Kasapa's contribution to Kannada literary history is immense
ಚಿಂತಾಮಣಿ: ಕನ್ನಡ ಸಾಹಿತ್ಯ ಪರಿಷತ್ ನಾಡಿನ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದು, ಕನ್ನಡ ಭಾಷೆಯ ಕೀರ್ತಿಯನ್ನು ವಿಶ್ವ ಮಟ್ಟಕ್ಕೇರಿಸಿದ ಕೀರ್ತಿ ಇದೆ ಎಂದು ಹಿರಿಯ ಸಾಹಿತಿ ಕಾಗತಿ ವಿ. ವೆಂಕಟರತ್ನಂ ಹೇಳಿದರು.
ನಗರದ ಮಹಾತ್ಮ ಗಾಂಧಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಕಸಾಪದಿಂದ ಹಮ್ಮಿಕೊಂಡಿದ್ದ ನೂತನ ಕಚೇರಿ ಉದ್ಘಾಟನೆ ಮತ್ತು ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಅಭಿವೃದ್ಧಿ, ಸಂರಕ್ಷಣೆ ಮತ್ತು ಪ್ರಸಾರದ ಧ್ಯೇಯವನ್ನು ಹೊತ್ತು ಸಾಗುತ್ತಿರುವ ತಾಲೂಕು ಕಸಾಪ, ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಗೆ ಮೂಲ ಸೌಕರ್ಯಗಳು ಅಗತ್ಯ ಎಂದ ಅವರು, ಕೊಠಡಿಯ ಅಭಿವೃದ್ಧಿಗೆ ಆರ್ಥಿಕ ಸಹಾಯವನ್ನು ಸ್ಥಳದಲ್ಲೇ ಪ್ರಕಟಿಸಿದರು.
ಮುಖಂಡ ಟಿ.ಎಂ.ಈಶ್ವರ ಸಿಂಗ್ ಮಾತನಾಡಿ, ಡಾ.ಅಂಬೇಡ್ಕರ್ ಭಾರತ ದೇಶದ ಸಂವಿಧಾನ ಶಿಲ್ಪಿಯಾಗಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮಹಾನ್ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವರ ಆದರ್ಶಗಳು ಎಂದಿಗೂ ಯುವ ಜನತೆಗೆ ದಾರಿದೀಪವಾಗಿವೆ. ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಬೇಕು ಎಂದು ದೃಢ ಸಂಕಲ್ಪದಿಂದ ಅನೇಕ ಕಾನೂನು, ಸಾಮಾಜಿಕ ಸುಧಾರಣೆ ಜಾರಿಗೆ ತಂದರು. ಅಸಮಾನತೆ, ಅಜ್ಞಾನದಿಂದ ಬಳಲುತ್ತಿದ್ದ ಸಮಾಜವನ್ನು ಜಾಗೃತಗೊಳಿಸಲು ಜೀವನವನ್ನೇ ಸಮರ್ಪಿಸಿದರು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ಗೆಸ್ವಂತ ಕಚೇರಿ ಇರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ನಮ್ಮ ಮನವಿಗೆ ಸ್ಪಂದಿಸಿ ಸ್ಥಳದಲ್ಲೇ ಬಿಇಓಗೆ ಕರೆ ಮಾಡಿ ಕೊಠಡಿ ಒದಗಿಸಲು ತಿಳಿಸಿದರು. ಇದರಿಂದಾಗಿ ಇಂದು ಪರಿಷತ್ಗೆ ಕಚೇರಿ ದೊರಕಿದಂತಾಗಿದೆ ಎಂದರು.
ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಆಂಜನಪ್ಪ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಪೂರಕವಾದ ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸೋಣ. ಕನ್ನಡ ಭಾಷೆ ಮತ್ತು ಸಂಸತಿಯ ಅಭಿವೃದ್ಧಿಗೆ ಶ್ರಮಿಸೋಣ ಎಂದರು.