ಕುರ್ಚಿ ಬದಲಾವಣೆ ಕ್ಲೈಮ್ಯಾಕ್ಸ್: ಮತ್ತಷ್ಟು ಸಸ್ಪೆನ್ಸ್ ಹೆಚ್ಚಿಸಿದ ಸಿದ್ದರಾಮಯ್ಯ ಹೇಳಿಕೆ, ಒಬಿಸಿ ದಾಳ ಉರುಳಿಸಿದ ಬಿಜೆಪಿ! CM Siddaramaiah
- ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅಚ್ಚರಿ ನಡೆ
- ಸಿಎಂ ಗಾದಿ ಬದಲಾವಣೆಯ ಬಿಸಿಬಿಸಿ ಚರ್ಚೆಗಳ ಕುರಿತು ಅತ್ಯಂತ ಜಾಗರೂಕತೆಯಿಂದ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ
- ನಾನು ಈ ಬಗ್ಗೆ ನಾಳೆ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ ಸಿದ್ದು
- ನಾಳೆ ಬ್ರೇಕ್ಫಾಸ್ಟ್ ಮೀಟಿಂಗ್ ಬಳಿಕ ಪತ್ರಿಕಾಗೋಷ್ಠಿಯಲ್ಲಿ ರಾಜೀನಾಮೆ ಘೋಷಣೆ ಮಾಡುವ ಸಾಧ್ಯತೆ ಇದೆ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ( CM Siddaramaiah ) ಅಚ್ಚರಿಯ ನಡೆ ಇಟ್ಟಿದ್ದಾರೆ! ಹೈಕಮಾಂಡ್ ನಾಯಕರೊಂದಿಗೆ ಸುದೀರ್ಘ ಸರಣಿ ಸಭೆಗಳನ್ನು ಮುಗಿಸಿರುವ ಮುಖ್ಯಮಂತ್ರಿಗಳು, ತಮಗೆ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿದೆ ಎನ್ನಲಾದ ಅಧಿಕಾರ ಹಸ್ತಾಂತರದ ಕಸರತ್ತು ಹಾಗೂ ಸಿಎಂ ಗಾದಿ ಬದಲಾವಣೆಯ ಬಿಸಿಬಿಸಿ ಚರ್ಚೆಗಳ ಕುರಿತು ಅತ್ಯಂತ ಜಾಗರೂಕತೆಯಿಂದ ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ರಾಜಕಾರಣದ ಈ ಮಹತ್ವದ ಬೆಳವಣಿಗೆಗಳ ಕುರಿತು ಎದ್ದಿರುವ ವದಂತಿಗಳ ಬಗ್ಗೆ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳು ಪ್ರಶ್ನಿಸಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯಕ್ಕೆ ಯಾವುದೇ ನೇರ ಉತ್ತರ ನೀಡದೆ ಜಾಣ್ಮೆಯ ಮೌನ ವಹಿಸಿದ್ದಾರೆ. "ನಾನು ಈ ಬಗ್ಗೆ ನಾಳೆ ಮಾತನಾಡುತ್ತೇನೆ" ಎಂದು ಹೇಳುವ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಹೀಗಾಗಿ, ಇದೀಗ ಎಲ್ಲರ ದೃಷ್ಟಿ ನಾಳಿನ ಬ್ರೇಕ್ಫಾಸ್ಟ್ ಮೀಟಿಂಗ್ನತ್ತ ನೆಟ್ಟಿದೆ. ಅಲ್ಲದೆ, ರಾಜ್ಯಪಾಲರ ಬಳಿ ಸಿಎಂ ಸಿದ್ದರಾಮಯ್ಯ ಸಮಯ ಕೇಳಿದ್ದಾರೆ ಎಂಬ ವರದಿ ಇದ್ದು, ಕುರ್ಚಿ ಕದನಕ್ಕೆ ನಾಳೆ ತೆರೆಬೀಳುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ನೋಡಿದರೆ, ಉಭಯ ನಾಯಕರ ನಡುವಿನ ಅಧಿಕಾರ ಹಂಚಿಕೆ ಸೂತ್ರ ಮತ್ತು ನಾಯಕತ್ವ ಬದಲಾವಣೆಯ ಕುರಿತಾದ ಆಂತರಿಕ ಭಿನ್ನಾಭಿಪ್ರಾಯಗಳು ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಅದು ನಿರ್ಣಾಯಕ ಹಂತಕ್ಕೆ ತಲುಪಿದಂತೆ ಕಾಣುತ್ತಿದೆ. ನಾಳೆ ಬ್ರೇಕ್ಫಾಸ್ಟ್ ಮೀಟಿಂಗ್ ಬಳಿಕ ಪತ್ರಿಕಾಗೋಷ್ಠಿಯಲ್ಲಿ ರಾಜೀನಾಮೆ ಘೋಷಣೆ ಮಾಡುವ ಸಾಧ್ಯತೆ ಇದೆ.
ವಿಶ್ವಾಸನೀಯ ಮೂಲಗಳು ಮತ್ತು ಪಿಟಿಐ ವರದಿಯ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಜವಾಬ್ದಾರಿ ನೀಡಿ, ರಾಜ್ಯಸಭಾ ಸ್ಥಾನದ ಆಫರ್ ಅನ್ನು ಹೈಕಮಾಂಡ್ ಮುಂದಿಟ್ಟಿದೆ ಎನ್ನಲಾಗಿದೆ. ಈ ಮೂಲಕ ಪ್ರಸ್ತುತ ಸರ್ಕಾರದ ಉಳಿದ ಅವಧಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಹಾದಿ ಸುಗಮಗೊಳಿಸುವ ನಿಟ್ಟಿನಲ್ಲಿ ದಿಲ್ಲಿಯಲ್ಲಿ ಕಸರತ್ತು ನಡೆದಿದೆ. ಪಕ್ಷದ ಹೈಕಮಾಂಡ್ ಅಧಿಕೃತವಾಗಿ ಇದನ್ನು ನಿರಾಕರಿಸುತ್ತಿದ್ದರೂ, ಮುಂಬರುವ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗುವ ದಟ್ಟ ಮುನ್ಸೂಚನೆಗಳು ಸಿಗುತ್ತಿವೆ. ಇನ್ನೂ ಮುಖ್ಯಮಂತ್ರಿ ಹುದ್ದೆಯ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ನೀಡಿರುವ ಈ ಪ್ರಸ್ತಾಪವನ್ನು ಸಿಎಂ ಸಿದ್ದರಾಮಯ್ಯ ಅವರು ಇನ್ನೂ ಒಪ್ಪಿಕೊಂಡಿಲ್ಲ ಎಂದು ವರದಿಗಳು ತಿಳಿಸಿವೆ.
ಇನ್ನು ದಿಲ್ಲಿಯಲ್ಲಿ ಕಾಂಗ್ರೆಸ್ ಉನ್ನತ ನಾಯಕರೊಂದಿಗೆ ಸಿಎಂ ನಡೆಸಿದ ಸುದೀರ್ಘ ಸಭೆಯ ಆಂತರಿಕ ಚರ್ಚೆಗಳ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ ಎಂದು ರಾಜ್ಯ ಗೃಹ ಸಚಿವರು ಹೇಳಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೆ, ಪ್ರಸ್ತುತ ಉದ್ಭವಿಸಿರುವ ಗೊಂದಲ ಮತ್ತು ವದಂತಿಗಳಿಗೆ ತೆರೆ ಎಳೆಯಲು ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಬೆಂಗಳೂರು ಭೇಟಿಯ ಬಳಿಕವಷ್ಟೇ ಸ್ಪಷ್ಟತೆ ಸಿಗಲಿದೆ ಎಂದು ಗೃಹ ಸಚಿವರು ಆಶಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ದೀರ್ಘಾವಧಿಯ ಪೈಪೋಟಿಗೆ ಸೌಹಾರ್ದಯುತ ಮುಕ್ತಾಯ ಹಾಡಲು ಕಾಂಗ್ರೆಸ್ ವರಿಷ್ಠರು ಇಡೀ ದಿನ ಉಭಯ ನಾಯಕರೊಂದಿಗೆ ಸುದೀರ್ಘ ಸಂವಾದ ನಡೆಸಿ ಬಿಕ್ಕಟ್ಟು ಶಮನಕ್ಕೆ ತೀವ್ರ ಪ್ರಯತ್ನ ನಡೆಸಿದ್ದಾರೆ.
ಬಿಜೆಪಿ ವಾಗ್ದಾಳಿ
ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ವಿವಾದದ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ ಅದರ ನೇರ ಪರಿಣಾಮ ಪಕ್ಷದ ಮೇಲಾಗುತ್ತದೆ ಎಂದು ಎಚ್ಚರಿಸಿರುವ ಅವರು, ಹಿಂದುಳಿದ ವರ್ಗದ (OBC) ಪ್ರಭಾವಿ ನಾಯಕರನ್ನು ಹುದ್ದೆಯಿಂದ ಕೆಳಗಿಳಿಸಿದರೆ ಆ ಸಮುದಾಯದ ಜನರಿಗೆ ತೀವ್ರ ಅಸಮಾಧಾನ ಉಂಟಾಗಲಿದೆ, ಇದು ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆ ತರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ಸದ್ಯ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಡಿ.ಕೆ. ಶಿವಕುಮಾರ್ ಅವರ ಬಳಿಯೇನು ಮಂತ್ರದಂಡವಿಲ್ಲ, ಸಿದ್ದರಾಮಯ್ಯ ಕಾಲದಲ್ಲಿ ಆರಂಭವಾದ ಆಡಳಿತದ ಕುಸಿತ ಶಿವಕುಮಾರ್ ಬಂದರೂ ಮುಂದುವರಿಯಲಿದ್ದು, ಇವರ ಅವಧಿ ಮುಗಿಯುವ ಹೊತ್ತಿಗೆ ಇಡೀ ರಾಜ್ಯದ ಸ್ಥಿತಿ ದಯನೀಯವಾಗಲಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಕೇವಲ ಅಧಿಕಾರ ದಾಹಿಗಳಿದ್ದು, ಅವರಿಗೆ ವಿಪಕ್ಷಗಳ ಹಾಗೂ ಸಾರ್ವಜನಿಕರ ಸಂಕಷ್ಟಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ, ಈ ಸ್ವಾರ್ಥ ರಾಜಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಅವರು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಬೊಮ್ಮಾಯಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು 2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಮುನಿಸು ಶಮನಗೊಳಿಸಲು ಹೈಕಮಾಂಡ್ ಹಲವು ಬಾರಿ ಹರಸಾಹಸ ಪಟ್ಟಿದೆ. ಸರ್ಕಾರ ರಚನೆ ವೇಳೆಯೇ ಅಧಿಕಾರ ಹಂಚಿಕೆ (ರೊಟೇಷನಲ್ ಸಿಎಂ) ಸೂತ್ರಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ಶಿವಕುಮಾರ್ ಬೆಂಬಲಿಗರು ಸತತವಾಗಿ ಹೇಳಿಕೊಳ್ಳುತ್ತಾ ಬಂದಿದ್ದರೂ, ಕಾಂಗ್ರೆಸ್ ವರಿಷ್ಠರು ಮಾತ್ರ ಈವರೆಗೂ ಅಂತಹ ಯಾವುದೇ ಸೂತ್ರವನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲ.