ಕಾರ್ಕಹಳ್ಳಿ ಬಸವೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕೆ.ಎಂ.ದೊಡ್ಡಿ: ಭಕ್ತರ ಹರ್ಷೋದ್ಗಾರ, ಪಟಾಕಿಗಳ ಚಿತ್ತಾರ, ತಮಟೆ ವಾದ್ಯ, ಪೂಜಾ ಕುಣಿತದ ಕಲಾಮೇಳದೊಂದಿಗೆ ಕಾರ್ಕಹಳ್ಳಿ ಬಸವೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ನೆರವೇರಿತು.
ತಾಲೂಕು ಆಡಳಿತದ ನೇತ್ವದಲ್ಲಿ ಜರುಗಿದ ರಥೋತ್ಸವಕ್ಕೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಪವಾಡ ಬಸವಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ರಥದಲ್ಲಿದ್ದ ಶ್ರೀ ಬಸವೇಶ್ವರ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ ರಥ ಎಳೆಯುವುದರ ಮೂಲಕ ಶಾಸಕ ಕದಲೂರು ಉದಯ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿ ನಾಡು ಸಮೃದ್ಧವಾಗಿ ರೈತರು ಉತ್ತಮ ಬೆಳೆ ಬೆಳೆಯಲು ಅನುಕೂಲವಾಗಿ ಪ್ರಗತಿ ಸಾಧಿಸಲಿ ಸರ್ವರಿಗೂ ಒಳಿತಾಗಲಿ ಎಂದು ಆಶಿಸಿದರು.
ರಥೋತ್ಸವ ನಡೆಯುವ ಮುನ್ನ ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ, ಕಾರ್ಕಹಳ್ಳಿ ಶ್ರೀ ಬಸವೇಶ್ವರ ಬಸಪ್ಪ ಹಾಗೂ ಗ್ರಾಮ ದೇವತೆ ಶ್ರೀ ಪಟ್ಟಲದಮ್ಮ ಸೇರಿದಂತೆ ಇತರ ದೇವತೆಗಳ ಮೆರವಣಿಗೆ ಮೂಲಕ ಬಸವೇಶ್ವರ ದೇವರ ವಿಗ್ರಹವನ್ನು ರಥೋತ್ಸವ ಸ್ಥಳಕ್ಕೆ ಕರೆತರಲಾಯಿತು. ನಂತರ ಸಾಂಪ್ರದಾಯಿಕ ಪೂಜೆಯೊಂದಿಗೆ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಅಲ್ಲದೆ ದೇವರಮೂರ್ತಿಗೆ ದೇವಾಲಯದ ಅರ್ಚಕರು ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿದರು.
ರಥೋತ್ಸವಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ದೇವರನ್ನು ಮನದಲ್ಲಿ ನೆನೆದು, ರಥಕ್ಕೆ ಹಣ್ಣು ಮತ್ತು ಜವನ ಎಸೆದು ತಮ್ಮ ಭಕ್ತಿ ಪ್ರದರ್ಶಿಸಿದರು. ಪೂಜಾ ಕುಣಿತ ತಂಡ ತನ್ನ ಕಲಾ ಪ್ರದರ್ಶನ ನೀಡಿ ರಥೋತ್ಸವಕ್ಕೆ ಮೆರುಗು ನೀಡಿತು. ರಥೋತ್ಸವಕ್ಕೆ ಅಗತ್ಯ ತಯಾರಿಯನ್ನು ದೇವೇಗೌಡನದೊಡ್ಡಿ, ಮೆಣಸಗೆರೆ ಗ್ರಾಮದವರು ಮಾಡಿದ್ದರು. ಸುತ್ತಮುತ್ತಲ ಗ್ರಾಮಗಳಿಂದಷ್ಟೆ ಅಲ್ಲದೆ ನಾನಾ ಜಿಲ್ಲೆಗಳಿಂದಲೂ ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು.
ರಥೋತ್ಸವಕ್ಕೆ ಆಗಮಿಸಿದ್ದ ಚಿಕ್ಕರಸಿನಕೆರೆ ಕಾಲಭೈರವೇಶ್ವರನ ಬಸಪ್ಪ ಹಾಗೂ ಕಾರ್ಕಹಳ್ಳಿ ಬಸವೇಶ್ವರ ಬಸಪ್ಪನಿಗೆ ಹಾಕಲಾಗಿದ್ದ 500, 100ರ ನೋಟುಗಳೇ ಆಭರಣಗಳಾಗಿತ್ತು. 5 ದಿನ ನಡೆದ ಜಾತ್ರೆಯಲ್ಲಿ ಎತ್ತ ನೋಡಿದರೂ ತಿಂಡಿ, ತಿನಿಸುಗಳು ಮತ್ತು ಮಕ್ಕಳ ಆಟಿಕೆ ಸಾಮಗ್ರಿಗಳ ಅಂಗಡಿಗಳೇ ಕಂಡುಬರುತ್ತಿದ್ದವು. ವ್ಯಾಪಾರಸ್ಥರಿಗೂ ಭರ್ಜರಿ ವ್ಯಾಪಾರ ನಡೆಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಭಾರತೀನಗರ ಪೊಲೀಸ್ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್‌ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.