ಕೆಎಲ್ ರಾಹುಲ್  
ರಾಜ್ಯ

ಕರ್ನಾಟಕಕ್ಕೆ ಗೆಲುವಿನ ಓಟ ವಿಸ್ತರಿಸುವ ಹಂಬಲ: ಮಯಾಂಕ್ ಪಡೆಗೆ ತ್ರಿಪುರ ಸವಾಲು

ಬೆಂಗಳೂರು: ಸತತ 4 ಪಂದ್ಯಗಳಲ್ಲಿ ಅಜೇಯವಾಗಿರುವ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಗೆಲುವಿನ ಓಟ ವಿಸ್ತರಿಸುವ ತವಕದಲ್ಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಯಾಂಕ್ ಅಗರ್ವಾಲ್ ಪಡೆ ತನ್ನ ಐದನೇ ಲೀಗ್ ಪಂದ್ಯದಲ್ಲಿ ಶನಿವಾರ ತ್ರಿಪುರ ಸವಾಲು ಎದುರಿಸಲಿದ್ದು, 2026ರಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದೆ. ಟೀಮ್ ಇಂಡಿಯಾ ಬ್ಯಾಟರ್ ಕೆಎಲ್ ರಾಹುಲ್ ಸೇರ್ಪಡೆ ಕರ್ನಾಟಕ ತಂಡದ ಬಲ ಹೆಚ್ಚಿಸಿದೆ.
ಟೂರ್ನಿಯಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ಗೆಲುವು ದಾಖಲಿಸಿ 16 ಅಂಕ ಕಲೆಹಾಕಿರುವ  ಕರ್ನಾಟಕ ತಂಡ ನಾಕೌಟ್ ಸನಿಹದಲ್ಲಿದೆ. ಮಧ್ಯಪ್ರದೇಶ (+0.935) ರನ್ ರೇಟ್ ಆಧಾರದಲ್ಲಿ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದು, +0.616 ರನ್‌ರೇಟ್‌ನೊಂದಿಗೆ ಮಯಾಂಕ್ ಪಡೆ ನಂತರದ ಸ್ಥಾನದಲ್ಲಿದೆ. ಕರ್ನಾಟಕ ತಂಡಕ್ಕೆ ಇನ್ನು 3 ಪಂದ್ಯಗಳು ಬಾಕಿಯಿದ್ದು, ಇನ್ನೊಂದು ಗೆಲುವು ನಾಕೌಟ್ ಸ್ಥಾನ ಬಹುತೇಕ ಖಾತ್ರಿಪಡಿಸಲಿದೆ.
ಕರ್ನಾಟಕಕ್ಕೆ ಬ್ಯಾಟಿಂಗ್ ವಿಭಾಗವೇ ಹಾಲಿ ಟೂರ್ನಿಯ ಪ್ರಮುಖ ಶಕ್ತಿ ಎನಿಸಿದೆ. ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ (406 ರನ್) ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಎನಿಸಿದ್ದು, ನಾಯಕ ಮಯಾಂಕ್ ಅಗರ್ವಾಲ್ (245), ಕರುಣ್ ನಾಯರ್ (238) ಜತೆಗೆ ಕೆಎಲ್ ಶ್ರೀಜಿತ್ ಪ್ರಮುಖ ಆಧಾರಸ್ತಂಭವಾಗಿದ್ದಾರೆ. ತಂಡದ ಅಜೇಯ ಓಟದ ನಡುವೆಯೂ ಬೌಲರ್‌ಗಳಿಂದ ಸುಧಾರಿತ ನಿರ್ವಹಣೆ ಅಗತ್ಯವಿದೆ. 
ಯುವ ಬೌಲರ್‌ಗಳಿಂದ ಪರಿಣಾಮಕಾರಿ ಪ್ರದರ್ಶನ ಇದುವರೆಗೆ ಮೂಡಿಬಂದಿಲ್ಲ. ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಸ್ಥಿರ ನಿರ್ವಹಣೆಯೊಂದಿಗೆ 4 ಪಂದ್ಯಗಳಲ್ಲಿ 12 ವಿಕೆಟ್ ಕಬಳಿಸಿದ್ದಾರೆ. ತ್ರಿಪುರ ತಂಡ ಆಡಿರುವ 4 ಪಂದ್ಯಗಳಲ್ಲಿ ತಲಾ 2 ಗೆಲುವು-ಸೋಲು ಕಂಡಿದೆ. ಆಲ್ರೌಂಡರ್ ವಿಜಯ್ ಶಂಕರ್, ಆರ್‌ಸಿಬಿ ತಂಡದ ಸ್ವಪ್ನಿಲ್ ಸಿಂಗ್, ತೇಜಸ್ವಿ ಜೈಸ್ವಾಲ್ ತಂಡದ ಪ್ರಮುಖ ಆಟಗಾರರು. ಉಭಯ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ಇದಾಗಿದೆ.
ಆರಂಭ: ಬೆಳಗ್ಗೆ 9
ನೇರಪ್ರಸಾರ: ಜಿಯೋ ಹಾಟ್‌ಸ್ಟಾರ್