ಶ್ರೀರಂಗಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಸಮೀಪದ ಪುರಾಣ ಪ್ರಸಿದ್ದ ಕರಿಘಟ್ಟ ಬೆಟ್ಟದಲ್ಲಿ ಗುರುವಾರ ಶ್ರೀ ವೆಂಕಟರಮಸ್ವಾಮಿ ದೇವರ ಬ್ರಹ್ಮರಥೋತ್ಸವ ಸಾವಿರಾರು ಭಕ್ತರು ಹಾಗೂ ಜನರೊಂದಿಗೆ ಸಂಭ್ರಮ ಹಾಗೂ ಸಡಗರದಿ ವಿಜೃಂಭಣೆಯಿಂದ ನೇರವೇರಿತು. 
ರಾಜ್ಯ

ಕರಿಘಟ್ಟ ಶ್ರೀವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿ

ಶ್ರೀರಂಗಪಟ್ಟಣ: ಕರಿಘಟ್ಟದ ಕ್ಷೇತ್ರಪಾಲಕ ಶ್ರೀ ವೆಂಕಟರಮಣಸ್ವಾಮಿ ದೇವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ನೆರವೇರಿತು.
ತಾಲೂಕಿನ ಶ್ರೀನಿವಾಸ ಅಗ್ರಹಾರ ಸಮೀಪದ ಬೆಟ್ಟದ ಮೇಲೆ ಗುರುವಾರ ಮುಂಜಾನೆ ದೇವಾಲಯದ ವೈದಿಕರು ಹಾಗೂ ಮೆಟ್ಟಿಲೋತ್ಸವ ಸಮಿತಿ ಸದಸ್ಯರ ಸಮ್ಮುಖದಲ್ಲಿ ಗರುಡೋತ್ಸವದೊಂದಿಗೆ ಏಕಶಿಲೆಯ ಭಗವಂತನಿಗೆ ಏಕಾರತಿ, ದಟ್ಟಾರತಿ, ನಿತ್ಯ ಕೈಂಕರ್ಯ ಪೂಜೆ, ನಿತ್ಯ ಆರಾಧನೆ ಸೇವೆ, ಅಷ್ಟಾವಧನ ಸೇವೆ ಸೇರಿದಂತೆ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ಅರ್ಪಿಸಿ ಹೋಮ-ಹವನದ ಮೂಲಕ ಯಾತ್ರದಾನ ನೆರವೇರಿಸಲಾಯಿತು.
ಬಳಿಕ ನಿತ್ಯ ಕೈಂಕರ್ಯ ಆಚಾರವಾಗಿ ಕೈಗೊಂಡು ಮೆಟ್ಟಿಲೋತ್ಸವ ಸೇವೆ, ಅವ್ಯಾರ್ಚನ ಸೇವೆಯೊಂದಿಗೆ ಲಕ್ಷ್ಮೀದೇವಿ, ಅಲುಮೇಲು ಮಂಗಮ್ಮ ಸಮೇತ ಶ್ರೀನಿವಾಸ ದೇವರ ಪಂಚಲೋಹದ ಉತ್ಸವಮೂರ್ತಿಯನ್ನು ಅರ್ಚಕ ಅಭಿಷೇಕ್ ನೇತೃತ್ವದಲ್ಲಿ ವಿಶೇಷ ವರ್ಣರಂಜಿತ ವಸ್ತ್ರ ಹಾಗೂ ಹೂವುಗಳಿಂದ ಸರ್ವಾಲಂಕೃತಗೊಂಡಿದ್ದ ಬ್ರಹ್ಮರಥಕ್ಕೆ ಪ್ರತಿಷ್ಠಾಪಿಸಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಸೀಲ್ದಾರ್ ಚೇತನಾ ಯಾದವ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ ಹಾಗೂ ಇನ್‌ಸ್ಪೆಪೆಕ್ಟರ್ ಬಿ.ಜಿ.ಕುಮಾರ್ ಅವರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ನಂತರ ಹಲವು ಗ್ರಾಮಗಳ ಸಾವಿರಾರು ಗ್ರಾಮಸ್ಥರು ತೇರನ್ನು ಬೆಟ್ಟದ ಮೇಲಿನ ದೇಗುಲದ ಸುತ್ತಲು ಭಕ್ತಿಭಾವದಿಂದ ಎಳೆದರು. ಈ ವೇಳೆ ಶ್ರೀನಿವಾಸನಿಗೆ ಗೋವಿಂದ, ನಾರಾಯಣ, ಶ್ರೀನಿವಾಸ, ವೆಂಕಟರಮಣ ಎಂಬಿತ್ಯಾದಿ ನಾಮಾಂಕಿತದಿಂದ ಕೂಗುತ್ತಿದ್ದ ಭಕ್ತರು, ನವ ವಧು-ವರ ಜೋಡಿಗಳು ಹಾಗೂ ಹರಕೆ ಹೊತ್ತಿದ್ದ ಜನರು ರಥಕ್ಕೆ ಹಣ್ಣು-ದವನ ಎಸೆದರು.
ದಿನಪೂರ್ತಿ ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಯೋಗ ಶ್ರೀನಿವಾಸ, ಭೋಗ ಶ್ರೀನಿವಾಸ ಸಮೇತ ತುಳಸಿಮಾಲೆ ಸೇರಿದಂತೆ ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ ಶ್ರೀನಿವಾಸ ವೆಂಕಟರಣಸ್ವಾಮಿ ದೇವರ ದರ್ಶನವನ್ನು ಭಕ್ತರು ಸರತಿ ಸಾಲಿನಲ್ಲಿ ನಿಂತು ಪಡೆದರು.
ಬೆಟ್ಟಕ್ಕೆ ಸುಡುವ ಬಿಸಿನಲ್ಲೂ ಸಾವಿರ ಮೆಟ್ಟಿಲು ಏರಿ ಆಗಮಿಸುತ್ತಿದ್ದ ಹಾಗೂ ಆವರಣದಲ್ಲಿ ಜಮಾಯಿಸಿದ್ದ ಭಕ್ತರಿಗೆ ಮಜ್ಜಿಗೆ, ಸಿಹಿ ಪಾನಕ, ಕೋಸಂಬರಿ, ಕಲ್ಲಂಗಡಿ, ಕರ್ಬೂಜ ಹಾಗೂ ಅನ್ನ ಪ್ರಸಾದವನ್ನು ಅಲ್ಲಲ್ಲಿ ದಾನಿಗಳು ನೀಡುತ್ತಿದ್ದದ್ದು ಕಂಡುಬಂದಿತು. ಬೆಟ್ಟದ ಸುತ್ತಮುತ್ತಲ ಗ್ರಾಮಗಳಾದ ಶ್ರೀನಿವಾಸ ಅಗ್ರಹಾರ, ಕೆ.ಶೆಟ್ಟಹಳ್ಳಿ, ಗೌರಿಪುರ, ಚಿನ್ನನಾಯಕಹಳ್ಳಿ, ಮರಳಗಾಲ, ಬಾಬುರಾಯನಕೊಪ್ಪಲು, ಕಿರಂಗೂರು, ಗಂಜಾಂ ಗ್ರಾಮಗಳು, ಶ್ರೀರಂಗಪಟ್ಟಣ, ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಿಂದಲೂ ಭಕ್ತರು ಆಗಮಿಸಿದ್ದರು. ದೇವಾಲಯದ ಸುತ್ತಮುತ್ತ ಕಟ್ಟಿದ್ದ ಅಂಗಡಿಮುಂಗಟ್ಟುಗಳಲ್ಲಿ ಮಹಿಳೆಯರು ಮಕ್ಕಳು ಹುರುಪಿನಿಂದ ಖರೀದಿ ಮಾಡಿ ಸಂಭ್ರಮಿಸಿದರು. ದೇಗುಲದಲ್ಲಿ ನೂತನ ಕಲ್ಯಾಣ ಮಂಟಪ, ಕೊಠಡಿ ನಿರ್ಮಾತೃ ದಾನಿಗಳಾದ ವಿಶ್ವನಾಥ್ ಹಾಗೂ ದೇಗುಲಕ್ಕೆ ಸಂಪೂರ್ಣ ಹೂವಿನ ಅಲಂಕಾರ ನೆರವೇರಿಸಿದ್ದ ಲೋಕೇಶ್ ಕುಟುಂಬಸ್ಥರು ಉಪಸ್ಥಿತರಿದ್ದರು.