ಹೈಕೋರ್ಟ್​  
ರಾಜ್ಯ

ಭೂಸ್ವಾಧೀನಗೊಂಡ ಜಮೀನು ಮರಳಿಸುವುದು ಅಸಾಧ್ಯ| High court

ಪ್ರಮುಖ ಮುಖ್ಯಾಂಶಗಳು

  • ಹಳೇ ಅಧಿಸೂಚನೆಗಳಿಗೆ 2013ರ ಹೊಸ ಕಾಯ್ದೆ ಅನ್ವಯವಿಲ್ಲ
  • ಸಾರ್ವಜನಿಕ ಕಾರ್ಯಕ್ಕೆ ಬಳಸುವ ಅಧಿಕಾರ ಸರ್ಕಾರಕ್ಕಿದೆ ಎಂದ ಹೈಕೋರ್ಟ್​
ಶ್ರವಣ್​ ನೀರಬಿದಿರೆ ಬೆಂಗಳೂರು
ಹಳೆಯ (1894) ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ಸರ್ಕಾರ ಈಗಾಗಲೇ ಕಾನೂನುಬದ್ಧವಾಗಿ ವಶಪಡಿಸಿಕೊಂಡಿರುವ ಜಮೀನನ್ನು 2013ರ ಹೊಸ ಕಾಯ್ದೆ ಅನ್ವಯ ಮೂಲ ಭೂಮಾಲೀಕರಿಗೆ ಮರಳಿಸಲು ಅಥವಾ ಭೂ ಸ್ವಾಧೀನ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ತೀರ್ಪು ನೀಡಿದೆ.
1894ರ ಕಾನೂನಿನ ಅಡಿಯಲ್ಲಿ ಒಮ್ಮೆ ಭೂಮಿಯ ಸ್ವಾಧೀನವನ್ನು ಸರ್ಕಾರ ಪಡೆದುಕೊಂಡಿದ್ದರೆ ಮತ್ತು ಭೂ ದಾಖಲೆಗಳಲ್ಲಿ ಅದು ಕಾನೂನುಬದ್ಧವಾಗಿ ಹಸ್ತಾಂತರಗೊಂಡಿದ್ದರೆ ಮೂಲ ಭೂ ಮಾಲೀಕರು ಎಲ್ಲ ಕಾನೂನುಬದ್ಧ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಭೂಸ್ವಾಧೀನ ಮಾಡುವಾಗ ಇದ್ದ ಮೂಲ ಉದ್ದೇಶಕ್ಕೆ ಬದಲಾಗಿ ಬೇರೆ ಸಾರ್ವಜನಿಕ ಉದ್ದೇಶಕ್ಕೆ ಬಳಸಿದ್ದಾರೆ ಎಂಬ ಕಾರಣಕ್ಕೆ ಭೂಸ್ವಾಧೀನವು ರದ್ದಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ ಶಾಂತವ್ವ ಕಂಟ್ರಾಕ್ಟರ್​ ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್​ನ ಧಾರವಾಡ ಪೀಠದಲ್ಲಿ ನಡೆಸಿದ ನ್ಯಾಯಮೂರ್ತಿ ಕೆ.ಎಸ್​. ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ತೀರ್ಪು ನೀಡಿದೆ. ಹಳೇ ಕಾಯ್ದೆ ಅನ್ವಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದರೆ, ಅದು ನಿರ್ಬಂಧಗಳಿಲ್ಲದೆ ಸರ್ಕಾರಿ ಜಮೀನಾಗುತ್ತದೆ. ಜಮೀನನ್ನು ಭೌತಿಕವಾಗಿ ವಶಪಡಿಸಿಕೊಳ್ಳದಿದ್ದರೆ ಅಥವಾ ಸಂತ್ರಸ್ತರಿಗೆ ಪರಿಹಾರ ಪಾವತಿಸದೇ ಇದ್ದರೆ ಮಾತ್ರ ಅದು ರದ್ದಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ವಿವಾದಿತ ಜಮೀನು ಪಿತ್ರಾರ್ಜಿತ ಆಸ್ತಿಯಾಗಿದ್ದು, ಏಳು ದಶಕಗಳಿಂದ ನಮ್ಮ ವಶದಲ್ಲಿತ್ತು. ಈ ಜಮೀನನ್ನು ನಿವೇಶನ ರಹಿತರಿಗೆ ಆಶ್ರಯ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಲು ಸರ್ಕಾರವು 1974ರಲ್ಲಿ ಸ್ವಾಧಿನ ಪಡಿಸಿಕೊಂಡಿದೆ. ಆದರೆ, ಯಾವ ಉದ್ದೇಶಕ್ಕಾಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತೋ ಅದನ್ನು ಇದುವರೆಗೂ ಪೂರೈಸಿಲ್ಲ. ಆದ್ದರಿಂದ 1974ರ ಭೂ ಸ್ವಾಧೀನ ಅಧಿಸೂಚನೆ ರದ್ದುಗೊಳಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.

ಶಾಲೆ ನಿರ್ಮಾಣಕ್ಕೆ ಬಳಕೆ:

ಅರ್ಜಿದಾರರ ಪರ ವಾದಿಸಿದ ವಕೀಲರು, ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದ ಜಮೀನಿನಲ್ಲಿ 1.6 ಎಕರೆ ಅರ್ಜಿದಾರರ ಸ್ವಾಧಿನಲ್ಲಿಯೇ ಇತ್ತು ಎಂಬುದಕ್ಕೆ 1992ರ ತನಕದ ದಾಖಲೆಗಳಿವೆ. ಅದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಈ ಸಂಬಂಧ ಯಾವುದೇ ಪರಿಹಾರವನ್ನೂ ನೀಡಲಾಗಿಲ್ಲ. ಆದರೆ, ಈ ಜಮೀನನ್ನು ಸರ್ಕಾರಿ ಉರ್ದು ಶಾಲೆ ನಿರ್ಮಾಣ ಸೇರಿ ಇತರ ಅನಧಿಕೃತ ಉದ್ದೇಶಗಳಿಗೆ ಬಳಸಲಾಗಿದೆ. ಅಲ್ಲದೆ, ಕಾನೂನಿನ ಪ್ರಕ್ರಿಯೆಗಳನ್ನು ಪಾಲಿಸದೆ, ಪಿತ್ರಾರ್ಜಿತ ಮನೆಯನ್ನು ನೆಲಸಮ ಮಾಡುವ ಬೆದರಿಕೆ ಹಾಕಿ ಅರ್ಜಿದಾರರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಯತ್ನ 2017ರಲ್ಲಿ ನಡೆದಿದೆ ಎಂದು ವಾದಿಸಿದ್ದರು.

ಸಾರ್ವಜನಿಕ ಉದ್ದೇಶ ಸಾಬೀತು:

ಸರ್ಕಾರದ ಪರ ವಾದಿಸಿದ ವಕೀಲರು, ವಿವಾದಿತ ಜಮೀನಿನ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆಗಳು 1894ರ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ಈಗಾಗಲೇ ಪೂರ್ಣಗೊಂಡಿದೆ. ಆದ್ದರಿಂದ ಭೂಸ್ವಾಧಿನ ಅಧಿಸೂಚನೆಯಲ್ಲಿ ತಿಳಿಸಲಾದ ನಿರ್ದಿಷ್ಟ ಉದ್ದೇಶಕ್ಕೆ ಜಮೀನನ್ನು ಬಳಸಲಾಗಿಲ್ಲ ಎಂಬ ಕಾರಣಕ್ಕೆ ಅಧಿಸೂಚನೆಯನ್ನೇ ರದ್ದುಗೊಳಿಸುವಂತೆ ಅರ್ಜಿದಾರರು ಕೋರುವಂತಿಲ್ಲ. ಅದಲ್ಲದೆ, ಜಮೀನಿನಲ್ಲಿ ಸರ್ಕಾರಿ ಶಾಲೆಯು ಕಾರ್ಯ ನಿರ್ವಹಿಸುತ್ತಿರುವುದು ಸಾರ್ವಜನಿಕ ಉದ್ದೇಶಕ್ಕಾಗಿ ಜಮೀನಿನ ಬಳಕೆಯಾಗುತ್ತಿರುವುದನ್ನು ಸಾಬೀತುಪಡಿಸುತ್ತದೆ ಎಂದು ತಿಳಿಸಿದರು.

ಷರತ್ತುಗಳಿಲ್ಲದೆ ಸರ್ಕಾರದ ವಶಕ್ಕೆ:
ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, 1894ರ ಭೂಸ್ವಾಧೀನ ಕಾಯ್ದೆಯ ಪ್ರಕಾರ ಆಸ್ತಿಯ ಮಾಲೀಕತ್ವ ಅಥವಾ ಸ್ವಾಧಿನದ ಬಗ್ಗೆ ಯಾವುದೇ ಷರತ್ತುಗಳಿಲ್ಲದೆ ಸರ್ಕಾರದ ವಶಕ್ಕೆ ಬರುತ್ತದೆ. ಮಾಲೀಕತ್ವದ ವರ್ಗಾವಣೆಯು ಸೀಮಿತ ಉದ್ದೇಶ ಅಥವಾ ಸೀಮಿತ ಅವಧಿಗೆ ಅಲ್ಲ ಎಂಬುದು ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು "ಇಂದೋರ್​ ಡೆವಲಪ್​ಮೆಂಟ್​ ಅಥಾರಿಟಿ" ಪ್ರಕರಣದಲ್ಲಿ ಸುಪ್ರೀಂಕೋರ್ಟ್​ನ ತೀರ್ಪುನ್ನು ಉಲ್ಲೇಖಿಸಿ ತೀರ್ಪು ನೀಡಿದೆ.