ಆಲೂರು ತಾಲೂಕಿನ ಕುಂದೂರು ಹೋಬಳಿಯ ಗಂಜಿಗೆರೆ ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಮೂರ್ತಿಗೆ ಕತ್ತರಿಗಟ್ಟ ಜಾತ್ರಾ ಮಹೋತ್ಸವ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. .... 
ರಾಜ್ಯ

ಕತ್ತರಿಗಟ್ಟ ಜಾತ್ರಾ ಮಹೋತ್ಸವ ಅದ್ದೂರಿ

ವಸಂತಕುಮಾರ್ ಬಿ
ಆಲೂರು: ತಾಲೂಕಿನ ಕುಂದೂರು ಹೋಬಳಿಯ ಗಂಜಿಗೆರೆ ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯವರ ಕತ್ತರಿಗಟ್ಟ ಜಾತ್ರಾ ಮಹೋತ್ಸವವು ಪ್ರತಿವರ್ಷದಂತೆ ಈ ವರ್ಷವೂ ಸಹ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿದರು.

ಪ್ರತಿ ವರ್ಷವೂ ಶ್ರೀ ಗೌರಿ ಗಣೇಶ ಹಬ್ಬ ಮುಗಿದ ಬಳಿಕ ಶನಿವಾರ ಜಾತ್ರೆ ನಡೆಯುತ್ತದೆ. ಅದರಂತೆ ಶನಿವಾರ ಹೇಮಾವತಿ ನದಿ ತೀರದಿಂದ ಶ್ರೀ ಸ್ವಾಮಿಯವರ ಪವಿತ್ರ ಕಳಸವನ್ನು ವಿಶೇಷ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಕರೆತರಲಾಯಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಗೋವಿಂದಾ...ಗೋವಿಂದಾ... ಎಂಬ ಜಯಘೋಷಗಳನ್ನು ಕೂಗುತ್ತಾ ಸಂಭ್ರಮಿಸಿದರು.

ಭಕ್ತರ ಗೋವಿಂದನ ಘೋಷ, ಭಜನೆ ಹಾಗೂ ಧಾರ್ಮಿಕ ವಾತಾವರಣದಿಂದ ಇಡೀ ಪರಿಸರವು ಭಕ್ತಿಮಯವಾಗಿತ್ತು. ಭಕ್ತರು ಕಳಸವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಸ್ವಾಗತಿಸಿ ದೇಗುಲದತ್ತ ಮೆರವಣಿಗೆಯಲ್ಲಿ ಸಾಗಿದರು. ಕಳಸ ದೇವಾಲಯದ ಸನ್ನಿಧಿಗೆ ತಲುಪಿದ ಬಳಿಕ ದೇಗುಲದ ಪ್ರಧಾನ ಅರ್ಚಕ ವೆಂಕಟೇಶ್ ಕಶ್ಯಪ್ ಅವರಿಂದ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಗಂಜಿಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.