Muslim Community | ಕಾಂಗ್ರೆಸ್ ವರಿಷ್ಠರಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕದ ಮುಸ್ಲಿಂ ಒಕ್ಕೂಟ
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ನಿರ್ಣಾಯಕ ಬೆಂಬಲ ನೀಡಿದ ಮುಸ್ಲಿಂ ಸಮುದಾಯವನ್ನು ಪಕ್ಷವು ಸತತವಾಗಿ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ರಾಜ್ಯದ ಪ್ರಮುಖ ಮುಸ್ಲಿಂ ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರು ಕಾಂಗ್ರೆಸ್ ವರಿಷ್ಠರಿಗೆ ಜಂಟಿ ಪತ್ರ ಬರೆದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರಿಗೆ ರವಾನಿಸಿರುವ ಈ ಪತ್ರದಲ್ಲಿ, ಸಮುದಾಯ ಎದುರಿಸುತ್ತಿರುವ ಅಸಮಾಧಾನ ಮತ್ತು ನೋವನ್ನು ಅತ್ಯಂತ ಕಠಿಣ ಪದಗಳಲ್ಲಿ ವ್ಯಕ್ತಪಡಿಸಲಾಗಿದೆ.
2023ರ ಚುನಾವಣೆಯಲ್ಲಿ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೂ, ಅಧಿಕಾರಕ್ಕೆ ಬಂದ ಬಳಿಕ ಆಡಳಿತ ಮತ್ತು ನೇಮಕಾತಿಗಳಲ್ಲಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡದೆ ವಂಚಿಸಲಾಗಿದೆ ಎಂಬುದು ಈ ಒಕ್ಕೂಟಗಳ ಪ್ರಮುಖ ದೂರು. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿ ಸಮುದಾಯಕ್ಕೆ ತೀವ್ರ ಆಘಾತ ನೀಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಮ್ಮ ಸಮುದಾಯಕ್ಕೆ ನ್ಯಾಯಯುತವಾಗಿ ಸಿಗಬೇಕಿದ್ದ ಟಿಕೆಟ್ ಅನ್ನು ನಿರಾಕರಿಸಿದ್ದಷ್ಟೇ ಅಲ್ಲದೆ, ಟಿಕೆಟ್ ಕೇಳಿದ್ದನ್ನೇ ಅಪರಾಧ ಎಂಬಂತೆ ಬಿಂಬಿಸಿದ್ದಾರೆ ಎಂದು ಮುಖಂಡರು ದೂರಿದ್ದಾರೆ. ಮತದಾನ ಮುಗಿದ ಕೂಡಲೇ ದಶಕಗಳಿಂದ ಪಕ್ಷಕ್ಕಾಗಿ ದುಡಿದ ಹಿರಿಯ ಮುಸ್ಲಿಂ ನಾಯಕರನ್ನು ಯಾವುದೇ ಕಾರಣ ನೀಡದೆ ಏಕಾಏಕಿ ವಜಾ ಮಾಡಿರುವುದು ಸಮುದಾಯದ ಮೇಲೆ ಹಗೆ ಸಾಧಿಸುವಂತಿದೆ ಮತ್ತು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇತರ ಪ್ರಬಲ ಸಮುದಾಯಗಳ ನಾಯಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದಾಗ ಸುಮ್ಮನಿದ್ದ ಕಾಂಗ್ರೆಸ್, ಮುಸ್ಲಿಂ ನಾಯಕರ ಮೇಲೆ ಮಾತ್ರ ತರಾತುರಿಯಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಶಿಸ್ತುಕ್ರಮದ ಹೆಸರಿನಲ್ಲಿ ನಡೆಯುತ್ತಿರುವ ತಾರತಮ್ಯ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ.
ರಕ್ಷಣೆ ಎಂಬುದು ಸಂವಿಧಾನ ನೀಡಿರುವ ಹಕ್ಕು
ಮುಸ್ಲಿಮರಿಗೆ ಕಾಂಗ್ರೆಸ್ ನೀಡಿದಷ್ಟು ರಕ್ಷಣೆ ಬೇರೆ ಯಾರೂ ನೀಡಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷರ ಹೇಳಿಕೆಯನ್ನು ಒಕ್ಕೂಟಗಳು ತೀವ್ರವಾಗಿ ಖಂಡಿಸಿದ್ದು, ರಕ್ಷಣೆ ಎಂಬುದು ಸಂವಿಧಾನ ನೀಡಿರುವ ಹಕ್ಕೇ ಹೊರತು ಅದು ಯಾವುದೇ ಪಕ್ಷ ಸಮುದಾಯಕ್ಕೆ ನೀಡುವ ಕೊಡುಗೆ ಅಥವಾ ಉಪಕಾರವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮುಸ್ಲಿಮರ ಬೆಂಬಲವನ್ನು ದೌರ್ಬಲ್ಯ ಎಂದು ಭಾವಿಸಿದರೆ ಅದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಭಾರಿ ರಾಜಕೀಯ ಹೊಡೆತ ನೀಡಲಿದೆ ಎಂಬ ಎಚ್ಚರಿಕೆಯನ್ನು ಸಹ ಮುಖಂಡರು ನೀಡಿದ್ದಾರೆ.
ಸರಕಾರ ಮತ್ತು ಸಂಘಟನೆಯ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಹುದ್ದೆಗಳಲ್ಲಿ ಸಮುದಾಯಕ್ಕೆ ಸ್ಥಾನ ನೀಡಬೇಕು ಮತ್ತು ಚುನಾವಣಾ ಭರವಸೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿರುವ ಈ ಪತ್ರಕ್ಕೆ ರಾಜ್ಯದ ವಿವಿಧ ಭಾಗಗಳ ಸುಮಾರು 30ಕ್ಕೂ ಹೆಚ್ಚು ಪ್ರಮುಖ ಮುಸ್ಲಿಂ ಸಂಘಟನೆಗಳ ಅಧ್ಯಕ್ಷರು ಮತ್ತು ಧಾರ್ಮಿಕ ಗುರುಗಳು ಸಹಿ ಹಾಕಿದ್ದಾರೆ.