- ಗಂಡಾಗಿ ಹುಟ್ಟಿ, ಹೆಣ್ಣಾಗಿ ಬದುಕು ಕಟ್ಟಿಕೊಂಡ ಕವಿತಾ ದಾದಾಪೀರ್
- ಧರ್ಮದ ಗಡಿ ದಾಟಿ ಗೆಜ್ಜೆ ಕಟ್ಟಿದ ದಾದಾಪೀರ್ ಕವಿತಾ ಆದ ಕಥೆ
- ಹಸಿವು, ಅವಮಾನ, ತಿರಸ್ಕಾರ ಮೆಟ್ಟಿ ನಿಂತ ಮಂಗಳಮುಖಿ
Transgender Kavita story:
ಭಿನ್ನ ಲಿಂಗತ್ವದ ಹಾದಿಯನ್ನು ಆಯ್ದುಕೊಂಡ ಲಿಂಗತ್ವ ಅಲ್ಪಸಂಖ್ಯಾತರು ಇಂದಿಗೂ ಸಮಾಜದಲ್ಲಿ ಹಲವು ರೀತಿಯ ನೋವು, ಅವಮಾನ ಮತ್ತು ತಿರಸ್ಕಾರವನ್ನು ಎದುರಿಸುತ್ತಿದ್ದಾರೆ. ಇಂತಹ ಕಷ್ಟಗಳನ್ನೇ ಸವಾಲಾಗಿ ಸ್ವೀಕರಿಸಿ, ಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವವರಲ್ಲಿ ಕವಿತಾ ದಾದಾಪೀರ್ ಕೂಡ ಒಬ್ಬರು. ಅವರ ವಿಭಿನ್ನ ಬದುಕಿನ ಪಯಣ ಇದೀಗ ಸಾಮಾಜಿಕ ಜಾಲತಾಣದಲ್ಲೂ ಗಮನ ಸೆಳೆಯುತ್ತಿದೆ.
ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಸಮೀಪದ ನಿಡಗುಂದಿ ಭಾಗದ ದಾದಾಪೀರ್ ಮುಲ್ಲಾ ಇಂದು ಕವಿತಾ ದಾದಾಪೀರ್ ಆಗಿ ಗುರುತಿಸಿಕೊಂಡಿದ್ದಾರೆ. ಬಾಲ್ಯದಲ್ಲೇ ತಮ್ಮೊಳಗಿನ ಹೆಣ್ತನದ ಭಾವನೆಯನ್ನು ಅರಿತುಕೊಂಡ ಅವರು, ಸುಮಾರು 12ನೇ ವಯಸ್ಸಿನಿಂದಲೇ ‘ನಾನು ಹೆಣ್ಣು’ ಎಂದು ಬದುಕಲು ಶುರು ಮಾಡಿದ್ರು. ಬಾಲ್ಯದಲ್ಲಿ ಅವರ ನಡೆ-ನುಡಿಯನ್ನು ಊರಿನ ಕೆಲವರು ಹಾಸ್ಯ ಮಾಡುತ್ತಿದ್ದರು. ಆದರೆ ಇದ್ಯಾವುದಕ್ಕೂ ಕುಗ್ಗದ ದಾದಾಪೀರ್, ತಮ್ಮ ಜೀವನದ ದಾರಿಯನ್ನು ತಾವೇ ಕಂಡುಕೊಳ್ಳಲು ಮುಂದಾದರು.
ರಂಗಭೂಮಿಯಲ್ಲಿ ಹೊಸ ಬದುಕು
ಕವಿತಾ ದಾದಾಪೀರ್ ಕಂಪನಿ ನಾಟಕಗಳ ಮೂಲಕ ರಂಗಭೂಮಿಗೆ ಕಾಲಿಟ್ಟರು. ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ರಂಗಭೂಮಿಯಲ್ಲಿ ನಿಧಾನವಾಗಿ ಹೆಸರು ಗಳಿಸಿದರು. ಅಲ್ಲಿಂದ ಅವರು ತಿರುಗಿ ನೋಡಲೇ ಇಲ್ಲ. ಇನ್ನು ಉತ್ತರ ಕರ್ನಾಟಕದ ಜೋಗತಿ ಪರಂಪರೆಯಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಯಲ್ಲಮ್ಮ ದೇವಿಯ ಸೇವೆ ಮಾಡುತ್ತಾ, ಕೊಡ ಹೊತ್ತು ಜೋಗತಿ ನೃತ್ಯದ ಮೂಲಕ ಜನರ ಜನ-ಮನ ಗೆದ್ದಿದ್ದಾರೆ. ಅಂದು ಕಟ್ಟಿಕೊಂಡ ಗೆಜ್ಜೆಯ ಸದ್ದು ಇಂದಿಗೂ ಅವರ ಕಲಾ ಪಯಣದಲ್ಲಿ ಮುಂದುವರಿದಿದೆ.
ಹಸಿವು, ಬಡತನದ ನಡುವೆ ಅರಳಿದ ಪ್ರತಿಭೆ
ಕವಿತಾ ಬದುಕು ಅಂದುಕೊಂಡಷಟ್ಟು ಸುಲಭವಾಗಿರಲಿಲ್ಲ. ಬಾಲ್ಯದಲ್ಲೇ ಹಸಿವು ಮತ್ತು ಬಡತನದ ಕಷ್ಟಗಳನ್ನು ಎದುರಿಸಬೇಕಾಯ್ತು. ಒಂದು ಹಂತದಲ್ಲಿ ಮನೆಯಿಂದ ಹೊರಬರಬೇಕಾಯಿತು. ಹಾಗೆ ಬಂದ ಬಳಿಕ ಹೆತ್ತವರನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, ಹಸಿವು-ಅವಮಾನ ಮತ್ತು ಸಾಮಾಜಿಕ ತಿರಸ್ಕಾರ ಮತ್ತೊಂದೆಡೆ. ಆದರೆ ಈ ಸವಾಲುಗಳ ನಡುವೆಯೂ ಅವರು ತಮ್ಮ ಹಾದಿಯನ್ನು ಹುಡುಕಿಕೊಂಡರು.
ಇಸ್ಲಾಂ ಧರ್ಮದಲ್ಲಿ ಹುಟ್ಟಿದ ಕವಿತಾ, ಮುಂದೆ ಬೇರೆ ಧರ್ಮದವರ ಆಶ್ರಯದಲ್ಲಿ ಬೆಳೆದು. ಹಿಂದೂ ಧರ್ಮದ ಎಲ್ಲಮ್ಮ ದೇವಿಯ ಜೋಗತಿ ಪರಂಪರೆಯಲ್ಲೂ ತೊಡಗಿಸಿಕೊಂಡು ದೇವಿಯ ಸೇವೆ ಸಲ್ಲಿಸಿದರು. ಹೀಗಾಗಿ ಮಂಗಳಮುಖಿಯಾಗಿ, ಅದರಲ್ಲೂ ಧರ್ಮದ ಗಡಿಗಳನ್ನು ಮೀರಿ ಸಾಗಿದ ಪಯಣವದು. ಇದೇ ಕಾರಣಕ್ಕೆ ಕವಿತಾ ತಮ್ಮನ್ನು ತಾವು ‘ಸರ್ವಧರ್ಮದ ಮಗಳು’ ಎಂದೂ ಕರೆದುಕೊಳ್ಳುತ್ತಾರೆ.
ಇನ್ನು, ಕಲೆ ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅವರು, ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದ ಉತ್ತರ ಕರ್ನಾಟಕದ ಜನರ ಪ್ರೀತಿ ಗಳಿಸಿದ್ದಾರೆ. ಒಂದು ಧರ್ಮದಲ್ಲಿ ಹುಟ್ಟಿ, ಬೇರೆ ಧರ್ಮದವರ ಆಶ್ರಯದಲ್ಲಿ ಬೆಳೆದು, ಕಲೆ ಮೂಲಕ ಗುರುತಿಸಿಕೊಂಡಿರುವ ಕವಿತಾ ದಾದಾಪೀರ್ ಅವರ ಪಯಣ ನಿಜಕ್ಕೂ ಸ್ಪೂರ್ತಿದಾಯಕ.