ಇಂಡಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ 112ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಆಚರಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಆನಂದ ಕೆಂಭಾವಿ, ಜಯಶ್ರೀ ತೆಲಗಿ ಮತ್ತಿತರರಿದ್ದರು.
- ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಮತ
- 112ನೇ ಸಂಸ್ಥಾಪನಾ ದಿನಾಚರಣೆ
ಇಂಡಿ: ಕನ್ನಡ ನಮ್ಮೆಲ್ಲರ ಉಸಿರಾಗಲಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಾತಿನಿಧಿಕ ಸಂಸ್ಥೆಯಾಗಿದೆ. ಈ ಸಂಸ್ಥೆ ನಾಡು-ನುಡಿಗಾಗಿ ಹಗಲಿರಳು ಕನ್ನಡ ಭಾಷೆಯ ಅಭಿಮಾನ ಮೂಡಿಸುವಂತಹ ಕಾರ್ಯ ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶನಿವಾರ 112ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಹೆಮ್ಮೆಯ ರಾಜ್ಯ ನಮ್ಮದು. ಕನ್ನಡ ಸಾಹಿತ್ಯ ಪರಿಷತ್ತಿಗೆ ಸದಸ್ಯರಾಗುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸಬೇಕೆಂದರು.
ಗೌರವ ಕಾರ್ಯದರ್ಶಿ ಪಾರ್ವತಿ ಸೊನ್ನದ ಮಾತನಾಡಿ, ವಚನ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಧಾರ. ಕನ್ನಡ ನೆಲ-ಜಲ ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಕನ್ನಡಿಗರಾದ ನಾವು ಕನ್ನಡ ಕಟ್ಟೋಣ ಮತ್ತು ಬೆಳೆಸೋಣ ಎಂದರು.
ಶಿಕ್ಷಕ ಸಂಘದ ಅಧ್ಯಕ್ಷ ವೈ.ಟಿ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳು ನಿರಂತರ ನಡೆಯುತ್ತಿರುವುದರಿಂದ ಕನ್ನಡ ಸಾಹಿತ್ಯದ ವಾತಾವರಣ ನಿರ್ಮಾಣವಾಗಿದೆ ಎಂದರು.
ಅಹಮ್ಮದ ವಾಲಿಕಾರ, ಆನಂದ ಕೆಂಭಾವಿ, ಜಯಶ್ರೀ ತೆಲಗಿ, ಎಸ್.ಸಿ, ಎಸ್.ಟಿ ನೌಕರರ ಸಂಘದ ಅಧ್ಯಕ್ಷ ಬಿ.ಎಂ. ವಠಾರ, ಬಿ.ಬಿ. ಸುತಾರ, ಖಲೀಲ ಅತ್ತಾರ, ಅರವಿಂದ ಮೇತ್ರಿ, ಕಲ್ಲನಗೌಡ ಬಿರಾದಾರ ಮತ್ತಿತರರಿದ್ದರು.