ಶಹಾಪುರದಲ್ಲಿ ಕಾಂಗ್ರೆಸ್​ ಕಚೇರಿ ನಿರ್ಮಾಣಕ್ಕೆ ಶಾಸಕ ಶರಣಬಸಪ್ಪ ದರ್ಶನಾಪುರ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು. ಸಂಸದ ಕುಮಾರ ನಾಯಕ, ಪಕ್ಷದ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ, ಶಿವುಮಂತಪ್ಪ ಸಾಹು, ಬಸನಗೌಡ ಯಾಳಗಿ, ಚಂದ್ರಶೇಖರ ಆರಬೋಳ, ಗುಂಡಪ್ಪ ತುಂಬಗಿ ಇತರರಿದ್ದರು. 
ರಾಜ್ಯ

ಗ್ಯಾರಂಟಿ ವಿಷಯದಲ್ಲಿ ಕರ್ನಾಟಕ ಮಾದರಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶರಣಬಸಪ್ಪ ದರ್ಶನಾಪುರ ಹೆಮ್ಮೆ
  • ಶಹಾಪುರದಲ್ಲಿ ಕಾಂಗ್ರೆಸ್​ ಕಚೇರಿ ನಿರ್ಮಾಣಕ್ಕೆ ಭೂಮಿಪೂಜೆ
ಶಹಾಪುರ: ಮತಕ್ಷೇತ್ರದಲ್ಲಿ 135 ಕೋಟಿ ರೂ. ಅನುದಾನದಲ್ಲಿ 13 ಪ್ರಮುಖ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದ ವೈಷ್ಣವಿ ಲೇಔಟ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್​ ಪದ ಕಚೇರಿ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, 10 ಕೋಟಿ ರೂ. ವೆಚ್ಚದ ಕ್ರೀಡಾ ಶಾಲೆ, ಕಾರ್ಮಿಕ ವಸತಿ ಶಾಲೆ(25 ಕೋಟಿ), ಅಂಬೇಡ್ಕರ್​ ವಸತಿ ಶಾಲೆ(30 ಕೋಟಿ), ತಾಯಿ-ಮಕ್ಕಳ ಆಸ್ಪತ್ರೆ(30 ಕೋಟಿ), ಮೈನಾರಿಟಿ ಶಾಲೆ(15 ಕೋಟಿ), ಕನಕ ಭವನ (2.30 ಕೋಟಿ), ವಾಲ್ಮೀಕಿ ಭವನ(1.50 ಕೋಟಿ), ವೀರಶೈವ ಭವನ(2.40 ಕೋಟಿ), ಪ್ರಜಾಸೌಧ (15 ಕೋಟಿ), ಶಾದಿ ಮಹಲ್​ (3 ಕೋಟಿ), ಅಂಬಿಗರ ಚೌಡಯ್ಯ ಭವನ (3 ಕೋಟಿ) ಹಾಗೂ ಕೆಂಭಾವಿಯಲ್ಲಿ ಮೌಲಾನ ಆಜಾದ್​ ಶಾಲೆ ನಿರ್ಮಿಸಲಾಗುತ್ತಿದೆ. ಈ ಎಲ್ಲದಕ್ಕೂ ಅನುದಾನ ಬಿಡುಗಡೆ ಜತೆ ಟೆಂಡರ್​ ಸಹ ಆಗಿದೆ ಎಂದು ತಿಳಿಸಿದರು.
1.65 ಕೋಟಿ ಮೌಲ್ಯದ ಸಿಎ ನಿವೇಶನವನ್ನು ಸರ್ಕಾರದ ಅನುಮೋದನೆಯೊಂದಿಗೆ 16 ಲಕ್ಷ ರೂ.ಗೆ ಪಕ್ಕೆ ದೊರೆತಿದೆ. ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ 2027ರ ಜ.26ರಂದು ಉದ್ಘಾಟಿಸುವ ಗುರಿ ಹೊಂದಲಾಗಿದೆ. ಎಸ್​ಐಆರ್​ ವಿರುದ್ಧ ಇಂಡಿಯಾ ಒಕ್ಕೂಟ ಆರಂಭದಿಂದಲೂ ಹೋರಾಟ ನಡೆಸುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಯಾವೊಬ್ಬ ಅರ್ಹ ಮತದಾರ ವಂಚಿತರಾಗದಂತೆ ಕಾರ್ಯಕರ್ತರು ಬೂತ್​ ಮಟ್ಟದಲ್ಲಿ ಕಾರ್ಯನಿರ್ವಹಿಸಿ ಅರ್ಜಿ ಸಲ್ಲಿಸಲು ಸಹಕರಿಸಬೇಕು ಎಂದು ಹೇಳಿದರು.
2028ರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲಿದೆ. ಗ್ಯಾರಂಟಿ ವಿಷಯದಲ್ಲಿ ಕರ್ನಾಟಕ ಮಾದರಿಯಾಗಿದ್ದು, ಟೀಕೆ ಮಾಡಿದವರಿಂದಲೇ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಿವೆ. ಬಡವರಿಗೆ ಕಾಂಗ್ರೆಸ್ಸೇ ಆಧಾರ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ, ಸಂಸದ ಜಿ.ಕುಮಾರ ನಾಯಕ ಮಾತನಾಡಿದರು. ಬ್ಲಾಕ್​ ಕಾಂಗ್ರೆಸ್​ ಅಧ್ಯ ಶಿವುಮಂತಪ್ಪ ಸಾಹು ಸ್ವಾಗತಿಸಿದರು. ಕೆಂಭಾವಿ ಬ್ಲಾಕ್​ ಅಧ್ಯಕ್ಷ ಬಸನಗೌಡ ಯಾಳಗಿ, ಚಂದ್ರಶೇಖರ ಆರಬೋಳ, ಗುಂಡಪ್ಪ ತುಂಬಗಿ ಇತರರಿದ್ದರು.
ಮತದಾರರ ಹಕ್ಕು ರಕ್ಷಣೆ ಕೆಲಸ ಮಾಡಿ
ಕಾರ್ಯಕ್ರಮದಲ್ಲಿ ಸಂಸದ ಜಿ. ಕುಮಾರ ನಾಯಕ ಮಾತನಾಡಿ, ಪ್ರತಿಯೊಂದು ತಾಲೂಕಿನಲ್ಲಿ ಕಾಂಗ್ರೆಸ್​ ಸ್ವಂತ ಕಚೇರಿ ಹೊಂದುವ ಅಗತ್ಯವಿದೆ. ಎಸ್​ಐಆರ್​ ಬಗ್ಗೆ ಕಾರ್ಯಕರ್ತರು ಹೆಚ್ಚಿನ ಗಮನಹರಿಸಿ ಮತದಾರರ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಪಶ್ಚಿಮ ಬಂಗಾಳದಲ್ಲಿ ಲಾಕ್ಷಾಂತರ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ಡಿಲೀಟ್​ ಮಾಡಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ ಮತದಾರರ ಹಕ್ಕುಗಳ ರಣೆ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ ಎಂದರು.
ಮೋದಿಗೆ ಅನ್ವಯಿಸಲಿದೆಯೇ 75 ವರ್ಷದ ನಿಯಮ?
75 ವರ್ಷದ ನಿಯಮ ಹೇಳಿ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದ ಬಿಜೆಪಿ, ಅದೇ ನಿಯಮವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಅನ್ವಯಿಸುವಂತೆ ಮಾಡುತ್ತದೆಯೇ ಪ್ರಶ್ನಿಸಿದ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಕೇಂದ್ರದಲ್ಲಿ ಬಿಜೆಪಿಯ 13 ವರ್ಷದ ಆಡಳಿತದಲ್ಲಿ ಬಡವರು, ರೈತರು, ಯುವಕರು ಹಾಗೂ ಹಿಂದುಳಿದ ವರ್ಗಗಳಿಗೆ ಏನು ಒಳಿತು ಮಾಡಿದೆ ಎಂಬುದನ್ನು ಜನತೆಗೆ ತಿಳಿಸಬೇಕು. ಜಾತಿ&ಜಾತಿ, ಧರ್ಮ&ಧರ್ಮಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸುವಂಥ ರಾಜಕಾರಣ ದೇಶಕ್ಕೆ ಒಳ್ಳೆಯದಲ್ಲ. ಪ್ರಧಾನಿ ಮೋದಿ ಕೇವಲ ಭಾಷಣ ಮಾಡಿದರೆ ಸಾಲದು, ಜನರ ಬದುಕಿಗೆ ಸ್ಪರ್ಶಿಸುವ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.
"

ಗ್ಯಾರಂಟಿಗಳನ್ನು ನೀಡುವ ಮೂಲಕ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂಬ ವಿಪಕ್ಷದವರ ಮಾತುಗಳಲ್ಲಿ ಅರ್ಥವಿಲ್ಲ. ಸರ್ಕಾರ ಸಂಪತ್ಭರಿತವಾಗಿದೆ ಎಂಬುದಕ್ಕೆ ಶಹಾಪುರ ಮತಕ್ಷೇತ್ರದಲ್ಲಿ ಮೂರು ವರ್ಷಗಳಿಂದ ನಿರಂತರ ನಡೆದಿರುವ ಅಭಿವೃದ್ಧಿ ಕೆಲಸಗಳೇ ಸಾಕ್ಷಿಯಾಗಿವೆ. ಟೀಕಿಸುವವರು ಇದನ್ನು ಗಮನಿಸಲಿ

— > ಶರಣಸಪ್ಪ ದರ್ಶನಾಪುರ ಶಾಸಕ