ಕನ್ನಡ ಸಾಹಿತ್ಯ ಪರಿಷತ್ತು  
ರಾಜ್ಯ

ಮೂರು ತಿಂಗಳಿನಿಂದ ವೇತನವಿಲ್ಲದೆ ಕಸಾಪ ಸಿಬ್ಬಂದಿ ಪರದಾಟ

ಪ್ರಮುಖ ಮುಖ್ಯಾಂಶಗಳು

  • * ಒಟ್ಟು ಸಿಬ್ಬಂದಿ 46 ಮಂದಿ
  • * 44 ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ
  • * ಇಬ್ಬರು ಕಾಯಂ ನೌಕರರಿಗೆ ಮಾತ್ರ ವೇತನ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿ (ಕಸಾಪ) ನಲ್ಲಿ ಕಳೆದ ಮೂರು ತಿಂಗಳುಗಳಿಂದ ವೇತನವಿಲ್ಲದೆ ನೌಕರರು ಕಾರ್ಯನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ವೇತನಕ್ಕಾಗಿ ಸಿಬ್ಬಂದಿ ಎದುರು ನೋಡುತ್ತಿದ್ದಾರೆ.
ಪರಿಷತ್ತಿನಲ್ಲಿ ಒಟ್ಟು 46 ಮಂದಿ ಉದ್ಯೋಗಿಗಳಿದ್ದು, ಇವರಲ್ಲಿ ಇಬ್ಬರು ಮಾತ್ರ ಕಾಯಂ ಉಳಿದ 44 ಮಂದಿ ಸಂಚಿತ ವೇತನದಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಯಂ ಉದ್ಯೋಗಿಗಳಿಗೆ ಮಾತ್ರ ಸರ್ಕಾರ ಸಕಾಲಕ್ಕೆ ವೇತನ ಪಾವತಿ ಮಾಡುತ್ತಿದ್ದು, ಉಳಿದವರು ದುಡಿದರೂ ವೇತನ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆರ್ಥಿಕ ಆಶಿಸ್ತು, ಅಕ್ರಮ ಸೇರಿ ನಾನಾ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆ ನಿರ್ವಹಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರನ್ನು ಪರಿಷತ್ತಿನ ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು. ಆ ನಂತರ ಸಂಚಿತ ವೇತನದಡಿ ಕಾರ್ಯ ನಿರ್ವಹಿಸುತ್ತಿರುವ 44 ಮಂದಿಗೆ ವೇತನವಿಲ್ಲದೆ ಪರದಾಡುವಂತಾಗಿದೆ.

52 ಲಕ್ಷ ರೂ.ವೇತನ:

ಕಳೆದ 3 ತಿಂಗಳಿಂದ ಸುಮಾರು 52 ಲಕ್ಷ ರೂ. ವೇತನ ಸರ್ಕಾರ ಪಾವತಿ ಮಾಡಬೇಕಾಗಿದೆ. ಪರಿಷತ್ತಿನ ಅಧ್ಯಕ್ಷರು ಇದ್ದ ವೇಳೆ ಸಕಾಲಕ್ಕೆ ಸರಿಯಾಗಿ ವೇತನ ಪಾವತಿಯಾಗುತ್ತಿತ್ತು. ಆದರೆ ಸರ್ಕಾರ ಪರಿಷತ್ತಿಗೆ ಆಡಳಿತಾಧಿಕಾರಿ ನೇಮಿಸಿದ ನಂತರ ನಮಗೆ ವೇತನ ಸಿಕ್ಕಿಲ್ಲ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಮಕ್ಕಳ ಶಾಲಾ ಶುಲ್ಕ ಸೇರಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಉದ್ಯೋಗಿಯೊಬ್ಬರು ಮನವಿ ಮಾಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ವೇತನ ಅಗಿಲ್ಲ ಎಂಬ ಸುದ್ದಿ ಕೇಳಿ ಆಶ್ಚರ್ಯವಾಗಿದೆ. ಪರಿಷತ್ತಿನ ಸಿಬ್ಬಂದಿಯಲ್ಲಿ ಬಹುತೇಕರು ಅಲ್ಪ ಸಂಬಳದಲ್ಲಿ (ಸರ್ಕಾರಿ ನೌಕರರಿಗೆ ಹೋಲಿಸಿದಾಗ) ಕೆಲಸ ಮಾಡುತ್ತಿದ್ದಾರೆ. ವೇತನ ಬಿಡುಗಡೆಗೆ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಗಮನ ಹರಿಸಬೇಕು. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಬೇಕು.