Kundgol road accident student death
- ಚಲಿಸುತ್ತಿದ್ದ ಬಸ್ಸಿನ ಕಿಟಕಿಯಿಂದ ತಲೆ ಹೊರಗೆ ಹಾಕಿದಾಗ ಭೀಕರ ಅಪಘಾತ
- ಡಿಕ್ಕಿಯ ತೀವ್ರತೆಗೆ ತಲೆ ಕತ್ತರಿಸಲ್ಪಟ್ಟು ಸ್ಥಳದಲ್ಲೇ ಕೊನೆಯುಸಿರೆಳೆದ ಯುವಕ
- ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ನಿವಾಸಿ ಪಕ್ಕೀರೇಶ (17) ದುರ್ದೈವಿ.
ಧಾರವಾಡ: ಬಸ್ನಲ್ಲಿ ಪ್ರಯಾಣ ಮಾಡುವಾಗ ಐಟಿಐ ಯುವಕನೊಬ್ಬ ಗುಟ್ಕಾ ಉಗಿಯಲು ಕಿಟಕಿಯಿಂದ ಹೊರಕ್ಕೆ ತಲೆ ಹಾಕಿದ್ದ ವೇಳೇ ಟಿಪ್ಪರ್ ಡಿಕ್ಕಿಯಾಗಿ ರುಂಡವೇ ಕತ್ತರಿಸಿ ಹೋದ ಘಟನೆ ಕುಂದಗೋಳ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ.
ಮೃತ ವಿದ್ಯಾರ್ಥಿಯನ್ನು ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ನಿವಾಸಿ ಪಕ್ಕಿರೇಶ್ (17) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯಿಂದ ತನ್ನ ಗ್ರಾಮ ಶಿರೂರಿಗೆ ತೆರಳಲು ಲಕ್ಷ್ಮೇಶ್ವರದಿಂದ ಕೆಎಸ್ಆರ್ಟಿಸಿ ಬಸ್ ಹತ್ತಿದ್ದ ಎನ್ನಲಾಗಿದೆ.
ನಡೆದಿದ್ದೇನು?
ಪಕ್ಕಿರೇಶ್ ಬಸ್ನ ಹಿಂಬದಿ ಸೀಟ್ನಲ್ಲಿ ಕುಳಿತಿದ್ದ. ಬಸ್ಸು ಕುಂದಗೋಳ ಪಟ್ಟಣದ ಸಮೀಪಿಸುತ್ತಿದ್ದಂತೆ, ಪಕ್ಕೀರೇಶ ಗುಟ್ಕಾ ಉಗುಳುವ ಉದ್ದೇಶದಿಂದ ಬಸ್ಸಿನ ಕಿಟಕಿಯಿಂದ ತನ್ನ ತಲೆಯನ್ನು ಹೊರಗೆ ಚಾಚಿದ್ದಾರೆ. ಈ ಸಂದರ್ಭದಲ್ಲಿ ಅದೇ ದಿಕ್ಕಿನಲ್ಲಿ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಟ್ರಕ್ ಒಂದು ಅವರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ದೇಹವು ಸೀಟಿನಲ್ಲಿದ್ದು ರುಂಡ ರಸ್ತೆಗೆ ಬಿದ್ದಿತ್ತು. ಈ ಭೀಕರ ದೃಶ್ಯ ಕಂಡ ಜನರು ಭಯಭೀತರಾದರು. ತೀವ್ರ ರಕ್ತಸ್ರಾವದಿಂದಾಗಿ ಪಕ್ಕೀರೇಶ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಮಾಹಿತಿ ಸಿಗುತ್ತಲೇ ಕುಂದಗೋಳ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಟಿಪ್ಪರ್ ಚಾಲಕನ ವಿರುದ್ಧ ಕೇಸ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ. ಸದ್ಯ ಘಟನೆಯಿಂದ ಆತಂಕಕ್ಕೆ ಜನರು ಒಳಗಾಗಿದ್ದಾರೆ. ಇನ್ಮುಂದೆ ಬಸ್ನಿಂದ ತಲೆ ಅಥವಾ ಕೈ ಏನನ್ನು ಹೊರ ಹಾಕದಂತೆ ಜಾಗ್ರತೆವಹಿಸಲು ಅರಿವು ಮೂಡಿಸಲಾಗಿದೆ, (ಏಜೆನ್ಸೀಸ್).