Rotten Potatoes Chips in Devanahalli
- ಕೊಳೆತ ಹಾಗೂ ಗಲೀಜು ನೀರಿನಿಂದ ತೊಳೆದ ಆಲೂಗಡ್ಡೆಯಿಂದ ಚಿಪ್ಸ್ ತಯಾರಿ
- ದೇವನಹಳ್ಳಿಯ ಸಮೀಪವಿರುವ ವಿಜಯಪುರ ಎನ್ನುವ ಗ್ರಾಮದಲ್ಲಿರುವ ಚಿಪ್ಸ್ ಅಂಗಡಿ ಸೀಜ್
- ಚಿಪ್ಸ್ ತಿಂದು ಮಗುವೊಂದಕ್ಕೆ ಕೆಮ್ಮು, ವಾಂತಿ ಶುರುವಾಗಿದ್ದಕ್ಕೆ ಮಾಹಿತಿ ಬಹಿರಂಗ
Rotten Potatoes Chips in Devanahalli: ಕೊಳೆತ ಆಲೂಗಡ್ಡೆ ಹಾಗೂ ಗಲೀಜು ನೀರಿನಿಂದ ತೊಳೆದ ಆಲೂಗಡ್ಡೆಯಿಂದ ಚಿಪ್ಸ್ ತಯಾರಿಸಲಾಗುತ್ತಿದೆ ಎನ್ನುವ ಆರೋಪದ ಮೇರೆಗೆ ದೇವನಹಳ್ಳಿಯ ಸಮೀಪವಿರುವ ವಿಜಯಪುರ ಎನ್ನುವ ಗ್ರಾಮದಲ್ಲಿ ಆಹಾರ ಮತ್ತು ಆರೋಗ್ಯಾಧಿಕಾರಿಗಳು ದಾಳಿ ನಡೆಸಿ, ಸೀಲ್ ಮಾಡಿದ್ದಾರೆ ಎನ್ನಲಾಗಿದೆ.
ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ಶ್ರೀ ಸಾಯಿರಾಮ್ ಹಾಟ್ ಚಿಪ್ಸ್ ಎನ್ನುವ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಆಹಾರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.
ನಡೆದಿದ್ದೇನು?
ಸ್ಥಳೀಯ ನಿವಾಸಿ ವೆಂಕಟೇಶ್ ಎನ್ನುವವರು ತಮ್ಮ ಮಕ್ಕಳಿಗೆ ಚಿಪ್ಸ್ ಇಷ್ಟವೆಂದು ಈ ಮಳಿಗೆಯಿಂದ ಖರೀದಿ ಮಾಡಿದ್ದರು. ಇದನ್ನು ಮಂಗಳವಾರ ಮಧ್ಯಾಹ್ನ ತಿಂದ ಮಗು ವಾಂತಿ ಮಾಡುವಂತೆ, ಜೋರು ಕೆಮ್ಮು ಕಾಣಿಸಿಕೊಂಡಿತ್ತು. ಯಾಕೆ ಎಂದು ಪ್ಯಾಕೆಟ್ ಬಿಚ್ಚಿ ನೋಡಿದಾಗ, ಕಪ್ಪು ಚುಕ್ಕೆಯುಳ್ಳ ಕೊಳೆತ ಆಲೂಗಡ್ಡೆಯಿಂದ ಇದನ್ನು ತಯಾರಿ ಮಾಡಿರಬಹುದು ಎನ್ನುವುದು ಬೆಳಕಿಗೆ ಬಂದಿತು.
ಈ ಹಿನ್ನೆಲೆ ಕೂಡಲೇ ಅಂಗಡಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ತಾಲ್ಲೂಕು ಆಸ್ಪತ್ರೆ ಆರೋಗ್ಯಾಧಿಕಾರಿ ಹಾಗೂ ಪುರಸಭೆ ಆರೋಗ್ಯಾಧಿಕಾರಿಗೆ ದೂರು ಕೊಟ್ಟೆವು ಎಂದು ಸ್ಥಳೀಯ ನಿವಾಸಿ ವೆಂಕಟೇಶ್ ಹೇಳಿದ್ದಾರೆ.
ತಾಲ್ಲೂಕು ಆರೋಗ್ಯಾಧಿಕಾರಿ ಹಫೀಜ್, ಆಹಾರ ಇಲಾಖೆಯ ಪ್ರವೀಣ್, ಪುರಸಭೆ ಆರೋಗ್ಯಾಧಿಕಾರಿ ಲಾವಣ್ಯ ಅವರು ದಾಳಿ ನಡೆಸಿದರು. ಅಂಗಡಿಯಲ್ಲಿ ಮಾರಾಟವಾಗುತ್ತಿದ್ದ ಚಿಪ್ಸ್ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜೊತೆಗೆ ಇದು ತಿನ್ನಲು ಯೋಗ್ಯವೇ ಎನ್ನುವುದರ ಪರಿಶೀಲನೆ ಮಾಡಲಾಗುತ್ತಿದೆ ಎನ್ನಲಾಗಿದೆ. ಅಂಗಡಿ ಮಾಲೀಕ ತಮಿಳುನಾಡಿನಲ್ಲಿರುವ ಕಾರಣಮಳಿಗೆ ಸಿಬ್ಬಂದಿಗೆ ನೋಟಿಸ್ ಕೊಟ್ಟು, ಬಾಗಿಲು ಮುಚ್ಚಿಸಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).