ ಪೂರೈಸಿರುವ ಕಾರಣ ಗೌರವವೊಂದನ್ನು ಸಮರ್ಪಿಸಿದೆ
ಕೆಂಪೇಗೌಡ ಏರ್ಪೋಟ್ಗೆ 18 ವರ್ಷ
2008ರಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಆರಂಭವಾದ ಈ ವಿಮಾನ ನಿಲ್ದಾಣ, ಇಂದು ಬೆಂಗಳೂರನ್ನು ಜಗತ್ತಿನೊಂದಿಗೆ ಬೆಸೆಯುವ ಪ್ರಮುಖ ಹೆಬ್ಬಾಗಿಲಾಗಿದೆ. ಈ ಐತಿಹಾಸಿಕ ಮೈಲಿಗಲ್ಲನ್ನು ಸ್ಮರಿಸುವ ಉದ್ದೇಶದಿಂದ 'ಭಾರತೀಯ ಅಂಚೆ ಇಲಾಖೆ' ಚಿತ್ರವನ್ನು ಒಳಗೊಂಡ Permanent Pictorial Cancellation Seal ಬಿಡುಗಡೆ ಮಾಡಿದ್ದು, ಇದರ ಜೊತೆಗೆ 'ವಿಶೇಷ ಅಂಚೆ ಲಕೋಟೆ' ಮತ್ತು 'ಸ್ಮರಣಾರ್ಥ ಅಂಚೆ ಕಾರ್ಡ್‌ಗಳನ್ನು' ಬಿಡುಗಡೆಗೊಳಿಸಿದೆ.
ಏನಿದರ ವಿಶೇಷತೆ?
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಂಚೆ ಕಚೇರಿಯಲ್ಲಿ ಬಳಸಲಾಗುವ ಈ ಹೊಸ ಅಂಚೆ ಮೊಹರಿನಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಚಿತ್ರದೊಂದಿಗೆ ವಿಮಾನ ನಿಲ್ದಾಣದ ಭವ್ಯ ನೋಟವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಬೆಂಗಳೂರಿನ ಶ್ರೀಮಂತ ಇತಿಹಾಸ ಮತ್ತು ಆಧುನಿಕ ತಂತ್ರಜ್ಞಾನದ ನಡುವಿನ ಅವಿನಾಭಾವ ಸಂಬಂಧವನ್ನು ಬಿಂಬಿಸುತ್ತದೆ.
ವಿಮಾನ ನಿಲ್ದಾಣದ ಪ್ರಸಿದ್ಧ 'ಫೀಲ್ಸ್ ಲೈಕ್ ಬಿಎಲ್‌ಆರ್' ಅಭಿಯಾನಕ್ಕೆ ಪೂರಕವಾಗಿ ಇದನ್ನು ಹೊರತರಲಾಗಿದೆ. ಈ ವಿಶೇಷ ಲಕೋಟೆ ಮತ್ತು ಅಂಚೆ ಕಾರ್ಡ್‌ಗಳು, ಪ್ರಯಾಣಿಕರಿಗೆ ಮತ್ತು ಅಂಚೆ ಚೀಟಿ ಸಂಗ್ರಹಕಾರರಿಗೆ ಬೆಂಗಳೂರಿನ ಹೆಮ್ಮೆಯನ್ನು ನೆನಪಿಸುವ ಅತ್ಯಮೂಲ್ಯ ಉಡುಗೊರೆಯಾಗಿವೆ, (ಏಜೆನ್ಸೀಸ್).