ಸಚಿವ ಸಂಪುಟ ಕಸರತ್ತು: ಮೊದಲ ಸುತ್ತಿನಲ್ಲಿ 8 ಹೆಸರುಗಳು ಅಂತಿಮ, ಸ್ಥಾನ ಉಳಿಸಿಕೊಳ್ಳಲು ಮಾಜಿ ಸಚಿವರ ಪೀಕಲಾಟ! Karnataka Cabinet Race
- ಸೋಮವಾರ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ಸ್ವೀಕಾರ ಮಾಡುವ ಸಾಧ್ಯತೆ
- ಡಿಕೆಶಿ ಜತೆಗೆ ಕೆಲ ಶಾಸಕರು ಕೂಡ ಸಚಿವರಾಗಿ ಪದಗ್ರಹಣ ಮಾಡುವ ಸಾಧ್ಯತೆ ಇದೆ
- ಮೊದಲ ಸುತ್ತಿನಲ್ಲಿ ಸಚಿವರಾಗಲಿರುವ 8 ಪ್ರಮುಖ ನಾಯಕರ ಹೆಸರುಗಳು ಬಹುತೇಕ ಅಂತಿಮ
- ಎರಡನೇ ಪಾಳಿಯಲ್ಲಿ ಸಚಿವ ಸ್ಥಾನ ಪಡೆಯಲಿರುವ ನಾಯಕರ ಕುರಿತೂ ಚರ್ಚೆಗಳು ಚುರುಕಾಗಿವೆ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ ರಾಜೀನಾಮೆ ಅಂಗೀಕಾರವಾದ ಬೆನ್ನಲ್ಲೇ ಸಚಿವ ಸಂಪುಟ ವಿಸರ್ಜನೆಯಾಗಿದ್ದು, ನೂತನ ಸರ್ಕಾರ ಅಸ್ತಿತ್ವ ಬರುವ ಹೊಸ್ತಿಲಲ್ಲೇ ಸಚಿವ ಸಂಪುಟ ರಚನೆಯ ( Karnataka Cabinet Race ) ದೊಡ್ಡ ಸರ್ಕಸ್ ಆರಂಭವಾಗಿದೆ.
ಸೋಮವಾರ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ಸ್ವೀಕಾರ ಮಾಡುವ ಸಾಧ್ಯತೆ ಇದ್ದು, ಡಿಕೆಶಿ ಜತೆಗೆ ಕೆಲ ಶಾಸಕರು ಕೂಡ ಸಚಿವರಾಗಿ ಪದಗ್ರಹಣ ಮಾಡುವ ಸಾಧ್ಯತೆ ಇದೆ. ಈಗಾಗಲೇ ಕೆಲವರ ಹೆಸರನ್ನು ಅಂತಿಮ ಮಾಡಲಾಗಿದೆ ಎಂಬ ವರದಿ ಇದೆ.
ಹೈಕಮಾಂಡ್ ನಾಯಕರೊಂದಿಗೆ ನಡೆದ ಸುದೀರ್ಘ ಚರ್ಚೆಗಳ ಬಳಿಕ, ಮೊದಲ ಸುತ್ತಿನಲ್ಲಿ ಸಚಿವರಾಗಲಿರುವ 8 ಪ್ರಮುಖ ನಾಯಕರ ಹೆಸರುಗಳು ಬಹುತೇಕ ಅಂತಿಮಗೊಂಡಿವೆ ಎನ್ನಲಾಗಿದೆ. ಹಿರಿಯ ನಾಯಕರಾದ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಯು.ಟಿ. ಖಾದರ್ ಮತ್ತು ಈಶ್ವರ್ ಖಂಡ್ರೆ ಅವರ ಹೆಸರುಗಳು ಮೊದಲ ಪಟ್ಟಿಯಲ್ಲಿ ಪಕ್ಕಾ ಆಗಿವೆ ಎಂದು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.
ಎರಡನೇ ಪಾಳಿಯಲ್ಲಿ ನಾಗೇಂದ್ರಗೆ ಚಾನ್ಸ್?
ಮೊದಲ ಹಂತದ ಸಂಪುಟ ವಿಸ್ತರಣೆಯ ಬೆನ್ನಲ್ಲೇ, ಎರಡನೇ ಪಾಳಿಯಲ್ಲಿ ಸಚಿವ ಸ್ಥಾನ ಪಡೆಯಲಿರುವ ನಾಯಕರ ಕುರಿತೂ ಚರ್ಚೆಗಳು ಚುರುಕಾಗಿವೆ. ಪ್ರಾದೇಶಿಕ ಮತ್ತು ಸಾಮಾಜಿಕ ಸಮೀಕರಣಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಎರಡನೇ ಹಂತದಲ್ಲಿ ರಘುಮೂರ್ತಿ ಹಾಗೂ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಲವು ತೋರಿದೆ ಎನ್ನಲಾಗಿದೆ. ಮೊದಲ ಸುತ್ತಿನಲ್ಲಿ ಮಿಸ್ ಆದ ಕೆಲವು ಪ್ರಮುಖ ಸಮುದಾಯಗಳ ನಾಯಕರಿಗೆ ಎರಡನೇ ಪಾಳಿಯಲ್ಲಿ ಆದ್ಯತೆ ನೀಡಲು ನಾಯಕರು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ.
ಸ್ಪೀಕರ್ ಗಾದಿಗೆ ಪರಂ, ಟಿಬಿಜೆ, ದಿನೇಶ್ ಮುಂಚೂಣಿಯಲ್ಲಿ
ಇನ್ನೊಂದೆಡೆ, ಅತ್ಯಂತ ಜವಾಬ್ದಾರಿಯುತವಾದ ವಿಧಾನಸಭೆಯ ಸ್ಪೀಕರ್ (ಸಭಾಧ್ಯಕ್ಷ) ಹುದ್ದೆಯನ್ನು ಅಲಂಕರಿಸಲು ಹಿರಿಯ ಮತ್ತು ಅನುಭವಿ ನಾಯಕರ ಹೆಸರುಗಳು ಮುಂಚೂಣಿಗೆ ಬಂದಿವೆ. ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಹಿರಿಯ ನಾಯಕರಾದ ಟಿ.ಬಿ. ಜಯಚಂದ್ರ (ಟಿಬಿಜೆ) ಹಾಗೂ ದಿನೇಶ್ ಗುಂಡೂರಾವ್ ಅವರ ಹೆಸರುಗಳು ಸ್ಪೀಕರ್ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಸದನವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಚಾಣಾಕ್ಷ ನಾಯಕನಿಗೆ ಈ ಗಾದಿ ಒಲಿಯುವುದು ಖಚಿತವಾಗಿದೆ.
ಸಭಾಪತಿ ಸ್ಥಾನಕ್ಕೆ ಉಮಾಶ್ರೀ, ಪುಟ್ಟಣ್ಣ, ಸಲೀಂ ಚರ್ಚೆ
ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೂ ಸಹ ತೆರೆಮರೆಯಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಹಿರಿಯ ನಾಯಕಿ ಉಮಾಶ್ರೀ, ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿ ಗೆಲುವು ಸಾಧಿಸಿರುವ ಪುಟ್ಟಣ್ಣ ಹಾಗೂ ಹಿರಿಯ ಮುಖಂಡ ಸಲೀಂ ಅಹ್ಮದ್ ಅವರ ಹೆಸರುಗಳು ಸಭಾಪತಿ ಹುದ್ದೆಯ ರೇಸ್‌ನಲ್ಲಿ ಬಲವಾಗಿ ಕೇಳಿಬರುತ್ತಿವೆ. ಹೈಕಮಾಂಡ್ ಈ ಮೂವರಲ್ಲಿ ಯಾರಿಗೆ ಮಣೆ ಹಾಕಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಸ್ಥಾನ ಉಳಿಸಿಕೊಳ್ಳಲು ಮಾಜಿ ಸಚಿವರ ಪೀಕಲಾಟ!
ಈ ಎಲ್ಲ ಬೆಳವಣಿಗೆಗಳ ನಡುವೆ, ಕಳೆದ ಅವಧಿಯಲ್ಲಿ ಸಚಿವರಾಗಿ ಕೆಲಸ ಮಾಡಿದ್ದ ಮಾಜಿ ಸಚಿವರುಗಳಿಗೆ ಈ ಬಾರಿ ಸಚಿವ ಸ್ಥಾನ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೊಸ ಮುಖಗಳಿಗೆ ಆದ್ಯತೆ ನೀಡಬೇಕು ಮತ್ತು ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಬೇಕು ಎಂಬ ಹೈಕಮಾಂಡ್ ನಿಯಮದಿಂದಾಗಿ ಹಳಬರ ಪೀಕಲಾಟ ಹೆಚ್ಚಾಗಿದೆ. ತಮಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಗಲೇಬೇಕು ಎಂದು ಮಾಜಿ ಸಚಿವರುಗಳು ದಿಲ್ಲಿ ಮಟ್ಟದಲ್ಲಿ ಭಾರಿ ಕಸರತ್ತು ನಡೆಸುತ್ತಿದ್ದಾರೆ.
ವಿಮಾನ ಪ್ರಯಾಣದಲ್ಲೇ ಸಿದ್ಧವಾಯ್ತು ಪಟ್ಟಿ
ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುವ ವಿಶೇಷ ವಿಮಾನವನ್ನೇ ಭಾವಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಹೊಸ ಸಚಿವ ಸಂಪುಟ ರಚನೆಯ ಕಾರ್ಯಾಗಾರವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂಬ ರೋಚಕ ಮಾಹಿತಿ ಹೊರಬಿದ್ದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಯಿಂದಾಗಿ ಸದ್ಯದ ಸಚಿವ ಸಂಪುಟ ರದ್ದಾಗಿದ್ದು, ಮುಂದಿನ ಶಾಸಕಾಂಗ ಪಕ್ಷದ (CLP) ಸಭೆಯ ಬಳಿಕ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಮುನ್ನವೇ ವಿಮಾನದ ಪ್ರಯಾಣದ ಅವಧಿಯಲ್ಲಿ ಡಿಕೆಶಿ ಅವರು ತಮ್ಮ ಬಣದ ನಿಷ್ಠಾವಂತ ಹಿರಿಯರು ಹಾಗೂ ಉತ್ಸಾಹಿ ಯುವ ನಾಯಕರಿಗೆ ಸ್ಥಾನ ಕಲ್ಪಿಸುವ ಸಮಗ್ರ ನೀಲಿ ನಕ್ಷೆಯನ್ನು ಅಂತಿಮಗೊಳಿಸಿದ್ದಾರೆ. ಪಕ್ಷದ ವರಿಷ್ಠರ ಒಪ್ಪಿಗೆಗಾಗಿ ಕೊಂಡೊಯ್ಯುತ್ತಿರುವ ಈ ಸಂಭಾವ್ಯ ಸಚಿವರ ಪಟ್ಟಿಯು ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ನಾಳಿನ ಸಿಎಲ್‌ಪಿ ಸಭೆಯಲ್ಲಿ ಡಿಕೆಶಿ ಸಿಎಂ ಹೆಸರು ಅಧಿಕೃತ ಘೋಷಣೆ?
ರಾಜ್ಯ ರಾಜಕಾರಣದ ಅತ್ಯುನ್ನತ ಗಾದಿಯಾದ ಮುಖ್ಯಮಂತ್ರಿ ಸ್ಥಾನದ ಆಯ್ಕೆಗೆ ಸಂಬಂಧಿಸಿದಂತೆ ನಾಳೆ ಮಹತ್ವದ ಶಾಸಕಾಂಗ ಪಕ್ಷದ (CLP) ಸಭೆ ಕರೆಯಲಾಗಿದ್ದು, ಈ ಸಭೆಯಲ್ಲೇ ಭಾರಿ ಕುತೂಹಲ ಮೂಡಿಸಿರುವ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ನೂತನ ಸಿಎಂ ಆಗಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ದಟ್ಟವಾಗಿದೆ. ನಾಳೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಬಳಿಕ ಹೈಕಮಾಂಡ್ ತೀರ್ಮಾನದಂತೆ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿ ಘೋಷಿಸಲು ವೇದಿಕೆ ಸಿದ್ಧಗೊಂಡಿದೆ.