ಮುಟ್ಟಿನ ರಜೆ ನೀಡುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ
- ಮಹಿಳಾ ನೌಕರರಿಗೆ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ
- ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್
- ಹೈಕೋರ್ಟ್ ನ್ಯಾಯಮೂರ್ತಿ ಜ್ಯೋತಿ ಎಂ ಅವರಿಂದ ಇಂದು ತಡೆಯಾಜ್ಞೆ
- ಚಳಿಗಾಲದ ರಜೆಯ ನಂತರ ಮುಂದಿನ ವಿಚಾರಣೆಗೆ ನ್ಯಾಯಾಲಯ ಸೂಚನೆ
ಬೆಂಗಳೂರು: ಮಹಿಳಾ ನೌಕರರಿಗೆ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ ( Period Leave ) ಒದಗಿಸುವ ಸಂಬಂಧ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆಗೆ ಹೈಕೋರ್ಟ್ ಇಂದು (ಡಿ.09) ಮಧ್ಯಂತರ ತಡೆ ನೀಡಿದೆ.
ನೋಂದಾಯಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ಸಮಯದಲ್ಲಿ ಒಂದು ದಿನ ವೇತನ ಸಹಿತ ಮಾಸಿಕ ರಜೆ ನೀಡುವ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿತ್ತು. 2025, ನವೆಂಬರ್ 20ರಂದು ಕಾರ್ಮಿಕ ಇಲಾಖೆ ಹೊರಡಿಸಿದ ಅಧಿಸೂಚನೆಯನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಜ್ಯೋತಿ ಎಂ ಇಂದು ತಡೆಯಾಜ್ಞೆ ನೀಡಿದರು.
ಬೆಂಗಳೂರು ಹೋಟೆಲ್‌ಗಳ ಸಂಘದ ಪರ ವಕೀಲ ಪ್ರಶಾಂತ್ ಬಿ.ಕೆ ಅವರ ಪ್ರಾಥಮಿಕ ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ಮುಟ್ಟಿನ ರಜೆ ವಿಚಾರದಲ್ಲಿ ಸರ್ಕಾರದ ಪ್ರತಿಕ್ರಿಯೆಯನ್ನು ಕೋರಿ, ತಡೆ ನೀಡಿತು. ಅಗತ್ಯವಿದ್ದರೆ, ಈ ಆದೇಶದಲ್ಲಿ ಮಾರ್ಪಾಡು ಕೋರಲು ರಾಜ್ಯ ಸರ್ಕಾರಕ್ಕೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯವು ಇದೇ ವೇಳೆ ಹೇಳಿತು.
ಈ ನಿಯಮಗಳನ್ನು ರೂಪಿಸುವ ಮೊದಲು ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಲಾಗಿದೆಯೇ ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಿದೆಯೇ ಎಂಬ ಪ್ರಶ್ನೆಯನ್ನು ನ್ಯಾಯಪೀಠ ಸರ್ಕಾರ ಕೇಳಿತು. ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆಗಳನ್ನು ಸಲ್ಲಿಸುವಂತೆ ನಿರ್ದೇಶಿಸಿತು. ಚಳಿಗಾಲದ ರಜೆಯ ನಂತರ ಮುಂದಿನ ವಿಚಾರಣೆಗೆ ಪಟ್ಟಿ ಮಾಡಲು ನ್ಯಾಯಾಲಯ ಸೂಚಿಸಿ, ಪ್ರಕರಣವನ್ನು ಮುಂದೂಡಿತು.
ಅಂದಹಾಗೆ, ಬೆಂಗಳೂರು ಹೋಟೆಲ್‌ಗಳ ಸಂಘವು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು, ಸಿಹಿತಿಂಡಿ ಅಂಗಡಿಗಳು ಮತ್ತು ಐಸ್‌ಕ್ರೀಮ್ ಪಾರ್ಲರ್‌ಗಳ ಸಂಘವಾಗಿದ್ದು, ಇದರಲ್ಲಿ ಸುಮಾರು 1540 ಮಾಲೀಕರು/ಸಂಸ್ಥೆಗಳು ಸಕ್ರಿಯ ಸದಸ್ಯರಾಗಿದ್ದಾರೆ. ನೌಕರರಿಗೆ ರಜೆ ಮಂಜೂರು ಮಾಡುವ ಬಗ್ಗೆ ಈಗಾಗಲೇ ಸಾಕಷ್ಟು ನಿಬಂಧನೆಗಳಿವೆ. ಹೀಗಿದ್ದರೂ, ಕರ್ನಾಟಕ ಸರ್ಕಾರ, ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡಬೇಕೆಂದು ಅಧಿಸೂಚನೆ ಹೊರಡಿಸಿದೆ. ಆದರೆ, ಆ ರೀತಿ ಮಾಡಲು ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಸಂಘವು ವಾದಿಸಿತು. ಅಲ್ಲದೆ, ಈ ಅಧಿಸೂಚನೆಯನ್ನು ಸರ್ಕಾರ ಯಾವ ಅಧಿಕಾರದ ಅಡಿಯಲ್ಲಿ ಹೊರಡಿಸಿದೆ ಎಂಬುದನ್ನು ಸಹ ಸೂಚಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರು ಇಂದು ವಾದಿಸಿದರು.
ಇನ್ನು ರಜೆ ವಿಷಯಗಳನ್ನು ನಿರ್ಧರಿಸಲು ಪ್ರತಿಯೊಂದು ಸಂಸ್ಥೆಯ ತೀರ್ಮಾನಕ್ಕೆ ಬಿಡಬೇಕಾಗಿತ್ತು ಎಂದು ಸಂಘವು ತನ್ನ ಅರ್ಜಿಯಲ್ಲಿ ತಿಳಿಸಿ, ನವೆಂಬರ್ 20, 2025 ರಂದು ಹೊರಡಿಸಲಾದ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿತ್ತು. ಇದೀಗ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿರುವ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.