ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಸೆಲ್ಫಿ ವಿಡಿಯೋ ಮಾಡಿ ಸಾವಿಗೆ ಶರಣಾದ ವ್ಯಕ್ತಿ! Loan Torture  
ರಾಜ್ಯ

ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಸೆಲ್ಫಿ ವಿಡಿಯೋ ಮಾಡಿ ಸಾವಿಗೆ ಶರಣಾದ ವ್ಯಕ್ತಿ! Loan Torture

ಪ್ರಮುಖ ಮುಖ್ಯಾಂಶಗಳು

  • ಗದಗನಲ್ಲಿ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ
  • ನಿತ್ಯ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಧರ್ಮಗೌಡ ಮತ್ತು ರವಿ ಶಿವನಗುತ್ತಿ ವಿರುದ್ಧ ಗದಗದಲ್ಲಿ ಪ್ರಕರಣ ದಾಖಲು
  • ಬೇರೆಯವರಿಗೆ ಸಹಾಯ ಮಾಡಲು ಹೋಗಿ ದಿಕ್ಕುತೋಚದೆ ಸಾವಿಗೆ ಶರಣಾದ ಸಂಪತ್ ದಂಡಗಿ
  • ಸಾಯುವ ಮುನ್ನ ಸೆಲ್ಫಿ ವಿಡಿಯೋ ಹಾಗೂ ಆರು ಪುಟಗಳ ಡೆತ್‌ನೋಟ್ ಬರೆದಿಟ್ಟು ಆಕ್ರಂದನ ತೋಡಿಕೊಂಡ ಸಂಪತ್​
ಗದಗ: ಬಡ್ಡಿ ದಂಧೆಕೋರರ ಕಿರುಕುಳಕ್ಕೆ ( Loan Torture ) ಬೇಸತ್ತು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಗದಗನಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸಂಪತ್​ ದಂಡಗಿ (38) ಎಂದು ಗುರುತಿಸಲಾಗಿದೆ. ನಗರದ ಕರೆಮ್ಮಕಲ್ ಬಡಾವಣೆಯಲ್ಲಿ ಘಟನೆ ನಡೆದಿದೆ.
ಬಡ್ಡಿ ದಂಧೆಕೋರರ ಕಿರುಕುಳ, ಧಮ್ಕಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರ ಆರೋಪವಾಗಿದೆ. ಧರ್ಮಗೌಡ ಕರಿಯನಗೌಡ್ರ ಎಂಬುವರು ಸಂಪತ್​ಗೆ ಫೋನ್ ಮಾಡಿ ಬಡ್ಡಿ, ಹಣಕ್ಕಾಗಿ ನಿತ್ಯ ಕಿರುಕುಳ ನೀಡುತ್ತಿದ್ದರು ಎಂಬುದು ಕುಟುಂಬಸ್ಥರ ಆರೋಪವಾಗಿದೆ. ಬಡ್ಡಿ ದಂಧೆಕೋರರು ಸಂಪತ್​ನ ಪತ್ನಿ ಸ್ನೇಹಾಗೂ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಧರ್ಮಗೌಡ ಕರಿಯನಗೌಡ್ರ, ರವಿ ಶಿವನಗುತ್ತಿ ಎಂಬುವರು ಧಮ್ಕಿ ಹಾಕುತ್ತಿದ್ದರು. ನಿನ್ನ ಹಾಗೂ ನಿನ್ನ ಪತ್ನಿ ಹೆಸರಿನಲ್ಲಿ ಚೆಕ್​ಗಳಿವೆ. ಅವುಗಳ ಚೆಕ್ ಬೌನ್ಸ್​ ಕೇಸ್ ಹಾಕ್ತೀನಿ ಅಂತ ಬೆದರಿಕೆ ಹಾಕುತ್ತಿದ್ದರು. ಕಿರುಕುಳ, ಬೆದರಿಕೆಗೆ ಹೆದರಿ ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡ ಅಂತ ಪತ್ನಿ ಹಾಗೂ ಅವರ ತಾಯಿಯ ಆರೋಪವಾಗಿದೆ. ಈ ಕುರಿತು ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಪತ್ ಸೆಲ್ಫಿ ವಿಡಿಯೋ

ಬಡ್ಡಿ ದಂಧೆಕೊರರ ಕಿರುಕುಳಕ್ಕೆ ಬೇಸತ್ತ ಸಂಪತ್​, ಸೆಲ್ಫಿ ವೀಡಿಯೋ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜನರಿಗೆ ಉಪಕಾರ ಮಾಡಲು ಹೋಗಿ ಈ ಸ್ಥಿತಿ ಬಂದಿದೆ ಅಂತ ಮೃತ ಸಂಪತ್ ದಂಡಗಿ ಸೆಲ್ಫಿ ವೀಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾನೆ. ಬೇಸರದಿಂದ ನಿರ್ಧಾರ ಮಾಡುತ್ತಿದ್ದೇನೆ. ಕಷ್ಟ ಅಂತಾ ಬಂದ್ರೆ ಸಹಾಯ ಮಾಡಬಾರದು. ಬೇರೆಯವರಿಗೆ ಸಹಾಯ ಮಾಡಲು ಹೋಗಿ ಹೀಗಾಯಿತು. ನನಗೆ ಕಷ್ಟ ಅಂತಾ ಬಂದಾಗ ಯಾರೂ ಬರಲಿಲ್ಲ. ಬದುಕಬೇಕು, ದುಡಿಯಬೇಕು ಅಂದಾಗ ತೊಂದರೆ ಮಾಡಿದರು. ಮಾರುತಿ ಕರಣೆ ಅನ್ನೋರು ನನ್ನ ಹೆಸರು ಅಪಪ್ರಚಾರ ಮಾಡಿದ್ದಾರೆ. ಧರ್ಮಗೌಡ ಕರಿಯನಗೌಡ್ರ ಅನ್ನೋರ ಬಳಿ ಹಣ ಪಡೆದಿದ್ದಕ್ಕೆ ಧಮ್ಕಿ ಹಾಕುತ್ತಿದ್ದಾರೆ. ದಿಕ್ಕು‌ತೋಚದಂತಾಗಿ ಈ ನಿರ್ಧಾರ ಮಾಡಿದ್ದೇನೆ ಅಂತಾ ವಿಡಿಯೋದಲ್ಲಿ ಹೇಳಿದ್ದಾರೆ.

ಆತ್ಮಹತ್ಯೆ ಸ್ಥಳದಲ್ಲಿ ಡೆತ್​ನೋಟ್

ಸಂಪತ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್​ನೋಟ್​ ಸಹ ಪತ್ತೆಯಾಗಿದೆ. ಸಂಪತ್ ಅವರು ಸುಮಾರು 60 ಲಕ್ಷ ರೂಪಾಯಿ ಹಣ ಬಡ್ಡಿ ರೂಪದಲ್ಲಿ ಪಡೆದು ಬೇರೆಯವರಿಗೆ ಕೊಟ್ಟಿದ್ದ ಎಂಬುದು ಉಲ್ಲೇಖವಿದೆ. ಧರ್ಮಗೌಡ ಎನ್ನುವರಿಂದ 3.5 ಬಡ್ಡಿಯಂತೆ ಹಣ ಪಡೆದಿದ್ದ ಸಂಪತ್ ಅವರು ಮಂಜುನಾಥ್ ಪವಾರ್, ಕೃಷ್ಣಾಸಾ ಪವಾರ್, ಛಾಯಾ ಕುಲಕರ್ಣಿ, ಜಯರಾಮ್ ಎನ್ನುವರಿಗೆ ಹಣ ಕೊಟ್ಟಿದ್ದ. ಇವರು ಹಣ ಪಡೆದು ವಾಪಾಸ್ ಕೊಡಲಿಲ್ಲ. ಹೀಗಾಗಿ ಬಡ್ಡಿ ಹಣ ಮರಳಿ ಕೊಡುವಂತೆ ಧರ್ಮಗೌಡನ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಮೊಬೈಲ್ ಆಡಿಯೋ, ಮನೆ ಸಿ.ಸಿ ಕ್ಯಾಮೆರಾ ಪರಿಶೀಲನೆ ಮಾಡುವಂತೆ ಡೆತ್​ನೋಟ್​ನಲ್ಲಿ ಉಲ್ಲೇಖವಾಗಿದೆ.
ಸದ್ಯ ಸಂಪತ್​ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗಳಿಗಾಗಿ ಬೆಟಗೇರಿ ಬಡಾವಣೆ ಪೊಲೀಸರು ಬಲೆ ಬಿಸಿದ್ದಾರೆ.