3, ಫೈವ್​ ಸ್ಟಾರ್​ ಹೋಟೆಲ್​​ಗಳಲ್ಲಿ ಮುಂದುವರಿದ ಆಹಾರ ಇಲಾಖೆ ರೇಡ್ 
ರಾಜ್ಯ

ಕೊಳೆತ ಮಾಂಸ, ಎಕ್ಸ್ಪೈರಿ ಹಾಲು... 3, ಫೈವ್​ ಸ್ಟಾರ್​ ಹೋಟೆಲ್​​ಗಳಲ್ಲಿ ಮುಂದುವರಿದ ಆಹಾರ ಇಲಾಖೆ ರೇಡ್​! ಶಾಕಿಂಗ್ ವಿಚಾರಗಳು ಬಯಲು

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸ್ಟಾರ್ ಹೋಟೆಲ್​ಗಳಲ್ಲಿ ಆಹಾರ ಇಲಾಖೆಯಿಂದ ಮುಂದುವರಿದ ಪರಿಶೀಲನೆ
  • 3, 5 ಸ್ಟಾರ್​ ಹೋಟೆಲ್​​ಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ದೂರುಗಳ ಬೆನ್ನಲ್ಲೇ ಕ್ರಮ
  • ಕೊಳೆತ ಮಾಂಸ, ಫಂಗಸ್​ ಹಿಡಿದ ತರಕಾರಿಗಳು ಪತ್ತೆ
ಬೆಂಗಳೂರು: ನಿನ್ನೆಯಷ್ಟೇ (ಆ.08) ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳ ಹೋಟೆಲ್​ಗಳಿಗೆ ದಿಢೀರ್ ಎಂಟ್ರಿಕೊಟ್ಟಿರುವ ಆಹಾರ ಇಲಾಖೆಯು, 3, 5 ಸ್ಟಾರ್​ ಹೋಟೆಲ್​ಗಳಲ್ಲೇ ಕೊಳೆತ ಮಾಂಸ, ಫಂಗಸ್​ ಹಿಡಿದ ತರಕಾರಿ ಮತ್ತು ಅವಧಿ ಮುಗಿದ ಹಾಲನ್ನು ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಇಂದೂ ಸಹ ಪರಿಶೀಲನೆ ಮುಂದುವರಿಸಿರುವ ಅಧಿಕಾರಿಗಳು, ಐಷಾರಾಮಿ ಹೋಟೆಲ್​ಗಳ ಕರ್ಮಕಾಂಡವನ್ನು ಬಯಲಿಗೆಳೆಯಲು ಪಣತೊಟ್ಟಿದ್ದಾರೆ.
3 ಸ್ಟಾರ್ ಮತ್ತು 5 ಸ್ಟಾರ್ ಹೋಟೆಲ್​​ಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಈ ಪರಿಶೀಲನೆ ಕೈಗೊಳ್ಳಲಾಗಿದೆ. ಈ ಸಂಬಂಧ ವಿಶೇಷ ಅಭಿಯಾನ ಆರಂಭಿಸಿರುವ ಇಲಾಖೆ, ಆಹಾರಗಳ ಮಾದರಿ ಪರಿಶೀಲನೆಗೆ ಜಿಲ್ಲಾವರು ತಂಡಗಳನ್ನು ರಚಿಸಿದೆ. ಅವಧಿ ಮೀರಿದ ಆಹಾರ ಉತ್ಪನ್ನಗಳ ಬಳಕೆ, ಕಳಪೆ ಗುಣಮಟ್ಟದ ಆಹಾರ ವಿತರಣೆ ಕಂಡುಬಂದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಕ್ರಮ ಕೈಗೊಂಡು ವರದಿ ಸಲ್ಲಿಸಲು ಇಲಾಖೆ ಆಯುಕ್ತ ಶ್ರೀನಿವಾಸ ಸೂಚಿಸಿದ್ದಾರೆ. ಅಂತೆಯೇ, ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಅಧಿಕಾರಿಗಳು, ಹಲವು ಶಾಕಿಂಗ್ ವಿಚಾರಗಳನ್ನು ಕಂಡು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.
ಇಲಾಖೆಯ ಮಾಹಿತಿ ಪ್ರಕಾರ, 30 ತಂಡಗಳು 26 ಹೋಟೆಲ್‌ಗಳ ಮೇಲೆ ದಾಳಿ ಮುಂದುವರಿಸಿವೆ. ಮತ್ತು ಪ್ರಯೋಗಾಲಯವು 35 ಆಹಾರದ ಮಾದರಿಗಳನ್ನು ಸಂಗ್ರಹಿಸಿವೆ. ಇದರಲ್ಲಿ, ಅಸಮರ್ಪಕ ಲೇಬಲ್, ಅವಧಿ ಮೀರಿದ ಹಾಲು, ತರಕಾರಿ ಮತ್ತು ಬೇಜವಾಬ್ದಾರಿಯ ನಿರ್ವಹಣೆ, ಕೊಳೆತ ಮಾಂಸ ಮತ್ತು ತರಕಾರಿ ಸೇರಿದಂತೆ ಹಲವಾರು ಮೂಲ ಆರೋಗ್ಯ ಸುರಕ್ಷತಾ ನಿಯಮಗಳನ್ನೇ ಉಲ್ಲಂಘನೆ ಮಾಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆಹಾರ ಇಲಾಖೆಯ ರೇಡ್​ನಲ್ಲಿ ಒಟ್ಟು 35 ಆಹಾರದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವುಗಳಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಿರುವ ಪದಾರ್ಥಗಳ ಪೈಕಿ ಚಹಾ ಪುಡಿ, ಚಿಕನ್, ಮಟನ್, ಮೀನು, ಅಡುಗೆ ಎಣ್ಣೆ, ಮೆಣಸಿನ ಪುಡಿ, ಅರಿಶಿನ ಪುಡಿ, ಟೊಮೆಟೊ ಸಾಸ್, ನಿಂಬೆ ರಸ, ಚೀಸ್, ಪಾಪಡ್, ಗೋಡಂಬಿ, ಶುಂಠಿ, ಮೆಣಸು ಪುಡಿ, ಮಸಾಲೆ ಪುಡಿ ಮತ್ತು ಹಾಲು ಸೇರಿವೆ. ಕೆಲವು ಐಷಾರಾಮಿ ಹೋಟೆಲ್​ಗಳಲ್ಲಿ ಕೊಳೆತ ಮಾಂಸಗಳೇ ಹೆಚ್ಚಾಗಿ ಪತ್ತೆಯಾಗಿರುವುದು ನಿಜಕ್ಕೂ ಆಘಾತಕಾರಿ ಸಂಗತಿ.

ಹೋಟೆಲ್​ಗಳಿಂದ ವಶಪಡಿಸಿಕೊಂಡು ಆಹಾರಗಳಿವು

  • ಲಲಿತ್ ಅಶೋಕ್ (ಅನೆಕ್ಸ್ ಸೌತ್): 76 ಕೆಜಿ ಮಾಂಸ ಮತ್ತು 200 ಕೆಜಿ ತರಕಾರಿಗಳು ಮತ್ತು ಅವಧಿ ಮೀರಿದ 32 ಲೀಟರ್ ಹಾಲು
  • ಶ್ಯಾಂಗ್ರಿಲಾ: 15 ಕೆಜಿ ಮಾಂಸ
  • ಫೋರ್ ಸೀಸನ್ ಹೋಟೆಲ್: 19 ಕೆಜಿ ಮಾಂಸ
  • ವಿವಂತ​: ಅವಧಿ ಮೀರಿದ 3 ಕೆಜಿ ಬೇಕರಿ ಉತ್ಪನ್ನ
  • ತಾಜ್: 72 ಕೆಜಿ ಮಾಂಸ
  • ದಿ ರಾಡಿಸನ್ ಬ್ಲೂ (ದಿ ಏಟ್ರಿಯಾ): 105 ಕೆಜಿ ಅವಧಿ ಮೀರಿದ ಆಹಾರ ಉತ್ಪನ್ನ, 50 ಕೆಜಿ ಕೋಳಿ ಮಾಂಸ, 7 ಕೆಜಿ ಮೀನು ಮತ್ತು 25 ಕೆಜಿ ತರಕಾರಿಗಳು ವಶಕ್ಕೆ ಪಡೆಯಲಾಗಿದೆ.
ಈಗಾಗಲೇ ವಶಪಡಿಸಿಕೊಂಡಿರುವ ಆಹಾರ ಪದಾರ್ಥಗಳನ್ನು ಲ್ಯಾಬ್​ಗೆ ಕಳುಹಿಸಿ, ಟೆಸ್ಟಿಂಗ್​ ಬಳಿಕ ಹೊರಬಲಿರುವ ವರದಿಯ ಮೇಲೆ ನಿಯಮ ಉಲ್ಲಂಘಿಸಿದ ಹೋಟೆಲ್‌ಗಳಿಗೆ ನೋಟಿಸ್ ಜಾರಿ ಆಗಲಿದೆ. ಪ್ರಯೋಗಾಲಯದ ವರದಿಗಳು ಮತ್ತು ಕಾನೂನಿನ ಅನ್ವಯವಾಗುವ ನಿಬಂಧನೆಗಳನ್ನು ಆಧಾರಿಸಿಯೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯು ಸ್ಪಷ್ಟಪಡಿಸಿದೆ.