ಗೌರವ್ ಗುಪ್ತ 
ರಾಜ್ಯ

ವಿದ್ಯುತ್ ಉತ್ಪಾದನೆ ಸ್ವಾವಲಂಬನೆದತ್ತ ಕರ್ನಾಟಕ

ಬೆಂಗಳೂರು: ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವು ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆ ಇಟ್ಟಿದೆ. ಶೂನ್ಯ ಅಡಚಣೆಯೊಂದಿಗೆ ಗ್ರಾಹಕರಿಗೆ ವಿದ್ಯುತ್‌ಪೂರೈಸುವ ಮೂಲಕ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಸಮನ್ವಯ ಸಾಧಿಸಬೇಕೆಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಇಂಜಿನಿಯರುಗಳಿಗೆ ಸೂಚಿಸಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರ್‌ಗಳ ಸಂಘ, ಸೋಮವಾರ ಸರ್ ಎಂ.ವಿ. ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ತಾಂತ್ರಿಕ ದಿನಚರಿ ಬಿಡುಗಡೆಗೊಳಿಸಿ ಮಾತನಾಡಿದರು.
ಕೋವಿಡ್ ಬಳಿಕ ವಿದ್ಯುತ್ ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳವಾದಾಗ ಅಗತ್ಯ ವಿದ್ಯುತ್ ಪೂರೈಸಲು ನಮ್ಮಲ್ಲಿ ಯೋಜನೆಗಳಿರಲಿಲ್ಲ. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಇಂಧನ ಸಚಿವ ಕೆ.ಜೆ.ಜಾರ್ಜ್ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದರ ಪರಿಣಾಮ ವಿದ್ಯುತ್ ಸ್ವಾವಲಂಬನೆಯತ್ತ ರಾಜ್ಯಹೆಜ್ಜೆ ಹಾಕಿದೆ. ಗ್ರಾಹಕರಿಗೆ ವಿದ್ಯುತ್ ಪೂರೈಸುವತ್ತ ಗಮನ ಹರಿಸಲಾಗುತ್ತಿದೆ. ಅದಕ್ಕೆ ಬೇಕಾದ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ಇಂಜಿನಿಯರ್‌ಗಳು ಸಹಕರಿಸಬೇಕು ಎಂದರು. ಇಂಜಿನಿಯರ್‌ಗಳ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಮುಂದಿನ ಸಭೆಗಳಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೌರವ್ ಗುಪ್ತ ಹೇಳಿದರು.
ಸೆಸ್ಕ್ ಅಧ್ಯಕ್ಷ ಮತ್ತು ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಕುಸುಮ್-ಸಿ ಯೋಜನೆ ಮೂಲಕ ವಿದ್ಯುತ್ ಉತ್ಪಾದಿಸಿ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಹಗಲು ವೇಳೆ ನಿರಂತರವಾಗಿ 7 ಗಂಟೆ ವಿದ್ಯುತ್ ನೀಡಲು ಆದ್ಯತೆ ನೀಡಲಾಗಿದೆ.ವಿದ್ಯುತ್ ಸಾಗಣೆ ಮತ್ತು ಪೂರೈಕೆಯಲ್ಲಿ ಆಗುತ್ತಿರುವ ನಷ್ಟವನ್ನು ಇನ್ನಷ್ಟು ತಗ್ಗಿಸಬೇಕು. ವಿದ್ಯುತ್ ಅವಘಡಗಳನ್ನು ಶೂನ್ಯಕ್ಕೆ ಇಳಿಸಲು ಕಾರ್ಯಕ್ರಮ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ಮಾಡಿದರು.
ವಿಜ್ಞಾನಿ ರಾಮನಗೌಡ ವಿ.ನಾಡಗೌಡ ಉಪನ್ಯಾಸ ನೀಡಿದರು. ಬೆಸ್ಕಾಂ ಎಂಡಿ ಡಾ. ಎನ್. ಶಿವಶಂಕರ್, ಸಂಘದ ಅಧ್ಯಕ್ಷ ಸಿ.ಬಸವಣ್ಣ ಸೇರಿ ಇಂಜಿನಿಯರುಗಳು ಉಪಸ್ಥಿತರಿದ್ದರು.