- ದತ್ತೂರಿ ಹಣ್ಣು/ ಬೀಜ ಮಾರುತ್ತಿದ್ದ ಇ-ಕಾಮರ್ಸ್ ಕಂಪನಿಗಳಿಗೆ ಎಚ್ಚರಿಕೆ
- ಸೇವನೆಗೆ ಯೋಗ್ಯವಲ್ಲದ ಹಾಗೂ ವಿಷಕಾರಿ ಎನ್ನಲಾದ ದತ್ತೂರಿ ಮಾರಾಟಕ್ಕೆ ಅನುಮತಿಯಿಲ್ಲ
- ಆಹಾರ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ ಇಲಾಖೆ
ಬೆಂಗಳೂರು: ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್‌ಗೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಇದೀಗ ಬಿಗ್ ಶಾಕ್ ನೀಡಿದೆ. ಸೇವನೆಗೆ ಯೋಗ್ಯವಲ್ಲದ ಹಾಗೂ ವಿಷಕಾರಿ ಎನ್ನಲಾದ ‘ದತ್ತೂರಿ’ ಹಣ್ಣು (Datura) ಅಥವಾ ಬೀಜಗಳನ್ನು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಆಹಾರದ ವಸ್ತುವಾಗಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಮೂರೂ ಸಂಸ್ಥೆಗಳ ಆಹಾರ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಅಪಾಯಕಾರಿ ವಿಷಕಾರಿ ಅಂಶ
ಎನ್ಡಿಟಿವಿ ವರದಿ ಪ್ರಕಾರ, ಸಾರ್ವಜನಿಕರಿಂದ ಕೇಳಿಬಂದ ದೂರುಗಳ ಆಧಾರದ ಮೇಲೆ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ. ವಿಷಕಾರಿ ದತ್ತೂರಿ ಉತ್ಪನ್ನಗಳಿಗೆ ಎಫ್ಎಸ್ಎಸ್ಎಐ (FSSAI) ನೋಂದಣಿ ಸಂಖ್ಯೆಗಳನ್ನು ಪ್ರದರ್ಶಿಸಿ, ಗೋದಾಮುಗಳಲ್ಲಿ ಶೇಖರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ದತ್ತೂರಿ ಅಥವಾ ಹಣ್ಣಿನ ಬೀಜಗಳಲ್ಲಿ ಅಪಾಯಕಾರಿ ವಿಷಕಾರಿ ಅಂಶಗಳಿದ್ದು, ಇವುಗಳನ್ನು ಸೇವಿಸಿದರೆ ಮನುಷ್ಯನ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆಗಳಿವೆ ಎಂದು ಎಚ್ಚರಿಸಲಾಗಿದೆ.
ವಿಚಾರಣೆ ವೇಳೆ ಅಮೆಜಾನ್ ಯಾವುದೇ ಉತ್ತರ ನೀಡದಿದ್ದರೆ, ಇನ್‌ಸ್ಟಾಮಾರ್ಟ್ ಹೆಚ್ಚುವರಿ ಸಮಯ ಕೋರಿದೆ. ಇತ್ತ ಬಿಗ್‌ಬಾಸ್ಕೆಟ್ ಮಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಮನುಷ್ಯರ ಸೇವನೆಗೆ ಸೂಕ್ತವಲ್ಲ ಎಂದು ಲೇಬಲ್ ಹಾಕಿ ಮುಂದುವರಿಸುವುದಾಗಿ ಹೇಳಿದೆ. ಆದರೆ, ಇದನ್ನು ಪ್ರಾಧಿಕಾರ ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದು ವರದಿಯಾಗಿದೆ.
ತಕ್ಷಣಕ್ಕೆ ಕ್ರಮ
ಆನ್‌ಲೈನ್ ಪ್ಲಾಟ್ಫಾರ್ಮ್ಗಳ ಲೈಸೆನ್ಸ್ ಅನ್ನು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಇದರೊಟ್ಟಿಗೆ, ಸರಬರಾಜುದಾರರ ಮೇಲೂ ಕ್ರಮ ಜರುಗಿಸಲಾಗಿದೆ. ಈ ಆನ್‌ಲೈನ್ ಆ್ಯಪ್‌ಗಳಿಗೆ ದತ್ತೂರಿ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ವ್ಯಾಪಾರಿಗಳು ಮತ್ತು ವೆಂಡರ್‌ಗಳ ಲೈಸೆನ್ಸ್ ಕೂಡ ಅಮಾನತುಗೊಂಡಿದೆ. ಜತೆಗೆ, ಆನ್‌ಲೈನ್‌ನಲ್ಲಿ ಈ ಹಣ್ಣು ಅಥವಾ ಬೀಜಕ್ಕೆ ಸಂಬಂಧಿಸಿದ ಎಲ್ಲಾ ಲಿಸ್ಟಿಂಗ್‌ಗಳು, ಜಾಹೀರಾತುಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ಇಲಾಖೆ ಕಟ್ಟುನಿಟ್ಟಿನ ನಿರ್ದೇಶನವನ್ನೂ ನೀಡಿದೆ,(ಏಜೆನ್ಸೀಸ್).