ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ: ಶೇ. 94.1 ಮಕ್ಕಳು ಉತ್ತೀರ್ಣ, ದಕ್ಷಿಣ ಕನ್ನಡ ಪ್ರಥಮ, ಕಲಬುರಗಿಗೆ ಕೊನೆ ಸ್ಥಾನ! Karnataka SSLC Result 2026  
ರಾಜ್ಯ

ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ: ಶೇ. 94.1 ಮಕ್ಕಳು ಉತ್ತೀರ್ಣ, ದಕ್ಷಿಣ ಕನ್ನಡ ಪ್ರಥಮ, ಕಲಬುರಗಿಗೆ ಕೊನೆ ಸ್ಥಾನ! Karnataka SSLC Result 2026

ಪ್ರಮುಖ ಮುಖ್ಯಾಂಶಗಳು

  • 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ -1ರ ಫಲಿತಾಂಶ ಪ್ರಕಟ
  • ಈ ಬಾರಿ ಒಟ್ಟಾರೆ ಶೇಕಡಾ 94.1 ವಿದ್ಯಾರ್ಥಿಗಳು ತೇರ್ಗಡೆ
  • ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಫಲಿತಾಂಶ ಬಂದಿದೆ
  • ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ ಕಲಬುರಗಿ ಜಿಲ್ಲೆಗೆ ಕೊನೇ ಸ್ಥಾನ
Karnataka SSLC Result 2026 : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು (ಏಪ್ರಿಲ್​​ 23 ) ಎಸ್‌ಎಸ್‌ಎಲ್‌ಸಿ ಪರೀಕ್ಷೆ -1ರ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟಾರೆ ಶೇ. 94.1 ಮಕ್ಕಳು ತೇರ್ಗಡೆಯಾಗಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ 98.4 ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ ಜಿಲ್ಲೆ 85.06 ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಫಲಿತಾಂಶ ಬಂದಿದೆ.
ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಇಂದು ಬೆಳಗ್ಗೆ 12ಕ್ಕೆ ಮಂಡಳಿಯ ಅಧಿಕಾರಿಗಳ ಜತೆ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶವನ್ನು ಪ್ರಕಟಿಸಿದರು. ಮಂಡಳಿಯ ವೆಬ್‌ಸೈಟ್ http://karresults.nic.inನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ, ಕರ್ನಾಟಕ ಒನ್ ಮೊಬೈಲ್ ಆೃಪ್ ಮೂಲಕವೂ ಪಡೆಯಬಹುದು. ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್/ಎಸ್‌ಎಂಎಸ್ ಮೂಲಕವೂ ಫಲಿತಾಂಶದ ಮಾಹಿತಿಯನ್ನು ಮಂಡಳಿಯಿಂದ ರವಾನಿಸಲಾಗಿದೆ.

ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯ

ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು ಡಿಜಿಲಾಕರ್‌ನಲ್ಲಿಯೂ ಫಲಿತಾಂಶ ಪ್ರಕಟವಾದ ಕೂಡಲೇ ಡೌನ್‌ಲೋಡ್ ಮಾಡಿಕೊಳ್ಳಬಹುದು. ಡಿಜಿಲಾಕರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು https://www.digilocker.gov.in ಲಿಂಕ್ ಬಳಸಬಹುದು. ಹಾಗೆಯೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೇಗೆ ಡಿಜಿಲಾಕರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಲು ಈ ವೀಡಿಯೋ ಲಿಂಕ್ https://tinyurl.com/mw84wmh9 ಮೇಲೆ ಕ್ಲಿಕ್ಕಿಸಿ.
ಅಂದಹಾಗೆ, ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 7,70,209 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 7,24,794 ವಿದ್ಯಾರ್ಥಿಗಳು ಪಾಸ್​ ಆಗಿದ್ದು, 94.1 ರಷ್ಟು ಫಲಿತಾಂಶ ಬಂದಿದೆ.
ಕರ್ನಾಟಕದಾದ್ಯಂತ 3,77,287 ಹುಡುಗರು ಮತ್ತು 3,92,922 ಹುಡುಗಿಯರು ಪರೀಕ್ಷೆಗೆ ದಾಖಲಾಗಿದ್ದರು. ಶೇ. 94.1 ಫಲಿತಾಂಶದೊಂದಿಗೆ ಈ ಬಾರಿಯೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಗಂಡು ಮಕ್ಕಳು 80.04 ರಷ್ಟು ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಏಪ್ರಿಲ್​ 26 ಕೊನೇ ದಿನವಾಗಿದ್ದು, ಶುಲ್ಕ ಪಾವತಿಗೆ ಏಪ್ರಿಲ್​ 28 ಅಂತಿಮ ದಿನವಾಗಿದೆ. ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 4 ರವರೆಗೆ ಅವಕಾಶ ನೀಡಲಾಗಿದೆ.

ಈ ಬಾರಿ ಮೂರನೇ ಬಾರಿ ಪರೀಕ್ಷೆ ಇರುವುದಿಲ್ಲ

ಎಸ್ಸೆಸ್ಸೆಲ್ಸಿ 2026ನೇ ಸಾಲಿನ ಎರಡನೇ ಪರೀಕ್ಷೆ ಮೇ 18 ರಿಂದ ಮೇ 25ರ ವರೆಗೆ ನಡೆಯಲಿದೆ. ಯಾವೆಲ್ಲ ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೋ ಅವರಿಗೆ ಮತ್ತೊಮ್ಮೆ ಪರೀಕ್ಷೆಯಲು ಅನುಕೂಲವಾಗಲಿದೆ. ಇನ್ನು ಕಳೆದ ಬಾರಿಯಂತೆ ಈ ಬಾರಿ 3ನೇ ಪರೀಕ್ಷೆ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.