ಬೆಂಗಳೂರು: ನಿಯಮಗಳ ಪ್ರಕಾರ, ಇ20 ಪೆಟ್ರೋಲ್ನಲ್ಲಿ ಶೇ.20ರಷ್ಟು ಎಥೆನಾಲ್ ಅನ್ನು ಮಾತ್ರ ಮಿಶ್ರಣ ಮಾಡಬೇಕು. ದೇಶಾದ್ಯಂತ ಈ ಕುರಿತು ಭಾರಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಪ್ರಯೋಗಾಲಯ ವರದಿಯೊಂದನ್ನು ಮುಂದಿಟ್ಟು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರವು ಇ20 ಪೆಟ್ರೋಲ್ಗೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಪೆಟ್ರೋಲ್ನಲ್ಲಿ ಶೇ.20ರಷ್ಟು ಎಥೆನಾಲ್ ಅನ್ನು ಬೆರೆಸಬೇಕಿದ್ದರೂ, ಕೆಲವು ತೈಲ ಕಂಪನಿಗಳು ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಅನ್ನು ಮಿಕ್ಸಿಂಗ್ ಮಾಡುತ್ತಿವೆ ಎಂದು ಆರೋಪಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳನ್ನು ಖಾಸಗಿ ಪ್ರಯೋಗಾಲಯಗಳಲ್ಲಿ (ಟೆಸ್ಟಿಂಗ್ ಲ್ಯಾಬ್ಗಳಲ್ಲಿ) ಪರೀಕ್ಷಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಸರ್ಕಾರವು ನಡೆಸಿದ ಸಮೀಕ್ಷೆಯಲ್ಲಿ, ಇಂಡಿಯನ್ ಆಯಿಲ್ (IOCL), ಹಿಂದೂಸ್ತಾನ್ ಪೆಟ್ರೋಲಿಯಂ (HPCL), ಭಾರತ್ ಪೆಟ್ರೋಲಿಯಂ (BPCL), ನಯಾರಾ (Nayara) ಮತ್ತು ಶೆಲ್ (Shell) ನಂತಹ ಕಂಪನಿಗಳಿಗೆ ಸೇರಿದ ಪೆಟ್ರೋಲ್ ಬಂಕ್ಗಳಿಂದ ಒಟ್ಟು 63 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಆರಂಭದಲ್ಲಿ, ಈ ಮಾದರಿಗಳನ್ನು ಆಯಾ ತೈಲ ಕಂಪನಿಗಳ ಪ್ರಯೋಗಾಲಯಗಳಿಗೆ ಕಳುಹಿಸಿ, ಅವುಗಳಲ್ಲಿರುವ ಎಥೆನಾಲ್ ಪ್ರಮಾಣವನ್ನು ಬಹಿರಂಗಪಡಿಸುವಂತೆ ಕೇಳಲಾಗಿತ್ತು. ಆದರೆ, ಕಂಪನಿಗಳಿಂದ ಯಾವುದೇ ಸ್ಪಷ್ಟ ಉತ್ತರ ಸಿಗದಿದ್ದಾಗ, ಕೆಲವು ಮಾದರಿಗಳನ್ನು ಪರೀಕ್ಷೆಗಾಗಿ ಖಾಸಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಯಿತು. ಏಳು ಜಿಲ್ಲೆಗಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ, ನಿಗದಿತ ಶೇ.20ರ ಮಿತಿಗಿಂತ ಹೆಚ್ಚು ಎಥೆನಾಲ್ ಇರುವುದು ಕಂಡುಬಂದಿದೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ಬಹಿರಂಗಪಡಿಸಿದ ವಿವರಗಳ ಪ್ರಕಾರ, ಇಂಡಿಯನ್ ಆಯಿಲ್ನ ಪೆಟ್ರೋಲ್ ಮಾದರಿಗಳಲ್ಲಿ ಅತಿ ಹೆಚ್ಚು ಅಂದರೆ ಶೇ.31.2ರಷ್ಟು ಎಥೆನಾಲ್ ಇರುವುದು ಪತ್ತೆಯಾಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಮಾದರಿಗಳಲ್ಲಿ ಶೇ.30.5, ಭಾರತ್ ಪೆಟ್ರೋಲಿಯಂನಲ್ಲಿ ಶೇ.26.5, ನಯಾರಾ ಪೆಟ್ರೋಲ್ನಲ್ಲಿ ಶೇ.26.1 ಮತ್ತು ಶೆಲ್ ಪೆಟ್ರೋಲ್ನಲ್ಲಿ ಶೇ.25.5ರಷ್ಟು ಎಥೆನಾಲ್ ಇರುವುದು ಪರೀಕ್ಷೆಗಳಲ್ಲಿ ಕಂಡುಬಂದಿದೆ ಎಂದು ಸರ್ಕಾರ ಹೇಳಿದೆ.
ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥೆನಾಲ್ ಬೆರೆಸುವುದರಿಂದ ವಾಹನ ಸವಾರರ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ವಾಹನಗಳ ಮೈಲೇಜ್, ಇಂಜಿನ್ ಕಾರ್ಯಕ್ಷಮತೆ ಮತ್ತು ನಿರ್ವಹಣಾ ವೆಚ್ಚದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇಂಧನ ಮೈಲೇಜ್ನಲ್ಲಿ ಶೇ.10ರಷ್ಟು ಇಳಿಕೆಯಾದರೆ, ದೇಶಾದ್ಯಂತ ವಾರ್ಷಿಕವಾಗಿ ಸುಮಾರು 62,000 ಕೋಟಿ ರೂಪಾಯಿಗಳ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ವಾಹನಗಳ ನಿರ್ವಹಣೆ ಮತ್ತು ದುರಸ್ತಿ ವೆಚ್ಚದ ರೂಪದಲ್ಲಿ ಹೆಚ್ಚುವರಿಯಾಗಿ 39,000 ಕೋಟಿ ರೂ.ಗಳ ಹೊರೆ ಉಂಟಾಗಿದೆ ಎಂದು ಸರ್ಕಾರ ತಿಳಿಸಿದೆ.
ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ರಿಜ್ವಾನ್ ಅರ್ಷದ್ ಆಗ್ರಹಿಸಿದ್ದಾರೆ. ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ನಷ್ಟ ಅನುಭವಿಸುವ ವಾಹನ ಮಾಲೀಕರಿಗೆ ಪರಿಹಾರ ನೀಡಲು ವಿಶೇಷ ನಿಧಿಯೊಂದನ್ನು ಸ್ಥಾಪಿಸಬೇಕು. ಹೆಚ್ಚಿನ ಪ್ರಮಾಣದ ಎಥೆನಾಲ್ ಇರುವ ಪೆಟ್ರೋಲ್ನಿಂದಾಗಿ ವಾಹನ ಸವಾರರಿಗೆ ಉಂಟಾದ ಧಕ್ಕೆ, ಆರ್ಥಿಕ ನಷ್ಟಕ್ಕೆ ಪರಿಹಾರ ನೀಡುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಳ್ಳಬೇಕು ಎಂದರು.
ಒಟ್ಟಾರೆಯಾಗಿ, ಇ20 ಪೆಟ್ರೋಲ್ನಲ್ಲಿರುವ ಎಥೆನಾಲ್ ಪ್ರಮಾಣದ ಕುರಿತು ಕರ್ನಾಟಕ ಸರ್ಕಾರ ಬಹಿರಂಗಪಡಿಸಿರುವ ವಿವರಗಳು ರಾಷ್ಟ್ರಮಟ್ಟದ ಚರ್ಚೆಗೆ ಎಡಮಾಡಿಕೊಟ್ಟಿವೆ. ಈ ಆರೋಪಗಳಿಗೆ ಕೇಂದ್ರ ಸರ್ಕಾರ ಮತ್ತು ಸಂಬಂಧಿತ ತೈಲ ಕಂಪನಿಗಳು ಹೇಗೆ ಪ್ರತಿಕ್ರಿಯಿಸಲಿವೆ ಎಂಬುದೇ ಕುತೂಹಲ. ಇ20 ಪೆಟ್ರೋಲ್ ವಿರುದ್ಧ ಈಗಾಗಲೇ ಸಾಲು ಸಾಲು ಆರೋಪಗಳು ಮತ್ತು ಟೀಕೆಗಳು ಕೇಳಿಬರುತ್ತಿದ್ದರೂ, ಕೇಂದ್ರ ಸರ್ಕಾರವು ಮಾತ್ರ ಇದೆಲ್ಲವನ್ನೂ ನಿರಾಕರಿಸುತ್ತಲೇ ಬಂದಿದೆ,(ಏಜೆನ್ಸೀಸ್).