ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
- ಗೌರವ ಪ್ರಶಸ್ತಿಗೆ 30 ಜಿಲ್ಲೆಗಳಿಂದ 30 ಮಂದಿ ಭಾಜನ
- ತಜ್ಞ ಪ್ರಶಸ್ತಿಗೆ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಹಾಗೂ ಡಾ. ಎಚ್. ಟಿ. ಪೋತೆ ಆಯ್ಕೆ
- ಇಬ್ಬರಿಗೆ 2024ನೇ ಸಾಲಿನ ಪುಸ್ತಕ ಬಹುಮಾನ
ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿಯ 2025ನೇ ಸಾಲಿನ ವಿವಿಧ ಪ್ರಶಸ್ತಿಗಳು ಪ್ರಕಟವಾಗಿದ್ದು, ‘ಗೌರವ ಪ್ರಶಸ್ತಿ’ಗೆ ಬೆಂಗಳೂರು ನಗರದ ನೀಲಗಾರರ ಪದ ಮತ್ತು ತಂಬೂರಿಪದಕಾರ ಸಿದ್ದರಾಜು ಸೇರಿ 30 ಮಂದಿ ಆಯ್ಕೆಯಾಗಿದ್ದಾರೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಚ್ಚಮ್ಮ (ಸೋಬಾನೆ ಪದ, ತತ್ವಪದ, ಸಂಪ್ರದಾಯ ಪದ), ರಾಮನಗರದ ಬಿ. ಸಿದ್ದರಾಜಯ್ಯ (ಜಾನಪದ ಗಾಯನ), ಕೋಲಾರದ ಸೀತಮ್ಮ (ತತ್ವಪದ), ಚಿಕ್ಕಬಳ್ಳಾಪುರದ ಕೆ.ಎಂ. ನಾರಾಯಣ ಸ್ವಾಮಿ (ಕೀಲು ಕುದುರೆ), ತುಮಕೂರಿನ ರೇವಣ್ಣ (ಅಲಗು ಕುಣಿತ), ದಾವಣಗೆರೆಯ ಜಿ. ಪರಮೇಶ್ವರಪ್ಪ ಕತ್ತಿಗೆ (ತತ್ವಪದ), ಚಿತ್ರದುರ್ಗದ ಜಿ.ಎನ್. ವಿರೂಪಾಕ್ಷಪ್ಪ (ಜಾನಪದ ಸಂಗೀತ), ಶಿವಮೊಗ್ಗದ ಕೆ.ಎಸ್. ಲಿಂಗಪ್ಪ (ಅಂಟಿಕೆ ಪಿಂಟಿಕೆ), ಮೈಸೂರಿನ ಚನ್ನಾಜಮ್ಮ (ಸೋಬಾನೆ ಪದ ಮತ್ತು ಜಾನಪದ ಗಾಯನ), ಮಂಡ್ಯದ ಹೊನ್ನಯ್ಯ (ಕೋಲಾಟ), ಹಾಸನದ ಯೋಗೇಂದ್ರ ದುದ್ದ (ಗೀಗೀ ಪದ, ಲಾವಣಿ, ತತ್ವಪದ ಮತ್ತು ಭಜನೆ), ಚಿಕ್ಕಮಗಳೂರಿನ ಎಚ್.ಎಂ. ರವಿ (ವೀರಗಾಸೆ), ಚಾಮರಾಜನಗರದ ಬಸವರಾಜು (ಗೊರುಕನ ನೃತ್ಯ), ದಕ್ಷಿಣ ಕನ್ನಡದ ಸುಮತಿ ಕೊರಗ (ಕೊರಗರ ಡೋಲು) ಪ್ರಶಸ್ತಿಗೆ ಭಜನರಾಗಿದ್ದಾರೆ.
ಉಡುಪಿಯ ಗುಲಾಬಿ ಗೌಡ್ತಿ (ನಾಟಿ ವೈದ್ಯ), ಕೊಡಗಿನ ಅಮ್ಮಣಿ (ಸೂಲಗಿತ್ತಿ/ಕುಡಿಯ ಜನಾಂಗದ ಹಾಡುಗಾರಿಕೆ), ಬೆಳಗಾವಿಯ ಭೀಮಪ್ಪ ಸಿದ್ಧಪ್ಪ ಮುತ್ನಾಳ್ (ಪುರವಂತಿಕೆ), ಧಾರವಾಡದ ಪ್ರಕಾಶ ಮಲ್ಲಿಗವಾಡ (ಜಾನಪದ ನೃತ್ಯ), ವಿಜಯಪುರದ ಜ್ಯೋತಿರ್ಲಿಂಗ ಹೊನಕಟ್ಟಿ (ಜಾನಪದ ಗಾಯನ), ಬಾಗಲಕೋಟೆಯ ಚಂದ್ರಲಿಂಪ್ಪ ನಿಂಗಪ್ಪ ಬಸರಕೋಡ (ಪುರವಂತಿಕೆ), ಉತ್ತರ ಕನ್ನಡ ಜಿಲ್ಲೆಯ ಗೌರಿ ನಾಗಪ್ಪ ನಾಯ್ಕ (ಸುಗ್ಗಿ ಹಾಡುಗಳು, ಜಾನಪದ ಕಥೆ, ಸಂಪ್ರದಾಯದ ಪದಗಳು), ಹಾವೇರಿಯ ಬಿಕ್ಷಾಪತಿ ಮೋತಿ (ಹಗಲುವೇಷ), ಗದಗದ ಕಾಶೀಮಸಾಬ ಹುಸೇನಸಾಬ (ಹೆಜ್ಜೆ ಮೇಳ), ಕುಲಬುರಗಿಯ ಭಾಗಪ್ಪ (ತತ್ವಪದ), ಬೀದರ್ ಜಿಲ್ಲೆಯ ಇಂದ್ರಮ್ಮ (ಮೋಹರಂ ಪದ), ರಾಯಚೂರಿನ ಯಂಕನಗೌಡ (ತತ್ವಪದ), ಕೊಪ್ಪಳದ ರಾಮಣ್ಣ (ಹಗಲು ವೇಷ), ವಿಜಯನಗರದ ಕಿಂಡ್ರಿ ಲಕ್ಷ್ಮೀಪತಿ (ಸುಡುಗಾಡು ಸಿದ್ಧರು), ಯಾದಗಿರಿಯ ಹಣಮಂತ (ತತ್ವಪದ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ತಲಾ 25 ಸಾವಿರ ನಗದು ಒಳಗೊಂಡಿದೆ.
ಜಾನಪದ ತಜ್ಞ ಪ್ರಶಸ್ತಿ:
ಡಾ. ಜೀ. ಶಂ. ಪ. ತಜ್ಞ ಪ್ರಶಸ್ತಿಗೆ ತುಮಕೂರಿನ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಹಾಗೂ ಡಾ. ಬಿ.ಎಸ್. ಗದ್ದಗಿಮಠ ತಜ್ಞ ಪ್ರಶಸ್ತಿಗೆ ಕಲಬುರಗಿಯ ಡಾ. ಎಚ್. ಟಿ. ಪೋತೆ ಅವರು ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ 50 ಸಾವಿರ ನಗದು ಹಾಗೂ ಲಕ ಹೊಂದಿದೆ.
2024ನೇ ಸಾಲಿನ ಪುಸ್ತಕ ಬಹುಮಾನ:
ಬೆಂಗಳೂರಿನ ಡಾ. ವೀರಾಸಾಬಿಹಳ್ಳಿ ಶಿವಣ್ಣ ಅವರ ‘ಕಾಡುಗೊಲ್ಲರ ಸಂಸ್ಕೃತಿ ಮತ್ತು ಕಾವ್ಯಗಳು’ ವಿಚಾರ ವಿಮರ್ಶಾ ಕೃತಿ ಹಾಗೂ ಕೂಡ್ಲಗಿಯ ಡಾ. ಇಮಾಮ್ ಸಾಹೇಬ್ ಹಡಗಲಿ ಅವರ ‘ಕನಕಗಿರಿ ಸೀಮೆಯ ಸ್ಥಳನಾಮಗಳು’ ಸಂಶೋಧನಾ ಕೃತಿ 2024ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಅಯ್ಕೆಯಾಗಿವೆ. ಬಹುಮಾನವು ತಲಾ 25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.