ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್-ಎ ಮತ್ತು ಗ್ರೂಪ್ ಬಿ ವೃಂದದ ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಡಳಿತ ಯಂತ್ರ ಚುರುಕುಗೊಂಡಿದ್ದು, ಕೊನೇ ಹಂತದ ಸಿದ್ಧತೆ ನಡೆದಿದೆ.
ರಾಜ್ಯ ಸರ್ಕಾರ ಒಟ್ಟಾರೆ 56,432 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಈಗಾಗಲೇ ಅನುಮತಿ ನೀಡಿದೆ. ಇದರಲ್ಲಿ ಗ್ರೂಪ್ ಎ-562, ಗ್ರೂಪ್ ಬಿ- 619, ಗ್ರೂಪ್ ಸಿ- 23,119 ಎಂದು ವರ್ಗೀಕರಿಸಲಾಗಿದೆ. ಈ ಪೈಕಿ ಗ್ರೂಪ್-ಎ ಮತ್ತು ಬಿಗೆ (ಕೆಎಎಸ್) ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗುತ್ತದೆ? ಎಂಬುದು ಸ್ಪಷ್ಟಗೊಳ್ಳಬೇಕಾಗಿದೆ.
ಪ್ರಸ್ತುತ ಕರ್ನಾಟಕ ಲೋಕಸೇವಾ ಆಯೋಗವು 2024ನೇ ಸಾಲಿನ ಅಧಿಸೂಚನೆಗೆ ಸಂಬಂಧಿಸಿದಂತೆ ಅಂತಿಮ ಹಂತದ ಪ್ರಕ್ರಿಯೆಗಳಲ್ಲಿ ತೊಡಗಿದೆ. 1,158 ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದು ಪೂರ್ಣಗೊಂಡ ಬೆನ್ನಲ್ಲೇ ಹೊಸ ಅಧಿಸೂಚನೆ ಹೊರಬೀಳುವ ನಿರೀಕ್ಷೆಯಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ನೇಮಕಾತಿ ಪ್ರಕ್ರಿಯೆಯು ಅತ್ಯಂತ ನಿರ್ಣಾಯಕವಾಗಿದೆ.
ಮುಂದಿನ ನೇಮಕಾತಿ ಪ್ರಕ್ರಿಯೆ ಆರಂಭಿಸುವ ನಿಟ್ಟಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪ್ರಮುಖ ಹೆಜ್ಜೆ ಇಟ್ಟಿದ್ದು, ಎಲ್ಲ ಇಲಾಖೆಗಳಿಂದ ಖಾಲಿ ಹುದ್ದೆಗಳ ಮಾಹಿತಿ ಕೋರಿ ಅಧಿಕೃತ ಟಿಪ್ಪಣಿ ಹೊರಡಿಸಿದ ಬಳಿಕ ಮಾಹಿತಿ ಕ್ರೋಡೀಕರಣ ಪ್ರಕ್ರಿಯೆ ನಡೆಸಿದೆ.
ಕರ್ನಾಟಕ ಗೆಜೆಟೆಡ್ ಪ್ರೊಬೆಷನರ್ಸ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997ರ ನಿಯಮ 4ರ ಅನ್ವಯ ಗ್ರೂಪ್-ಎ, ಗ್ರೂಪ್- ಬಿ ವೃಂದದ ಹುದ್ದೆಗಳಿಗೆ ನೇರ ನೇಮಕ ಪ್ರಕ್ರಿಯೆಯನ್ನು ಪ್ರತಿ ವರ್ಷ ನಡೆಸಬೇಕಾಗುತ್ತದೆ. ಈ ಸಂಬಂಧ ಆಯೋಗಕ್ಕೆ ಎರಡು ವೃಂದಗಳ ರಿಕ್ತ ಸ್ಥಾನ ಬಿಡುಗಡೆಗೊಳಿಸಬೇಕಾಗುತ್ತದೆ. ಹೀಗಾಗಿ ಹುದ್ದೆಗಳ ನಿಖರ ಸಂಖ್ಯೆ ಕೊಡಿ ಎಂದು ಕೇಳಲಾಗಿತ್ತು. ಜತೆಗೆ ಸಾಮಾನ್ಯ ವೃಂದದ ಹುದ್ದೆಗಳಲ್ಲದೆ, ಕಲ್ಯಾಣ ಕರ್ನಾಟಕ ಭಾಗದ (371ಜೆ) ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಪ್ರತ್ಯೇಕವಾಗಿ ನೀಡಲು ಸೂಚಿಸಲಾಗಿತ್ತು. ರೋಸ್ಟರ್ ಬಿಂದು ಹಾಗೂ ಮೀಸಲಾತಿ ಅನ್ವಯ ಹುದ್ದೆಗಳ ವರ್ಗೀಕರಣ ಸಲ್ಲಿಸಬೇಕೆಂದು ಸೂಚಿಸಲಾಗಿತ್ತು. ಒಳಾಡಳಿತ ಇಲಾಖೆ, ಹಣಕಾಸು ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೇರಿ ಪ್ರಮುಖ ಇಲಾಖೆಗಳು ಈಗಾಗಲೇ ಮಾಹಿತಿ ರವಾನಿಸಿವೆ. ಈ ಬಾರಿ 300ಕ್ಕೂ ಹೆಚ್ಚು ಹುದ್ದೆಗಳು (ಕೆಎಎಸ್) ನೇಮಕಾತಿಗೆ ಲಭ್ಯವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಪಾರದರ್ಶಕ-ಕಾಲಮಿತಿ
ಹೊಸ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ಮತ್ತು ಕಾಲಮಿತಿಯೊಳಗೆ ನಡೆಯಬೇಕೆಂಬ ಉದ್ದೇಶದಿಂದ ಡಿಪಿಎಆರ್ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಂಡಿದೆ. ಇಷ್ಟರಲ್ಲೇ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಆ ನಂತರವಷ್ಟೇ ಕೆಪಿಎಸ್‌ಸಿ ಅಧಿಕೃತವಾಗಿ ಪರೀಕ್ಷಾ ಅಧಿಸೂಚನೆ ಹೊರಡಿಸಲಿದೆ. 2024ರಲ್ಲಿ ಸಂಗ್ರಹಿಸಿದ ಮಾಹಿತಿಯಂತೆ 656 ಹುದ್ದೆಗಳ ಭರ್ತಿ ಅಗತ್ಯವಿತ್ತು. ಆರ್ಥಿಕ ಇಲಾಖೆ 504 ಹುದ್ದೆ ಭರ್ತಿಗೆ ಅನುಮತಿ ನೀಡಿತ್ತು. ಇದರಲ್ಲಿ 384 ಹುದ್ದೆಗಳಿಗೆ ಅಧಿಸೂಚನೆ ಹೊರಟಿತ್ತು. ಇದರಲ್ಲಿ ಬಾಕಿ ಉಳಿದ 120 ಹುದ್ದೆಗಳನ್ನು ಒಳಗೊಂಡಂತೆ ಇಟ್ಟು 300-350 ಹುದ್ದೆಗಳವರೆಗೆ ಅರ್ಜಿ ಆಹ್ವಾನಿಸಬಹುದು ಎಂಬ ಲೆಕ್ಕಾಚಾರವಿದೆ.
ಒತ್ತಡ ತಂತ್ರ, ರಾಷ್ಟ್ರಪತಿಗೂ ಮೊರೆ
ಸರ್ಕಾರಿ ನೇಮಕ ಪ್ರಕ್ರಿಯೆಯನ್ನು ಬೇಗ ಆರಂಭಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಉದ್ಯೋಗಾಕಾಂಕ್ಷಿಗಳು ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಮೊರೆ ಹೋಗಿದ್ದಾರೆ.
ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ವಿಪರೀತ ವಿಳಂಬವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಸುಮಾರು 2.83 ಲಕ್ಷ ಹುದ್ದೆಗಳು ಖಾಲಿ ಇದ್ದರೂ, ಒಳಮೀಸಲಾತಿ ನೆಪವೊಡ್ಡಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಈಗ ಒಂದು ವಾರದಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸುವುದಾಗಿ ಭರವಸೆ ನೀಡಲಾಗುತ್ತಿದೆ. ಅಭ್ಯರ್ಥಿಗಳು ಆತಂಕದಲ್ಲಿದ್ದು, ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಜಿಲ್ಲಾ ಮಟ್ಟದಲ್ಲೂ ಉದ್ಯೋಗಾಕಾಂಕ್ಷಿಗಳು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಆರಂಭಿಸಿದ್ದಾರೆ.