ಕರ್ನಾಟಕ ಪರೀಕ್ಷಾ ಪ್ರಾಧಿಕಾರ 
ರಾಜ್ಯ

ಕೆಇಎ ಸರ್ವರ್ ಸಮಸ್ಯೆ: ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಅರ್ಜಿ ಸಲ್ಲಿಕೆಗೆ ಪರದಾಟ

ಪ್ರಮುಖ ಮುಖ್ಯಾಂಶಗಳು

  • ಎರಡರಿಂದ ಮೂರು ಗಂಟೆ ಕಂಪ್ಯೂಟರ್ ಮುಂದೆ ಕುಳಿತರೂ ಅರ್ಜಿ ಸಂಖ್ಯೆಯನ್ನು ನೋಂದಣಿ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ.
  • ಅರ್ಜಿ ಸಲ್ಲಿಸಲು ಜು.30 ಮತ್ತು ಶುಲ್ಕ ಪಾವತಿಸಲು ಜು.31 ಕೊನೆಯ ದಿನವಾಗಿತ್ತು. ಆ ಅವಧಿಯನ್ನು ಕ್ರಮವಾಗಿ ಆ.7 ಮತ್ತು ಆ.10ರ ವರೆಗೆ ವಿಸ್ತರಿಸಲಾಗಿದೆ
  • ಡಿಜಿಲಾಕರ್ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಏಕ ಕಾಲದಲ್ಲಿ ಗ್ರಾಮ ಆಡಳಿತ ಅಧಿಕಾರಿ (ವಿಎಒ), ಕ್ರೈಸ್ ಶಿಕ್ಷಕರು ಹಾಗೂ ಭೂ ಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸರ್ವರ್ ಸಮಸ್ಯೆ ಉಂಟಾಗಿದ್ದು, ಲಕ್ಷಾಂತರ ಅರ್ಜಿದಾರರರು ಅರ್ಜಿ ಸಲ್ಲಿಸಲು ಪರದಾಡುವಂತಾಗಿದೆ.
ಅರ್ಜಿ ಸಲ್ಲಿಸಲು ಜು.30 ಕೊನೆಯ ದಿನವಾಗಿದ್ದರಿಂದ ಕಳೆದ ಕೊನೇ ಕ್ಷಣದಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಸರ್ವರ್ ಸಮಸ್ಯೆ ಉಂಟಾಗಿದೆ. ಆದರೆ, ಎರಡರಿಂದ ಮೂರು ಗಂಟೆ ಕಂಪ್ಯೂಟರ್ ಮುಂದೆ ಕುಳಿತರೂ ಅರ್ಜಿ ಸಂಖ್ಯೆಯನ್ನು ನೋಂದಣಿ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಇದರಿಂದ ಅರ್ಜಿ ಸಲ್ಲಿಸಲು ಆಸ್ಪದವೇ ಇಲ್ಲದಂತಾಗಿದೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಜಿಲಾಕರ್ ನೋಂದಣಿಯೇ ಕಷ್ಟ:

ಕೆಇಎಯಲ್ಲಿ ಅರ್ಜಿ ಕರೆದಿರುವ ಹುದ್ದೆಗಳಿಗೆ ಅರ್ಜಿ ದಾಖಲಿಸುವ ಮುನ್ನ, ಅಭ್ಯರ್ಥಿಗಳ ನೈಜತೆ ಪರಿಶೀಲನೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಡಿಜಿಲಾಕರ್ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಆದರೆ, ನಾನು ಕಳೆದ ನಾಲ್ಕು ದಿನಗಳಿಂದ ಡಿಜಿಲಾಕರ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಈ ವರೆಗೆ ಸಾಧ್ಯವೇ ಆಗಿಲ್ಲ ಎಂದು ಅಭ್ಯರ್ಥಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಸಹಾಯವಾಣಿ ಕರೆ ಸ್ವೀಕರಿಸಲ್ಲ:

ಡಿಜಿಲಾಕರ್ ನೋಂದಣಿ ನಂತರ ಅರ್ಜಿ ಪ್ರಕ್ರಿಯೆ ಆರಂಭವಾಗಲಿದೆ. ಅದನ್ನು ಇನ್ನೂ ಆರಂಭವೇ ಮಾಡಿಲ್ಲ. ಈ ವಿಚಾರವಾಗಿ ಸಹಾಯವಾಣಿಗೆ ಕರೆ ಮಾಡಿದರೆ, ಯಾವಾಗಲೂ ಲೈನ್ ಬ್ಯುಸಿ ಇರುತ್ತದೆ. ಹತ್ತಾರು ಬಾರಿ ಪ್ರಯತ್ನಿಸಿ ಸಾಕಾಗಿ ಸುಮ್ಮನಾಗಿದ್ದೇನೆ. ನಾನು ಮಂಡ್ಯದಲ್ಲಿದ್ದು, ಇದಕ್ಕಾಗಿ ಬೆಂಗಳೂರು ಕಚೇರಿಗೆ ಹೋಗಬೇಕಾಗುತ್ತದೆ. ಇಲ್ಲವಾದಲ್ಲಿ ಭೌತಿಕವಾಗಿ ಯಾರೊಬ್ಬರನ್ನು ಕೇಳಿದರೂ ಪರಿಹಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮತ್ತೆ ಕೆಲವರು ಬೆಂಗಳೂರಿನಲ್ಲಿರುವ ಕೆಇಎ ಕೇಂದ್ರ ಕಚೇರಿಗೆ ಭೇಟಿ ನೀಡಿ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ.

ಅರ್ಜಿ ಸಲ್ಲಿಕೆ ಅವಧಿ ಆ.7ರವರೆಗೆ ವಿಸ್ತರಣೆ

ಕಂದಾಯ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿನ ಉಳಿಕೆ ಮೂಲ ವೃಂದ/ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಗ್ರೂಪ್-ಸಿ ವೃಂದದ ಗ್ರಾಮ ಆಡಳಿತ ಅಧಿಕಾರಿ ನೇರ ನೇಮಕಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜು.30 ಮತ್ತು ಶುಲ್ಕ ಪಾವತಿಸಲು ಜು.31 ಕೊನೆಯ ದಿನವಾಗಿತ್ತು. ಆ ಅವಧಿಯನ್ನು ಕ್ರಮವಾಗಿ ಆ.7 ಮತ್ತು ಆ.10ರ ವರೆಗೆ ವಿಸ್ತರಿಸಲಾಗಿದೆ ಎಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.