ಸರ್ಕಾರದ ಆದಾಯ ಹೆಚ್ಚಿಸಲು ವಿವಿಧ ಇಲಾಖೆಗಳಿಗೆ ರೆವಿನ್ಯೂ ಟಾರ್ಗೆಟ್: ಯಾವ ಇಲಾಖೆಗೆ ಎಷ್ಟೆಷ್ಟು? Karnataka Budget 2026-27
- ಇಂದು ತಮ್ಮ 17ನೇ ದಾಖಲೆಯ ಬಜೆಟ್ ಮಂಡನೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ
- ಬಜೆಟ್‌ನಲ್ಲಿ ವಿವಿಧ ಇಲಾಖೆಗಳಿಗೆ ತೆರಿಗೆ ಸಂಗ್ರಹಕ್ಕೆ ಟಾರ್ಗೆಟ್ ಸೆಟ್ ಮಾಡಿದ ಸರ್ಕಾರ
- ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸಲು ಸ್ಪಷ್ಟ ಯೋಜನೆ ಹಾಕಿಕೊಂಡಿರುವುದು ಬಜೆಟ್‌ನಲ್ಲಿ ಸ್ಪಷ್ಟ
Karnataka Budget 2026-27: ಸರ್ಕಾರದ ಮುಂದಿನ ದಿಕ್ಸೂಚಿಯಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡನೆ ಮಾಡುತ್ತಿರುವ ಬಜೆಟ್‌ನಲ್ಲಿ ವಿವಿಧ ಇಲಾಖೆಗಳಿಗೆ ತೆರಿಗೆ ಸಂಗ್ರಹಕ್ಕೆ ಸರ್ಕಾರ ಟಾರ್ಗೆಟ್ ಸೆಟ್ ಮಾಡಿದೆ.
ತನ್ನ ಗ್ಯಾರಂಟಿ ಯೋಜನೆಗಳಿಗೆ ಬಹುಪಾಲು ಆದಾಯ ವಿನಿಯೋಗ ಮಾಡಿರುವ ರಾಜ್ಯ ಸರ್ಕಾರ, ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸಲು ಸ್ಪಷ್ಟ ಯೋಜನೆ ಹಾಕಿಕೊಂಡಿರುವುದು ಬಜೆಟ್ ಮಂಡನೆಯಲ್ಲಿ ಗೋಚರಿಸುತ್ತಿದೆ. ವಿವಿಧ ಇಲಾಖೆಗೆ ರೆವಿನ್ಯೂ ಟಾರ್ಗೆಟ್ ನೀಡಿರುವುದನ್ನು ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
ಯಾವ ಇಲಾಖೆಗೆ ಎಷ್ಟು ಟಾರ್ಗೆಟ್?
* ಸಾರಿಗೆ ಇಲಾಖೆಗೆ 15500 ಕೋಟಿ ಟಾರ್ಗೆಟ್
* ನೊಂದಣಿ ಮುದ್ರಾಂಕ 29000 ಕೋಟಿ ಟಾರ್ಗೆಟ್
* ಅಬಕಾರಿ ಇಲಾಖೆಗೆ 45000 ಕೋಟಿ ಟಾರ್ಗೆಟ್
* ಗಣಿ ಇಲಾಖೆಗೆ 11000 ಕೋಟಿ ಟಾರ್ಗೆಟ್
ಆಯಾ ಇಲಾಖೆಗಳಿಗೆ ರೆವಿನ್ಯೂ ಟಾರ್ಗೆಟ್ ನೀಡುವುದರಿಂದ ಸರ್ಕಾರಕ್ಕೆ ಮುಖ್ಯ ಲಾಭವೇನೆಂದರೆ, ರಾಜ್ಯದ ಸ್ವಂತ ಆದಾಯ ಹೆಚ್ಚಳವಾಗುತ್ತದೆ. ಇದರಿಂದ ಗುರಿ ನಿಗದಿಪಡಿಸಿದ ಇಲಾಖೆಗಳು (ವಾಣಿಜ್ಯ ತೆರಿಗೆ, ಮದ್ಯನಿಷೇಧ, ಸ್ಟಾಂಪ್‌ಗಳು, ರೀಜಿಸ್ಟ್ರೇಷನ್, ಟ್ರಾನ್ಸ್‌ಪೋರ್ಟ್, ಖನಿಜ ಇತ್ಯಾದಿ) ತೆರಿಗೆ ಸಂಗ್ರಹ, ಶುಲ್ಕ ವಸೂಲಿ ಮತ್ತು ಇತರ ಆದಾಯ ಮೂಲಗಳಲ್ಲಿ ಹೆಚ್ಚಿನ ಶ್ರಮ ಹಾಕುತ್ತವೆ. ಇದು ಸರ್ಕಾರದ ಒಟ್ಟಾರೆ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಇದರಿಂದ ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು, ಸಾಲದ ಹೊರೆ ಕಡಿಮೆ ಮಾಡುವುದು ಮತ್ತು ಬಜೆಟ್‌ನಲ್ಲಿ ಕೊರತೆ ತುಂಬುವುದು ಸುಲಭವಾಗುತ್ತದೆ, ಹೀಗೆ ಸರ್ಕಾರದ ಹಣಕಾಸು ಸ್ವಾವಲಂಬನೆ ಹೆಚ್ಚಿ, ಜನರಿಗೆ ಹೆಚ್ಚಿನ ಸೇವೆಗಳನ್ನು ಒದಗಿಸಲು ಸಹಾಯಕವಾಗುತ್ತದೆ.
ಸಿಎಂ ದಾಖಲೆ ಬಜೆಟ್
ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ (2026-27 ಸಾಲಿನ ರಾಜ್ಯ ಆಯವ್ಯಯ) ಕರ್ನಾಟಕ ಇತಿಹಾಸದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ. ಏಕೆಂದರೆ, ಯಾವುದೇ ಮುಖ್ಯಮಂತ್ರಿ ಇಷ್ಟೊಂದು ಬಾರಿ ಬಜೆಟ್ ಮಂಡಿಸಿಲ್ಲ. ಸುಮಾರು 4.48 ಲಕ್ಷ ಕೋಟಿ ಗಾತ್ರದ ಈ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ (ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ) ಮುಖ್ಯ ಆದ್ಯತೆ ನೀಡಲಾಗಿದ್ದು, ಆದಾಯ ಕೊರತೆ, ಜಿಎಸ್‌ಟಿ ಸುಧಾರಣೆಯಿಂದ ಉಂಟಾದ ನಷ್ಟ ಮತ್ತು ಹೆಚ್ಚುತ್ತಿರುವ ಖರ್ಚುಗಳ ನಡುವೆಯೂ ಮಹಿಳೆಯರು, ರೈತರು, ಯುವಕರು, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ (ವಿಶೇಷವಾಗಿ ಬೆಂಗಳೂರು ಮತ್ತು ಹಿಂದುಳಿದ ಪ್ರದೇಶಗಳು) ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ.