ಮುಧೋಳ ನಗರದ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಗಾಣಿಗ ಸಮಾಜದ ವತಿಯಿಂದ 2025-26ನೇ ಸಾಲಿನ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಬೇಲೂರು ಗುರುಬಸವೇಶ್ವರ ಮಠದ ಡಾ. ಮಹಾಂತ ಬಸವಲಿಂಗ ಮಹಾಸ್ವಾಮಿಗಳು ಉದ್ಘಾಟಿಸಿದರು. ಲಕ್ಷ್ಮಣ ಚಿನ್ನನವರ, ಮಹದೇವ ಹೊಸಕೋಟಿ, ನಿಂಗಪ್ಪ ಹಳ್ಳದ ಇತರರಿದ್ದರು.
- ಡಾ. ಮಹಾಂತ ಬಸವಲಿಂಗ ಶ್ರೀ ಅಭಿಮತ
- ಸಾಧಕರ ಸನ್ಮಾನ ಸಮಾರಂಭ
ಮುಧೋಳ: ಸಮಾಜ ನನಗೇನು ನೀಡಿದೆ ಎನ್ನುವುದಕ್ಕಿಂತ ನಾನು ಸಮಾಜಕ್ಕೆ ಏನು ಕಾಣಿಕೆ ನೀಡಿದೆ ಎನ್ನುವುದು ಮುಖ್ಯ. ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಬಹಳ ಇದೆ. ಸತತ ಪ್ರಯತ್ನದಿಂದ ಮುನ್ನಡೆಯಿರಿ ಎಂದು ಬೇಲೂರು ಗುರುಬಸವೇಶ್ವರ ಮಠದ ಡಾ. ಮಹಾಂತ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ನಗರದ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಮುಧೋಳ ತಾಲೂಕು ಗಾಣಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ, ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಗಾಣಸಿರಿ ನೌಕರರ ಪತ್ತಿನ ಸಹಕಾರಿ ಸಂಘ ಹಾಗೂ ಗಾಣಿಗ ಯುವ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ 2025-26ನೇ ಸಾಲಿನ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರತಿಭಾನ್ವಿತರಾದವರು ನಿಮ್ಮ ಅಭಿರುಚಿಗೆ ತಕ್ಕಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರಿ. ಆಗ ಸಮಾಜ ನಿಮ್ಮನ್ನು ಗುರುತಿಸಿ ಗೌರವಿಸಿದ್ದು ಸಾರ್ಥಕವಾಗುತ್ತದೆ. ಗುರು-ಹಿರಿಯರ ಆಶೀರ್ವಾದ ಹಾಗೂ ಸಮಾಜದ ಒಗ್ಗಟ್ಟಿನಿಂದ ಮಾತ್ರ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಜಗದ್ಗುರು ದಿಗಂಬರೇಶ್ವರ ಸಂಸ್ಥಾನಮಠ, ಕೊಲ್ಹಾರದ ಯೋಗಿನಾಥ ಕಲ್ಲಿನಾಥ ದೇವರು ಮಾತನಾಡಿ, ಇಂದಿನ ಯುವ ಪೀಳಿಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹರಸಿದರು.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವಿಶ್ರಾಂತ ನಿರ್ದೇಶಕರಾದ ಎಸ್.ಆರ್. ಮನಹಳ್ಳಿ ವಿಶೇಷ ಉಪನ್ಯಾಸ ನೀಡಿ, ಶಿಕ್ಷಣ ಮತ್ತು ಸಂಸ್ಕಾರವೇ ಮನುಷ್ಯನ ನಿಜವಾದ ಆಸ್ತಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ಗುರಿ ತಲುಪಬೇಕು ಎಂದು ಕಿವಿಮಾತು ಹೇಳಿದರು.
ಲಕ್ಷ್ಮಣ ಚಿನ್ನಣ್ಣವರ ಮಾತನಾಡಿ, ಸಮಾಜದ ಬಾಂಧವರು ಒಗ್ಗಟ್ಟಿನಿಂದ ಮುನ್ನಡೆದು, ಸಂಘಟನೆ ಚಟುವಟಿಕೆಗಳಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕೋರಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು, ನಿವೃತ್ತ ನೌಕರರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ಬಸವಪ್ರಭು ಸರನಾಡಗೌಡರ, ಎಪಿಎಂಸಿ ಅಧ್ಯಕ್ಷ ಸಂಗಪ್ಪ ಇಮ್ಮಣ್ಣವರ, ಆರ್.ಜಿ. ಪಾಟೀಲ, ಡಾ. ಶರಣಬಸಪ್ಪ ಯತ್ತಳ್ಳಿ, ಸದಾಶಿವ ಹಲಗಲಿ, ಪ್ರಭು ಕಲ್ಯಾಣಿ, ಮಹಾದೇವಪ್ಪ ಹೊಸಕೋಟಿ, ನಿಂಗಪ್ಪ ಹಳ್ಳದ, ಬಸಪ್ಪ ಚೆನ್ನಣ್ಣವರ, ಹೊಳಬಸು ತೇಲಿ, ಮಂಜುಳಾ ಕಲ್ಯಾಣಿ, ವಿಜು ಹೊಸಮನಿ, ಶ್ರೀಶೈಲ ಚಿನ್ನಣ್ಣವರ, ಅಶೋಕ ನವಲಗುಂದ, ಅಶೋಕ ಬಾಗೋಜಿ ಇತರರಿದ್ದರು.