ಕರ್ನಾಟಕ ಪರೀಕ್ಷಾ ಪ್ರಾಧಿಕಾರ
- ಏ.30ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ಈಗಾಗಲೇ ಪರೀಕ್ಷೆ ನಡೆಸಿರುವ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಪರೀಕ್ಷೆಗಳಿಗೆ ಅನ್ವಯ
- ಏ. 26 ಮತ್ತು 27ರಂದು ನಡೆಸಲಾದ ಪತ್ರಿಕೆ-2 ಪರೀಕ್ಷೆಯ ಅಭ್ಯರ್ಥಿಗಳಿಗೆ ಇದೇ 9 ಮತ್ತು 10ರಂದು ಸಾಮಾನ್ಯ ಜ್ಞಾನ ಪತ್ರಿಕೆ-1ರ ಪರೀಕ್ಷೆಯು ನಿಗದಿ
- ಆರ್‌ಜಿಯುಎಚ್‌ಎಸ್, ಕೃಷಿ ಮಾರಾಟ ಇಲಾಖೆ, ಕೆಸ್‌ಎಸ್‌ಎಐಡಿಸಿ, ಜಲಮಂಡಳಿ ಪರೀಕ್ಷೆಗಳಿಗೆ ಒಳ ಮೀಸಲಾತಿ ಪರಿಷ್ಕೃತ ವೇಳಾಪಟ್ಟಿ ಅನ್ವಯ
ಬೆಂಗಳೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ಅಳವಡಿಸದೇ ಹೊರಡಿಸಿರುವ ಎಲ್ಲ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು, ಒಳ ಮೀಸಲಾತಿ ಅಳವಡಿಸಿ ಪರಿಷ್ಕೃತ ಅಧಿಸೂಚನೆಯನ್ನು ಹೊರಡಿಸುವಂತೆ ರಾಜ್ಯ ಸರ್ಕಾರದ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಇದೇ 9 ಮತ್ತು 10ರಂದು ನಡೆಯಬೇಕಿದ್ದ ಹಲವು ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರದ್ದುಪಡಿಸಿದೆ.
ಏ.30ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ಈಗಾಗಲೇ ಪರೀಕ್ಷೆ ನಡೆಸಿರುವ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಪರೀಕ್ಷೆಗಳಿಗೆ ಅನ್ವಯವಾಗಲಿದೆ. ಆ ಪ್ರಕಾರ, ಏ. 26 ಮತ್ತು 27ರಂದು ನಡೆಸಲಾದ ಪತ್ರಿಕೆ-2 ಪರೀಕ್ಷೆಯ (ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಮತ್ತು ಸಹಾಯಕ ಅಭಿಯಂತರ (ವಿದ್ಯುತ್) ಹುದ್ದೆಗಳ ಅಭ್ಯರ್ಥಿಗಳಿಗೆ ಇದೇ 9 ಮತ್ತು 10ರಂದು ಸಾಮಾನ್ಯ ಜ್ಞಾನ ಪತ್ರಿಕೆ-1ರ ಪರೀಕ್ಷೆಯು ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಯಾವೆಲ್ಲ ಹುದ್ದೆ ಪರೀಕ್ಷೆಗೆ ಅನ್ವಯ?
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಜೂನಿಯರ್ ಪ್ರೋಗ್ರಾಮರ್, ಜಲಮಂಡಳಿ ಸಹಾಯಕ ಅಭಿಯಂತರ (ಕಂಪ್ಯೂಟರ್ ಸೈನ್ಸ್), ಆರ್‌ಜಿಯುಎಚ್‌ಎಸ್, ಕೃಷಿ ಮಾರಾಟ ಇಲಾಖೆ, ಕೆಸ್‌ಎಸ್‌ಎಐಡಿಸಿ, ಜಲಮಂಡಳಿ ಸಹಾಯಕ ಅಭಿಯಂತರ (ಸಿವಿಲ್), ಕೆಸ್‌ಎಸ್‌ಎಐಡಿಸಿ ಮತ್ತು ಜಲಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಸಿವಿಲ್ ಮತ್ತು ಮೆಕಾನಿಕಲ್ ಪರೀಕ್ಷೆಗಳಿಗೆ ಒಳ ಮೀಸಲಾತಿ ಪರಿಷ್ಕೃತ ವೇಳಾಪಟ್ಟಿ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದೆ.
ಸರ್ಕಾರದ ಆದೇಶವೇನು?
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶದನ್ವಯ ಒಳ ಮೀಸಲಾತಿಯನ್ನು ಅಳವಡಿಸದೆ ಹೊರಡಿಸಿರುವ ಎಲ್ಲ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು ಒಳ ಮೀಸಲಾತಿಯನ್ನು ಅಳವಡಿಸಿಕೊಂಡು ಪರಿಷ್ಕೃತ ಅಧಿಸೂಚನೆಗಳನ್ನು ಕೂಡಲೇ ಹೊರಡಿಸಿ ನೇಮಕಾತಿಗಳನ್ನು ಹೊರಡಿಸುವಂತೆ ಸೂಚಿಸಲಾಗಿದೆ.