KCET 
ರಾಜ್ಯ

KCET ಫಲಿತಾಂಶ ಪ್ರಕಟ: ಎಂಜಿನಿಯರಿಂಗ್‌ನಲ್ಲಿ ತನಿಷಾ ಕಾರ್ತಿಕ್‌ಗೆ ಪ್ರಥಮ ರ‍್ಯಾಂಕ್; 3 ಕೋರ್ಸ್‌ಗಳಲ್ಲಿ ನಯನ ಗೋಪಿ ಟಾಪರ್!

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ್ದ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET) ಫಲಿತಾಂಶ ಅಧಿಕೃತವಾಗಿ ಬಿಡುಗಡೆಯಾಗಿದೆ. ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ. ಶರಣು ಪ್ರಕಾಶ್ ಪಾಟೀಲ್ ಅವರು ಫಲಿತಾಂಶವನ್ನು ಪ್ರಕಟಿಸಿದರು. ಈ ಬಾರಿ ಪರೀಕ್ಷೆಗೆ ಒಟ್ಟು 3,36,000ಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 3,09,014 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಒಟ್ಟು 2,92,782 ಮಕ್ಕಳು ಅರ್ಹತೆ (Eligibility) ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಬಾರಿ ಭೌತಶಾಸ್ತ್ರ ಮತ್ತು ರಾಸಾಯನಿಕ ಶಾಸ್ತ್ರ (Physics & Chemistry) ವಿಷಯಗಳಲ್ಲಿ ತಲಾ ಒಂದು ಕೃಪಾಂಕ (1 Grace Mark) ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಎಂಜಿನಿಯರಿಂಗ್ ವಿಭಾಗದ ಸಾಧಕರು

ಎಂಜಿನಿಯರಿಂಗ್ ವಿಭಾಗದಲ್ಲಿ ತನಿಷಾ ಕಾರ್ತಿಕ್ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದು ಸೌಂಡ್ ಮಾಡಿದ್ದಾರೆ. ಸೃಜನ್ ದ್ವಿತೀಯ ಸ್ಥಾನ ಹಾಗೂ ನಿನಾದ್ ವಿಶಿಷ್ಟ ತೃತೀಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.

ಮೂರು ವಿಭಾಗಗಳಲ್ಲಿ ನಯನ ಗೋಪಿ ರಾಜ್ಯಕ್ಕೆ ನಂ.1!

ಈ ಬಾರಿಯ ಫಲಿತಾಂಶದಲ್ಲಿ ಬೆಂಗಳೂರಿನ ಶಿವನಗರದ ಬೇಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ನಯನ ಗೋಪಿ ಬಿಎಸ್ಸಿ ನರ್ಸಿಂಗ್, ಯೋಗ-ನ್ಯಾಚುರಪತಿ ಹಾಗೂ ಬಿ-ಫಾರ್ಮ ಮತ್ತು ಡಿ-ಫಾರ್ಮ ಕೋರ್ಸ್‌ಗಳ ಮೂರೂ ವಿಭಾಗಗಳಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ದಾವಣಗೆರೆಯ ಸರ್ ಎಂ.ವಿ ಪಿಯು ಕಾಲೇಜಿನ ಅಮೂಲ್ಯ ಅವರು ಈ ಮೂರೂ ವಿಭಾಗಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿವಿಧ ಕೋರ್ಸ್‌ಗಳ ಟಾಪರ್‌ಗಳ ಪಟ್ಟಿ ಇಲ್ಲಿದೆ

ಬಿಎಸ್ಸಿ ನರ್ಸಿಂಗ್ / ಯೋಗ ಮತ್ತು ನ್ಯಾಚುರಪತಿ / ಬಿ-ಫಾರ್ಮ & ಡಿ-ಫಾರ್ಮ:
ಪ್ರಥಮ: ನಯನ ಗೋಪಿ (ಬೇಸ್ ಪಿಯು ಕಾಲೇಜ್, ಶಿವನಗರ, ಬೆಂಗಳೂರು)
ದ್ವಿತೀಯ: ಅಮೂಲ್ಯ (ಸರ್ ಎಂ.ವಿ ಪಿಯು ಕಾಲೇಜ್, ದಾವಣಗೆರೆ)
ತೃತೀಯ: ರಿತಿಕ್ ಕುಮಾರ್ (ಆರ್.ವಿ ಪಿಯು ಕಾಲೇಜ್, ಜಯನಗರ, ಬೆಂಗಳೂರು - ನರ್ಸಿಂಗ್) / ಸುಚಿತಾ (ಶ್ರೀ ಚೈತನ್ಯ ಪಿಯು ಕಾಲೇಜು, ದಾವಣಗೆರೆ - ಯೋಗ, ಫಾರ್ಮಸಿ)

ಕೃಷಿ ವಿಜ್ಞಾನ (Agriculture)

ಪ್ರಥಮ: ನಿನಾದ್ (ಆರ್.ವಿ ಪಿಯು ಕಾಲೇಜ್, ಬೆಂಗಳೂರು)
ದ್ವಿತೀಯ: ಅನ್ಮೊಲ್ (ಅರ್ಜುನ್ ಸೈನ್ಸ್ ಕಾಲೇಜ್, ಧಾರವಾಡ)
ತೃತೀಯ: ಸಮಯ್ ಎ.ಎಸ್ (ಎಕ್ಸ್‌ಪರ್ಟ್ ಪಿಯು ಕಾಲೇಜ್, ಮಂಗಳೂರು)
ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಚಿವ ಶರಣು ಪ್ರಕಾಶ್ ಪಾಟೀಲ್ ಹಾಗೂ ಕೆಇಎ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.