ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ದೇವಸ್ಥಾನದ ಒಳ ಆವರಣದ ಉದ್ಯಾನವನದಲ್ಲಿ ತಾಲೂಕು ಕಸಾಪ, ಜಿಲ್ಲಾ ಹಾಗೂ ತಾಲೂಕು ಘಟಕಗಳ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನ ಆಚರಿಸಲಾಯಿತು. ಷಣ್ಮುಖಪ್ಪ ಅಂಬಲಿ, ಯಮನಪ್ಪ ಅಂಗಡಗೇರಿ, ಎಸ್.ಕೆ. ಸೋಮನಕಟ್ಟಿ ಮತ್ತಿತರರಿದ್ದರು. 
ರಾಜ್ಯ

ಕಸಾಪ ನಿರಂತರ ಕಾರ್ಯ ಶ್ಲಾಘನೀಯ

ಪ್ರಮುಖ ಮುಖ್ಯಾಂಶಗಳು

  • ತಾಲೂಕಾಧ್ಯಕ್ಷ ಶಿವಾನಂದ ಡೋಣೂರ ಹೇಳಿಕೆ
  • 112ನೇ ಸಂಸ್ಥಾಪನಾ ದಿನಾಚರಣೆ
ಬಸವನಬಾಗೇವಾಡಿ: ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಬಗ್ಗೆ ಪ್ರತಿಯೊಬ್ಬ ನಾಡಿನ ಜನರ ಮನ ಮನೆ ಮುಟ್ಟಿಸುವ ಕಾರ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಕೆಲಸ ಮಾಡುತ್ತಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಡೋಣೂರ ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದ ಒಳ ಆವರಣದ ಉದ್ಯಾನವನದಲ್ಲಿ ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಹಾಗೂ ತಾಲೂಕು ಘಟಕಗಳ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1915ರಲ್ಲಿ ಸ್ಥಾಪನೆಯಾದ ಕಸಾಪ ಅಂದಿನಿಂದ ಇಂದಿನವರೆಗೆ ಈ ನಾಡಿನ ನೆಲ, ಜಲ, ಭಾಷೆ ವಿಷಯದಲ್ಲಿ ನಿತ್ಯ, ನಿರಂತರ ಹೋರಾಟ ಮಾಡುತ್ತಾ ಬಂದಿದೆ. ಗ್ರಾಮೀಣ ಭಾಗದ ಅನೇಕ ಎಲೆ ಮರೆ ಕಾಯಿಯಂತೆ ಉಳಿದ ಸಾಹಿತಿಗಳನ್ನು ಗುರುತಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುವುದರ ಜತೆಗೆ ಅವರಿಗೆ ಇನ್ನಷ್ಟು ಪ್ರೋತ್ಸಾಹ ತರಬೇತಿ ನೀಡಿ ಕನ್ನಡ ಸಾಹಿತ್ಯವನ್ನು ಉಳಿಸಿ-ಬೆಳೆಸುವ ಕಾರ್ಯದಲ್ಲಿ ನಿರಂತರವಾಗಿ ಈ ಪರಿಷತ್ತು ಕೆಲಸ ಮಾಡುತ್ತಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಸಿ.ಎಲ್. ಮುರಾಳ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಕೊಡುಗೆ ಅಪಾರವಾಗಿದ್ದು ಅವರು ಸಾಹಿತ್ಯ ಲೋಕಕ್ಕೆ ಬೆಳ್ಳಿ ಚುಕ್ಕೆಯಾಗಿದ್ದರು ಎಂದರು.
ಕಸಾಪ ಮಹಿಳಾ ಪ್ರತಿನಿಧಿ ಮಹಾದೇವಿ ಬಿರಾದಾರ ಮಾತನಾಡಿ, ಕನ್ನಡ ಭಾಷೆ, ನೆಲ, ಜಲಕ್ಕೆ ಸುದೀರ್ಘವಾದ ಇತಿಹಾಸವಿದೆ, ನಮ್ಮ ಮಕ್ಕಳಲ್ಲಿ ಕನ್ನಡ ಭಾಷಾಭಿಮಾನ ಬೆಳಸುವಲ್ಲಿ ಮುಂದಾಗಬೇಕು, ಕನ್ನಡ ಪ್ರಥಮ ಭಾಷೆಯಾಗಿ ನೋಡದೆ ಇಂದಿನ ಪೀಳಿಗೆ ಇಂಗ್ಲಿಷ್ ಭಾಷೆಯ ಕಡೆಗೆ ಆದ್ಯತೆ ಕೊಡುತ್ತಿದ್ದಾರೆ, ನಮ್ಮೆಲ್ಲರಲ್ಲಿ ಕನ್ನಡ ಭಾಷೆಯ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿ ನಾಲ್ವಡಿ ಕೃಷ್ಣರಾಜ ಒಡೆಯರರವರ ಆಸೆಯನ್ನು ಈಡೇರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಎಸ್.ಕೆ. ಸೋಮನಕಟ್ಟಿ ಮಾತನಾಡಿದರು.
ಷಣ್ಮುಖಪ್ಪ ಅಂಬಲಿ, ಯಮನಪ್ಪ ಅಂಗಡಗೇರಿ, ಎಸ್.ಬಿ. ಅಂಕದ, ಬಸವರಾಜ ಮೇಟಿ, ಶ್ರೀಶೈಲ ಶಿರಗುಪ್ಪಿ, ಎಸ್.ಆರ್. ಮಠ, ಶಿಕ್ಷಕ ಶರಣು ದಳವಾಯಿ, ಬಸವರಾಜ ಚಿಂಚೋಳ್ಳಿ ಇತರರಿದ್ದರು.