ರಾಜ್ಯ ಬಜೆಟ್​ 2026 
ರಾಜ್ಯ

ರಾಜ್ಯ ಬಜೆಟ್​ 2026: ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಒತ್ತು! ಏನೆಲ್ಲ ಸಿಕ್ಕಿತು? ಇಲ್ಲಿದೆ ಮಾಹಿತಿ | Karnataka Budget

ಪ್ರಮುಖ ಮುಖ್ಯಾಂಶಗಳು

  • ಇಂದು 2026-27ನೇ ಸಾಲಿನ ರಾಜ್ಯ ಬಜೆಟ್​ ಮಂಡನೆ
  • ಸಿದ್ದರಾಮಯ್ಯ ಮಂಡಿಸಿದ ಬಜೆಟ್​ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಒತ್ತು
  • 150 ಸಂಖ್ಯಾಬಲದ 50 ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭ
ಬೆಂಗಳೂರು: ಸರ್ಕಾರದ ಮುಂದಿನ ದಿಕ್ಸೂಚಿಯಾಗಿ ಇಂದು ಸಿಎಂ ಸಿದ್ದರಾಮಯ್ಯ ಮಂಡಿಸಿರುವ 2026-27ನೇ ಸಾಲಿನ ರಾಜ್ಯ ಬಜೆಟ್​ನಲ್ಲಿ (Karnataka Budget ) ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹಲವು ಮಹತ್ವದ ಕೊಡುಗೆಗಳೇ ಲಭಿಸಿವೆ. ಹಾಗಿದ್ದರೆ, ಈ ಬಾರಿಯ ಬಜೆಟ್​ನಲ್ಲಿ ಏನೆಲ್ಲ ಸಿಕ್ಕಿವೆ? ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ ಬನ್ನಿ.
ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಬೆಳಗಾವಿ, ಕಲಬುರಗಿ, ದಾವಣಗೆರೆ, ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ 150 ಸಂಖ್ಯಾಬಲದ 50 ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಐದು ಕೋಟಿ ರೂ. ಘಟಕ ವೆಚ್ಚದಲ್ಲಿ 50 ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡಗಳ ನಿರ್ಮಾಣ ಹಾಗೂ ಬೆಂಗಳೂರು, ಮೈಸೂರು ನಗರದ ದೋಬಿಘಾಟ್‌ಗಳಲ್ಲಿ ಮಡಿವಾಳ ಸಮಾಜದವರಿಗೆ ತಲಾ 75 ಲಕ್ಷ ರೂ. ಘಟಕ ವೆಚ್ಚದಲ್ಲಿ ಆಧುನಿಕ ಲಾಂಡ್ರಿಗಳ ಸ್ಥಾಪಿಸಲಾಗುವುದು ಎಂದರು.

2 ಲಕ್ಷ ರೂ. ಸಾಲ, ಬಡ್ಡಿ ಮನ್ನಾ

250 ಇಂಜಿನಿಯರಿಂಗ್‌ ಪದವೀಧರರಿಗೆ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ NIT/IIT/IIM ಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತರಬೇತಿ ಪಡೆಯಲು ತಲಾ ಎರಡು ಲಕ್ಷ ರೂ.ಗಳ ಸಾಲ ನೀಡಲಾಗುವುದು. 31.03.2021ರ ಅಂತ್ಯದವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ನಿಗಮಗಳಿಂದ ಪಡೆದ ಸಾಲದ ಅಸಲನ್ನು ಪಾವತಿ ಮಾಡುವವರಿಗೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಒಂದಾವರ್ತಿ ತೀರುವಳಿ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಇನ್ನು ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿ, ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಒಂದು ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು. ವಿಶ್ವವಿದ್ಯಾನಿಲಯಗಳಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳಿಗೆ ನೀಡುವ ಸೌಲಭ್ಯಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ-1ರಡಿ ಬರುವ 46 ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ವಿದ್ಯಾರ್ಥಿಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಘೋಷಿಸಿದರು.