ವಾರಾಣಸಿ : ವಿಶ್ವ ಪ್ರಸಿದ್ಧ ಕಾಶಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆಗೆ ಅಂದಿನ ಕಾಶಿ ಪೀಠದ ಜಗದ್ಗುರು ಶಿವಲಿಂಗ ಶಿವಾಚಾರ್ಯ ಭಗವತ್ಪಾದರು 75 ಎಕರೆ ಭೂಮಿ ದಾನ ಮಾಡಿ ವಿದ್ಯಾವಿಕಾಸಕ್ಕೆ ಶ್ರಮಿಸಿದ್ದಾರೆ ಎಂದು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾಶಿ ಮಹಾರಾಜ ನರೇಶ ಡಾ.ವಿಭೂತಿನಾರಾಯಣ ಸಿಂಗ್ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕ್ರಿ.ಶ. 574 ರಲ್ಲಿ ತಮ್ಮ ಪೂರ್ವಜರ ಸದ್ಗತಿಗಾಗಿ ವಾರಾಣಸಿ ನಗರದ ಕರ್ದಮೇಶ್ವರ ಮಹದೇವ ಮಂದಿರದಿಂದ ಗಂಗಾ ನದಿಯ ದಂಡೆಯವರೆಗಿನ ವಿಶಾಲವಾದ 300 ಎಕರೆ ಭೂಮಿಯನ್ನು ಕಾಶಿ ಜ್ಞಾನಪೀಠದ 51 ನೆಯ ಪೀಠಾಚಾರ್ಯರಾಗಿದ್ದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಜಂಗಮರಿಗೆ ದಾನಮಾಡಿದ್ದರು. 1916 ರಲ್ಲಿ ಮದನ ಮೋಹನ ಮಾಲವೀಯ ಅವರು ಕಾಶಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆಗೆ ನೆರವು ನೀಡುವಂತೆ ಕಾಶಿ ಪೀಠಕ್ಕೆ ಮನವಿ ಮಾಡಿದಾಗ ಆಗಿನ ಪೀಠಾಚಾರ್ಯರಾಗಿದ್ದ ಶ್ರೀಜಗದ್ಗುರು ಶಿವಲಿಂಗ ಶಿವಾಚಾರ್ಯ ಭಗವತ್ಪಾದರು 75 ಎಕರೆ ಭೂಮಿಯನ್ನು ದಾನ ಮಾಡಿದ್ದು, ಈ ವಿಚಾರ ಹಿಂದೂ ವಿಶ್ವದ್ಯಾಲಯದ ಇತಿಹಾಸ ಪುಸ್ತಕದಲ್ಲಿ ಉಲ್ಲೇಖಿತಗೊಂಡಿದ್ದನ್ನು ವಿವರಿಸಿದರು.
ಕಾಶಿಯ ಮಹಾರಾಜ ಡಾ.ವಿಭೂತಿನಾರಾಯಣಸಿಂಹ ಅವರನ್ನು ಕಾಶಿಯ ಜನತೆ ’ನಡೆದಾಡುವ ವಿಶ್ವನಾಥ’ನೆಂದೇ ಭಾವಿಸುತ್ತಿದ್ದರು. ರಾಜರು ರಸ್ತೆಯಲ್ಲಿ ಹೋಗುವಾಗ ಇಕ್ಕೆಲಗಳಲ್ಲಿ ನಿಂತ ಕಾಶಿವಾಸಿಗಳು ‘ಹರಹರ ಮಹಾದೇವ’ ಎಂಬ ಜಯಘೋಷವನ್ನು ಮಾಡುತ್ತಿದ್ದರು. ಪ್ರಸ್ತುತ ಅವರ ಜನ್ಮ ಶತಮಾನೋತ್ಸವ ಆಚರಿಸುತ್ತಿರುವುದಕ್ಕೆ ಜಗದ್ಗುರುಗಳು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಚಲ ವಿಶ್ವನಾಥ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಹಿಂದೂ ವಿಶ್ವವಿದ್ಯಾಲಯದ ಕುಲಪತಿ ಡಾ.ಅಜಿತ್‌ಕುಮಾರ್ ಚತುರ್ವೇದಿ, ರಾಜಪುತ್ರಿಯರಾದ ಹರಪ್ರಿಯಾ, ವಿಷ್ಣುಪ್ರಿಯಾ ಮತ್ತು ಕೃಷ್ಣಪ್ರಿಯಾ, ಮನೋಜ್‌ಕುಮಾರ್ ಗುಪ್ತ ಮತ್ತಿತರರು ಪಾಲ್ಗೊಂಡಿದ್ದರು.