Keep the Kannada lamp burning brightly. kannada 
ರಾಜ್ಯ

ಕನ್ನಡದ ದೀಪ ಪ್ರಜ್ವಲಿಸುವಂತೆ ನೋಡಿಕೊಳ್ಳಿ kannada

kannada rajyotsava ಹುಳಿಯಾರು: ಕವಿಪುಂಗವರು, ಹೋರಾಟಗಾರರು ಕನ್ನಡವನ್ನು ಉಳಿಸಿ ಕಾಪಾಡಿದಂತೆ ಆ ಹೊಣೆಗಾರಿಕೆಯ ಹೊರೆ ನಮ್ಮ ಮೇಲೆಯೂ ಇದೆ. ಹಾಗಾಗಿ ಮುಂದಿನ ಪೀಳಿಗೆಗೂ ಅದನ್ನು ವರ್ಗಾಯಿಸುವವರು ನಾವು. ಕನ್ನಡದ ದೀಪ ಸದಾ ಪ್ರಜ್ವಲಿಸುವಂತೆ ನೋಡಿಕೊಳ್ಳಬೇಕು ಎಂದು ಹುಳಿಯಾರಿನ ಬಿಎಂಎಸ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್​.ಸಿ.ವೀರಣ್ಣ ಹೇಳಿದರು.
ಹೋಬಳಿಯ ಬಿಎಂಎಸ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.
ಕನ್ನಡ ಉಪನ್ಯಾಸಕ ಚಂದ್ರಹಾಸ್​ ಮಾತನಾಡಿ, ಕನ್ನಡ ಭಾಷೆಯು ವಿಶ್ವದ ಲಿಪಿಗಳ ರಾಣಿಯಾಗಿದ್ದು, ರಾಜಶ್ರಯದಿಂದ, ದಾಸ ಸಾಹಿತ್ಯ, ವಚನ ಪರಂಪರೆಯಿಂದ ಬೆಳೆದು ಬಂದಾಗಿದೆ ಎಂದು ತಿಳಿಸಿದರು.
ಐಕ್ಯೂಎಸಿ ಸಂಚಾಲಕ ಡಾ.ಸರಸ್ವತಿ ಮಾತನಾಡಿ, ಕನ್ನಡ ನುಡಿ ಬೆಳೆಯಬೇಕೆಂದರೆ ಮೊದಲು ನಾವು ಅದನ್ನು ಸರಿಯಾಗಿ ಬಳಸಬೇಕು. ಕನ್ನಡದ ಕೃತಿಗಳು ವಿವಿಧ ಭಾಷೆಗಳಿಗೆ ಹೆಚ್ಚು ಅನುವಾದವಾಗುತ್ತಿರುವುದು ಖುಷಿಯ ವಿಚಾರ. ಕನ್ನಡ ಸಿನಿಮಾಗಳನ್ನು ನೋಡಿ ಬೆಳೆಸುವಂತಹ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ.ಯೋಗೇಶ್​ ಮಾತನಾಡಿ, ಕನ್ನಡ ಭಾಷೆಯ ಅಭಿಮಾನ ಕೇವಲ ನವೆಂಬರ್​ ತಿಂಗಳಿಗಷ್ಟೇ ಸೀಮಿತವಾಗಬಾರದು. 365 ದಿನವೂ ಕೂಡ ಈ ಅಭಿಮಾನ ಇರಬೇಕು. ಕನ್ನಡ ಒಂದು ಭಾಷೆಯಲ್ಲ ಬದಲಾಗಿ ಅದೊಂದು ಭಾವನೆ. ಇಂತಹ ಕಾರುಣ್ಯ ಭಾವನೆಯು ನಂದಿ ಹೋಗದಂತೆ ನೋಡಿಕೊಳ್ಳಬೇಕು ಎಂದರು.
ರಾಜ್ಯಶಾಸ್ತ್ರ ಉಪನ್ಯಾಸಕ ತಿಪ್ಪೇಸ್ವಾಮಿ ಮಾತನಾಡಿ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಅಕ್ಷರಸ್ಥರ ಕೊಡುಗೆ ಎಷ್ಟಿದೆಯೋ ಅಷ್ಟೇ ಕೊಡುಗೆ ಅನಕ್ಷರಸ್ಥರದು ಕೂಡ ಇದೆ. ಅನ್ಯ ಭಾಷೆಯಲ್ಲಿ ಮುಳುಗಿದ ಈ ಪ್ರಪಂಚದಲ್ಲಿ ಈ ಕನ್ನಡವೆಂಬ ಭಾಷೆ ಈಗಾಗಲೇ ಬೆಳೆದು ಬಹು ಎತ್ತರಕ್ಕೆ ನಿಂತಿದೆ. ಅದನ್ನು ಉಳಿಸುವ ಜವಾಬ್ದಾರಿ ನಮ್ಮದು ಎಂದರು.