ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ರಾಜೀನಾಮೆ! Basavaraj Horatti
- ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದಾರೆ
- ಸಭಾಪತಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಮುಂದಾಗಿದ್ದರಿಂದ ರಾಜೀನಾಮೆ ನೀಡಿದ್ದಾರೆ
- ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಪೀಠಕ್ಕೆ ಮುಜುಗರವಾಗಬಾರದೆಂದು ಈ ನಿರ್ಧಾರ ಕೈಗೊಂಡಿದ್ದಾರೆ
- ಆಗಸ್ಟ್ 14ರಂದು ನಡೆಯಲಿರುವ ಕಲಾಪದಲ್ಲಿ ಸದನವನ್ನುದ್ದೇಶಿಸಿ ಮಾತನಾಡಿ ಅವರು ಅಧಿಕೃತವಾಗಿ ನಿರ್ಗಮಿಸಲಿದ್ದಾರೆ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ( Basavaraj Horatti ) ಅವರು ಇಂದು (ಆಗಸ್ಟ್ 07) ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷವು ಸಭಾಪತಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದರಿಂದ, ಸರ್ಕಾರದ ಪ್ರಮುಖ ನಾಯಕರು ಹೊರಟ್ಟಿ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡುವಂತೆ ವಿನಂತಿಸಿದ್ದರು. ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಮತದಾನ ಪ್ರಕ್ರಿಯೆ ನಡೆದು ಸಭಾಪತಿ ಪೀಠಕ್ಕೆ ಯಾವುದೇ ರೀತಿಯ ಮುಜುಗರ ಉಂಟಾಗಬಾರದು ಎಂಬ ಕಾರಣಕ್ಕೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ರಾಜೀನಾಮೆ ಪತ್ರದಲ್ಲಿ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೊರಟ್ಟಿ ಅವರು ಉಲ್ಲೇಖಿಸಿದ್ದಾರೆ.
ತಮ್ಮ ಸುದೀರ್ಘ 46 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ 18 ಮುಖ್ಯಮಂತ್ರಿಗಳನ್ನು ಕಂಡಿರುವ ಬಸವರಾಜ ಹೊರಟ್ಟಿ, ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಪಕ್ಷಾತೀತವಾಗಿ ಸದನವನ್ನು ಮುನ್ನಡೆಸಿದ್ದಾಗಿ ತಿಳಿಸಿದ್ದು, ಸರ್ಕಾರದ ಇಚ್ಛೆ ಹಾಗೂ ಪೀಠದ ಮೌಲ್ಯವನ್ನು ಎತ್ತಿಹಿಡಿಯುವ ಸಲುವಾಗಿ ಈ ಹೆಜ್ಜೆ ಇಟ್ಟಿರುವುದಾಗಿ ತಿಳಿಸಿದ್ದಾರೆ.
ಆಗಸ್ಟ್ 14ರಂದು ನಡೆಯಲಿರುವ ಕಲಾಪದಲ್ಲಿ ಹೊರಟ್ಟಿ ಅವರು ಸದನವನ್ನುದ್ದೇಶಿಸಿ ಮಾತನಾಡಿ ಅಧಿಕೃತವಾಗಿ ನಿರ್ಗಮಿಸಲಿದ್ದು, ಈ ನಿರ್ಧಾರದೊಂದಿಗೆ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಹೊಸ ಸಭಾಪತಿಯವರ ಆಯ್ಕೆಗೆ ಸಂಪೂರ್ಣ ಹಾದಿ ಸುಗಮವಾದಂತಾಗಿದೆ.