ಬೆಂಗಳೂರು:ಸರ್ ಸೈಯದ್ ಅಹ್ಮದ್ ಖಾನ್ ಸಂಶೋಧನಾ ಕೇಂದ್ರವು ರಾಜ್ಯ ಸರ್ಕಾರದಿಂದ ವಾರ್ಷಿಕವಾಗಿ 4.5 ಕೋಟಿ ರೂಪಾಯಿಗಳಂತೆ ಈ ತನಕ ಸುಮಾರು 40 ಕೋಟಿ ರೂ. ಅನುದಾನ ಪಡೆದಿದ್ದರೂ ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಸಂಶೋಧನೆ ನಡೆಸಿಲ್ಲ ಎಂಬ ಆರೋಪ ಕುರಿತು ತನಿಖೆ ನಡೆಸಲು ತನಿಖಾ ಸಮಿತಿ ರಚಿಸಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಶೋಧನಾ ಕೇಂದ್ರ ಸ್ಥಾಪಿಸಿತ್ತು. ಆದರೆ, ಈವರೆಗೆ ಈ ಕೇಂದ್ರದಿಂದ ಯಾವುದೇ ಮಹತ್ವದ ಕಾರ್ಯಗಳಾಗಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ವಜೀರ್ ಬೇಗ್ ಎಂಬುವರು ಈ ಬಗ್ಗೆ ತನಿಖೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಯಾವ ಸ್ಪಂದನೆಯೂ ದೊರಕಿರಲಿಲ್ಲ. ಹಾಗಾಗಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ತನಿಖೆ ನಡೆಸುವಂತೆ ನ.25ರಂದು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಅರ್ಜಿಯಲ್ಲಿ ಏನಿತ್ತು?: ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು 2015ರಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ. ಸಂಸ್ಥೆಯ ನಿರ್ದೇಶಕರ ವಿರುದ್ಧ ತನಿಖೆಗೆ ಆದೇಶಿಸಲಾಗಿದ್ದು, ಅದೇ ರೀತಿ ಸಂಶೋಧನಾ ಕೇಂದ್ರದ ಕಾರ್ಯವೈಖರಿ ಬಗ್ಗೆ ತನಿಖೆ ನಡೆಸಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಇದನ್ನು ಪರಿಗಣಿಸಲು ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿತ್ತು.
ನ್ಯಾಯಾಲಯದ ನಿರ್ದೇಶನ ಪಾಲಿಸಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ, ತನಿಖೆಗೆ ಸಮಿತಿ ರಚಿಸಿ ಜ.1ರಂದು ಆದೇಶಿಸಿದ್ದಾರೆ. ಸಮಿತಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ವಕ್ಫ್ ಮಂಡಳಿಯ ಲೆಕ್ಕಾಧಿಕಾರಿಗಳಿದ್ದಾರೆ.15 ದಿನಗಳೊಳಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.