ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ಕಸಕಲಪುರ ಮಾರಮ್ಮನವರ ಉತ್ಸವಮೂರ್ತಿಯನ್ನು ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು. ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಗಳ ಭಕ್ತರು ಇದ್ದರು.
ಗುಂಡ್ಲುಪೇಟೆ: ತಾಲೂಕಿನ ಬರಗಿ ಗ್ರಾಮದಲ್ಲಿ ಮಂಗಳವಾರ ಕಸಕಲಪುರ ಮಾರಮ್ಮನವರ ಜಾತ್ರೆ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಗಳಿಂದ ನೆರವೇರಿತು.
ಸೋಮವಾರ ಗ್ರಾಮದ ಆಯ್ದ ಭಕ್ತರು ಮಂಗಳ ವಾದ್ಯಗಳು, ಸತ್ತಿಗೆ, ಸುರಿಪಾನಿ, ಬಿರುದು, ಬಾವಲಿಗಳೊಡನೆ ಬಂಡೀಪುರ ಅರಣ್ಯದೊಳಗಿರುವ ಮೂಲ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವರ ಪೆಟ್ಟಿಗೆ ಹಾಗೂ ಪ್ರಸಾದಗಳನ್ನು ಮಂಗಳವಾರ ಬೆಳಗ್ಗೆ ಗ್ರಾಮದ ಬಸವೇಶ್ವರ ದೇವಾಲಯಕ್ಕೆ ತೆಗೆದುಕೊಂಡು ವಾಪಸಾದರು.
ನಂತರ ಗ್ರಾಮದಲ್ಲಿ ಉತ್ಸವ ಮೂರ್ತಿ ಹಾಗೂ ಗ್ರಾಮದೇವತೆಗಳನ್ನು ದೇವರ ಬಿಜ್ಜು ಮಾಡಿ ಹೂವಿನ ಹೊದಿಕೆಯಿಂದ ಮುಚ್ಚಿದ ಪಲ್ಲಕ್ಕಿಯೊಳಗೆ ಇರಿಸಿ ಕುದುರೆ ವಾಹನದ ಮೇಲೆ ಇಟ್ಟು ಮಂಗಳವಾದ್ಯಗಳು, ಸತ್ತಿಗೆ, ಸುರಿಪಾಣಿ ಬಿರುದು, ಬಾವಲಿಗಳೊಡನೆ ಊರಿನೊಳಗೆ ಮೆರವಣಿಗೆ ಮಾಡಲಾಯಿತು.
ಹರಕೆ ಹೊತ್ತ ಭಕ್ತರು ಬಾಯಿಬೀಗ ಸೇರಿದಂತೆ ನಾನಾ ಸೇವೆಗಳನ್ನು ಸಲ್ಲಿಸಿದರು. ತಮ್ಮ ದನಗಳನ್ನು ರೋಗರುಜಿನಗಳಿಂದ ಪಾರು ಮಾಡುವಂತೆ ಪ್ರಾರ್ಥಿಸಿ ಜಾನುವಾರುಗಳ ಕೊಂಬಿಗೆ ಪಂಜು ಕಟ್ಟಿ ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ಅಕ್ಕಪಕ್ಕದ ಗ್ರಾಮಗಳ ಜನರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಭಕ್ತರಿಗೆ ಬೇಯಿಸಿದ ಸಪ್ಪೆ ಅವರೆ ಪ್ರಸಾದ ವಿನಿಯೋಗ ಮಾಡಲಾಯಿತು.