- ಇಂದು 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆ
- ಸಿಎಂ ಸಿದ್ದರಾಮಯ್ಯ ಅವರ ದಾಖಲೆಯ 17ನೇ ಬಜೆಟ್
- ಸವಿತಾ ಮತ್ತು ಮಡಿವಾಳ ಸಮಾಜದವರಿಗೆ ಸಹಾಯಧನ ಘೋಷಣೆ
ಬೆಂಗಳೂರು: ಇಂದು (ಮಾ.06) ರಾಜ್ಯ ಸರ್ಕಾರದ 2026-27ನೇ ಸಾಲಿನ ಬಹುನಿರೀಕ್ಷಿತ ಆಯವ್ಯಯ (ಬಜೆಟ್) ಮಂಡನೆಯಾಗಿದ್ದು, ಈ ಬಾರಿಯ ಬಜೆಟ್‌ನ ಒಟ್ಟು ಗಾತ್ರ ಬರೋಬ್ಬರಿ 4,48,004 ಕೋಟಿ ರೂ. ಆಗಿದೆ. 2025-26ನೇ ಸಾಲಿನ ಪರಿಷ್ಕೃತ ಅಂದಾಜು 3,95,307 ಕೋಟಿ ರೂ.ಗಳಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬಜೆಟ್ ಗಾತ್ರದಲ್ಲಿ ಗಣನೀಯ ಏರಿಕೆಯಾಗಿದೆ.
ಸಿಎಂ ಮಂಡಿಸಿರುವ 17ನೇ ದಾಖಲೆಯ ಬಜೆಟ್ ಇದಾಗಿದ್ದು, ಅಭಿವೃದ್ಧಿ ವೆಚ್ಚದಲ್ಲಿ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಹಾಗೂ ಇಂಧನ ಇಲಾಖೆಗಳಿಗೆ ಅತಿ ಹೆಚ್ಚು ಅನುದಾನ ಮೀಸಲಿಡಲಾಗಿದೆ. ಹಲವು ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಸಿಂಹಪಾಲು ನೀಡಿರುವ ರಾಜ್ಯ ಸರ್ಕಾರ, ಸವಿತಾ ಸಮಾಜದವರಿಗೆ ಸಲೂನ್ (ಕೇಶ ಮುಂಡನೆ) ತೆರೆಯಲು ಶೇ.4ರಷ್ಟು ಬಡ್ಡಿ ದರದಲ್ಲಿ 10 ಲಕ್ಷ ರೂ. ಸಹಾಯಧನ ಘೋಷಿಸಿದೆ.
ಇನ್ನು ಅದೇ ರೀತಿಯಲ್ಲಿ, ಮಡಿವಾಳ ಸಮಾಜದವರಿಗೆ ಆಧುನಿಕ ಲಾಂಡ್ರಿ ಸ್ಥಾಪಿಸಲು ಶೇ.4ರಷ್ಟು ಬಡ್ಡಿ ದರದಲ್ಲಿ 5 ಲಕ್ಷ ರೂ. ಸಾಲ ನೀಡುವುದಾಗಿ ಬಜೆಟ್‌ನಲ್ಲಿ ತಿಳಿಸಿದೆ. ಬೌದ್ಧ ಧರ್ಮದ ಧಮ್ಮಾಚರಿಗಳಿಗೆ ಮಾಸಿಕ 6 ಸಾವಿರ ಗೌರವ ಧನ ಮತ್ತು ಜೈನ್, ಬೌದ್ಧ, ಸಿಖ್ ಸಮುದಾಯಗಳ ಕಲ್ಯಾಣಕ್ಕೆ 100 ಕೋಟಿ ರೂ. ನೀಡಲಾಗುವುದು. ಇದರೊಟ್ಟಿಗೆ ಆಯ್ದ ವಕ್ಫ್ ಆಸ್ತಿಗಳಲ್ಲಿ ಕಲಿಕಾ ಕೇಂದ್ರ ಹಾಗೂ ನಾಗರಿಕ ಸೇವಾ ಕೇಂದ್ರವನ್ನು ತೆರೆಯಲಾಗುವುದು.
ಸಿಎಂ ದಾಖಲೆ ಬಜೆಟ್
ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ (2026-27 ಸಾಲಿನ ರಾಜ್ಯ ಆಯವ್ಯಯ) ಕರ್ನಾಟಕ ಇತಿಹಾಸದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ. ಏಕೆಂದರೆ, ಯಾವುದೇ ಮುಖ್ಯಮಂತ್ರಿ ಇಷ್ಟೊಂದು ಬಾರಿ ಬಜೆಟ್ ಮಂಡಿಸಿಲ್ಲ. ಸುಮಾರು 4.2 ರಿಂದ 4.5 ಲಕ್ಷ ಕೋಟಿ ಗಾತ್ರದ ಈ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ (ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ) ಮುಖ್ಯ ಆದ್ಯತೆ ನೀಡಲಾಗಿದ್ದು, ಆದಾಯ ಕೊರತೆ, ಜಿಎಸ್‌ಟಿ ಸುಧಾರಣೆಯಿಂದ ಉಂಟಾದ ನಷ್ಟ ಮತ್ತು ಹೆಚ್ಚುತ್ತಿರುವ ಖರ್ಚುಗಳ ನಡುವೆಯೂ ಮಹಿಳೆಯರು, ರೈತರು, ಯುವಕರು, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ (ವಿಶೇಷವಾಗಿ ಬೆಂಗಳೂರು ಮತ್ತು ಹಿಂದುಳಿದ ಪ್ರದೇಶಗಳು) ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ.