Grants for Kannada medium schools 
ರಾಜ್ಯ

'ಕನ್ನಡ ಶಾಲೆಗಳಿಗೆ ಅನುದಾನ ಕೊಡಿ';ರಕ್ತದಲ್ಲಿ ಪತ್ರ ಬರೆದು ಶಿಕ್ಷಣ ಸಚಿವರಿಗೆ ಶಿಕ್ಷಕ ಮನವಿ, ಸರ್ಕಾರದ ವಿರುದ್ಧ ಬಿಜೆಪಿ ಕಿಡಿ..Shivamogga

ಪ್ರಮುಖ ಮುಖ್ಯಾಂಶಗಳು

  • 1995ರ ನಂತರ ನಿರ್ಮಾಣವಾದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಕೊಡಿ.

  • ರಕ್ತದಲ್ಲಿ ಪತ್ರ ಬರೆದು ಶಿಕ್ಷಣ ಸಚಿವರಿಗೆ ಮನವಿ ಮಾಡಿಕೊಂಡ ಸಾಲೇಶ್ವರ ವಿದ್ಯಾಸಂಸ್ಥೆಯ ಶಿಕ್ಷಕ ಪ್ರಶಾಂತ್​.

  • ಬೇಡಿಕೆ ಈಡೇರಿಸದಿದ್ದರೆ ಶಿಕ್ಷಕರೆಲ್ಲ ಒಟ್ಟುಗೂಡಿ ರಕ್ತದಲ್ಲಿ ಪತ್ರ ಬರೆಯುವುದಾಗಿ ಎಚ್ಚರಿಕೆ.

Grants for Kannada medium schools: 1995ರ ನಂತರ ನಿರ್ಮಾಣವಾದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಬೇಕು ಎಂದು ಶಿವಮೊಗ್ಗದ ಶಿಕ್ಷಕರೊಬ್ಬರು ತಮ್ಮ ಹಿಂಗೈ ರಕ್ತವನ್ನು ಬಳಸಿಕೊಂಡು, ಮನವಿ ಪತ್ರ ಬರೆದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಶಿವಮೊಗ್ಗದ ಶಿಕಾರಿಪುರದ ಸಾಲೇಶ್ವರ ವಿದ್ಯಾಸಂಸ್ಥೆಯ ಶಿಕ್ಷಕ ಪ್ರಶಾಂತ್​ ಎನ್ನುವವರು ಈ ಸಾಹಸಕ್ಕೆ ಕೈ ಹಾಕಿದವರು. ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಒತ್ತಾಯಿಸಿ, ತಮ್ಮ ರಕ್ತದಲ್ಲಿ ಪತ್ರ ಬರೆದು, ಬುಧವಾರ ಪ್ರಜಾ ಸೇವಾ ಆಂದೋಲನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಸಲ್ಲಿಸಲಿದ್ದಾರೆ.

ತನ್ನ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ

ಪ್ರಶಾಂತ್​ ಅವರು ಎಷ್ಟೇ ನೋವಾದರೂ ತಮ್ಮ ರಕ್ತವನ್ನು ಒಂದು ಸಿರಿಂಜ್​ಗೆ ಕಾಲು ಭಾಗದಷ್ಟು ವೈದ್ಯರ ಸಹಾಯದಿಂದ ತೆಗೆದುಕೊಂಡು ಸಿರಿಂಜ್​ ಸಹಾಯದಿಂದಲೇ 1995ರ ನಂತರ ಸ್ಥಾಪನೆಯಾದ ಕನ್ನಡ ಶಾಲೆಗಳನ್ನು ದಯವಿಟ್ಟು ಉಳಿಸಿ ಎಂದು ಎ4 ಬಿಳಿ ಕಾಗದದ ಮೇಲೆ ಬರೆದಿರುವುದು ಕಾಣಿಸುತ್ತದೆ. ಹಲವರು ಬಾರಿ ಅನುದಾನದ ಕುರಿತು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಅಂದು ಅನುದಾನದ ಬಗ್ಗೆ ಭರವಸೆ ನೀಡಿದ್ದರು. ಆದರೆ ಈಗ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಶಿಕ್ಷಕರಿಂದ ಎಚ್ಚರಿಕೆ

ಪ್ರಶಾಂತ್​ ಅವರು ತಮ್ಮ ರಕ್ತದಲ್ಲಿ ಬರೆದು ಬೇಡಿಕೆ ಮುಂದಿಟ್ಟಿದ್ದಾರೆ. ಶಿಕ್ಷಣ ಸಚಿವರು ಭರವಸೆ ಈಡೇರಿಸದೇ ಹೋದರೆ, ನವೆಂಬರ್​1ರಂದು ಶಿಕ್ಷಕರೆಲ್ಲರೂ ಸೇರಿ ರಕ್ತದಲ್ಲಿ ಪತ್ರ ಬರೆಯುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ಹಳೆಯ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ. ಶಿಕ್ಷಣ ಸಚಿವರು ಮಧ್ಯ ಪ್ರವೇಶಿಸಿ. ಸಂಸ್ಥೆಗೆ ಆರ್ಥಿಕ ನೆರವು ನೀಡಬೇಕು. ಶಿಕಾರಿಪುರದ ಸಾಲೇಶ್ವರ ವಿದ್ಯಾಸಂಸ್ಥೆಯ 31 ವರ್ಷದಿಂದ ಶಿಕ್ಷಣ ನೀಡುತ್ತಿದೆ. ಸದ್ಯ ಅನುದಾನ ಇಲ್ಲದೆ ಈ ಶಾಲೆ ಕೊರಗುತ್ತಿದೆ. ಈ ಬಗ್ಗೆ ಸಚಿವರು ಗಮನ ಹರಿಸಬೇಕು ಎಂದು ಬೇಡಿಕೊಂಡರು.

ಆರ್​ ಅಶೋಕ್​ ಏನಂದ್ರು?

ಕರ್ನಾಟಕದ ನೆಲ, ಜಲ, ಭಾಷೆ ಅಂದರೆ ಈ ನಾಡವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟೊಂದು ಅಸಡ್ಡೆ ಏಕೆ?ಎಂದು ವಿಪಕ್ಷ ನಾಯಕ ಆರ್​ ಅಶೋಕ್​ ಅವರು ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡದೆ ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ, ಕೊನೆಗೆ ಕನ್ನಡ ಶಿಕ್ಷಕರೊಬ್ಬರು ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆಯುವಂತಹ ದಯನೀಯ ಸ್ಥಿತಿ ನಿರ್ಮಾಣವಾಗಿರುವುದು ಪ್ರತಿಯೊಬ್ಬ ಕನ್ನಡಿಗನೂ ತಲೆತಗ್ಗಿಸುವಂತೆ ಮಾಡಿದೆ!
ರಕ್ತದಲ್ಲಿ ಪತ್ರ ಬರೆದ ಶಿಕ್ಷಕ: ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಿ ಎಂದು ಬೇಡಿಕೊಂಡು ಬೇಸತ್ತ ಶಿಕ್ಷಕ ಪ್ರಶಾಂತ್ ಎಂಬುವವರು, ಶಿಕ್ಷಣರಿಗೆ ತಮ್ಮ ರಕ್ತದಲ್ಲಿ ಪತ್ರ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ!

  • 1995ರ ನಂತರದ ಶಾಲೆಗಳಿಗೆ ಅನುದಾನ ಬಂದ್: 1995ರ ನಂತರ ಆರಂಭವಾಗಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ರಾಜ್ಯ ಸರ್ಕಾರ ಅನುದಾನವನ್ನೇ ಸಂಪೂರ್ಣವಾಗಿ ನಿಲ್ಲಿಸಿ, ಕನ್ನಡ ಶಾಲೆಗಳು ಮುಚ್ಚಿಹೋಗುವಂತೆ ಸಂಚು ರೂಪಿಸಿದೆ.

  • ಸುಳ್ಳು ಭರವಸೆ, ಹುಸಿ ಆಶ್ವಾಸನೆ: ಬೆಂಗಳೂರಿನಲ್ಲಿ ಶಿಕ್ಷಕರು ಧರಣಿ ನಡೆಸಿದಾಗ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿ, ಬಳಿಕ ಯಾವುದೇ ಕ್ರಮ ಕೈಗೊಳ್ಳದೆ ಶಿಕ್ಷಣ ಇಲಾಖೆ ಬೆನ್ನಿಗೆ ಚೂರಿ ಹಾಕಿದೆ.

  • ಖಾಲಿ ಮಾತು, ಶೂನ್ಯ ಸಾಧನೆ: ವೇದಿಕೆಯ ಮೇಲೆ ಕನ್ನಡದ ಬಗ್ಗೆ ದೊಡ್ಡ ಮಾತುಗಳನ್ನಾಡುವ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ಈಗ ಕನ್ನಡ ಶಾಲೆಗಳಿಗೆ ಅನುದಾನ ನೀಡದೆ ಅವುಗಳ 'ರಕ್ತವನ್ನೇ' ಹೀರುತ್ತಿದ್ದಾರೆ!

ನವೆಂಬರ್ 1ರ ಒಳಗೆ ಈ ಬೇಡಿಕೆ ಈಡೇರದಿದ್ದರೆ ರಾಜ್ಯದ ಉಳಿದ ಕನ್ನಡ ಶಿಕ್ಷಕರೂ ರಕ್ತದಲ್ಲಿ ಪತ್ರ ಬರೆಯುವುದಾಗಿ ಎಚ್ಚರಿಸಿದ್ದಾರೆ. ಕನ್ನಡ ನಾಡಿನಲ್ಲಿ ಕನ್ನಡ ಶಾಲೆಗಳನ್ನು ರಕ್ಷಿಸಲು ಶಿಕ್ಷಕರು ರಕ್ತ ಹರಿಸಬೇಕಾದ ಸ್ಥಿತಿ ಬಂದಿರುವುದು ಸಿಎಂ ಡಿಕೆ ಶಿವಕುಮಾರ್​ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಕಪ್ಪು ಚುಕ್ಕೆ.
ಮುಖ್ಯಮಂತ್ರಿಗಳೇ, ಕೇವಲ ಭಾಷಣಗಳಲ್ಲಿ ಕನ್ನಡ ಪ್ರೇಮ ಮೆರೆಯುವುದನ್ನು ಬಿಟ್ಟು, ತಕ್ಷಣವೇ 1995ರ ನಂತರದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಿ! ಇಲ್ಲದಿದ್ದರೆ ಈ 'ಕನ್ನಡ ವಿರೋಧಿ' ಕಾಂಗ್ರೆಸ್ ಸರ್ಕಾರವನ್ನು ಕನ್ನಡಿಗರು ಕ್ಷಮಿಸುವುದಿಲ್ಲ ಎಂದು ಬರೆದುಕೊಂಡು ಕರ್ನಾಟಕ ವಿಧಾನಸಭೆ ವಿಪಕ್ಷ ನಾಯಕ ಆರ್​ ಅಶೋಕ್​ ಕಿಡಿಕಾರಿದ್ದಾರೆ(ಏಜೆನ್ಸೀಸ್).