Kargil Vijay Diwas > "ಕಾರ್ಗಿಲ್ ವಿಜಯ್ ದಿವಸ್' ಸಭಾ ಕಾರ್ಯಕ್ರಮಕ್ಕೆ ಸಂಸದ ಡಾ.ಸಿ.ಎನ್. ಮಂಜುನಾಥ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ತುಮಕೂರು: ಕನ್ನಡದ ನಂ.1 ದಿನಪತ್ರಿಕೆ "ವಿಜಯವಾಣಿ"ಯು ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ "ಕಾರ್ಗಿಲ್ ವಿಜಯ್ ದಿವಸ್" ಕಾರ್ಯಕ್ರಮವು ವೀರಯೋಧರ ಶೌರ್ಯ ಮತ್ತು ರಾಷ್ಟ್ರಭಕ್ತಿಯ ಸಂದೇಶವನ್ನು ಸಾರ್ವಜನಿಕರಿಗೆ ಸಾರಿತು.
ಹುತಾತ್ಮ ಸೇನಾನಿಗಳ ಸ್ಮರಣಾರ್ಥ ಏರ್ಪಡಿಸಲಾಗಿದ್ದ 3 ಕಿ.ಮೀ ವಾಕಥಾನ್ಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿದರು. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು "ಭಾರತ್ ಮಾತಾ ಕಿ ಜೈ", "ವಂದೇ ಮಾತರಂ" ಮತ್ತು "ಜೈ ಹಿಂದ್" ಘೋಷಣೆಗಳನ್ನು ಮೊಳಗಿಸಿದರು.
ದೇಶಭಕ್ತಿ ಗೀತೆಯೊಂದಿಗೆ ವಿದ್ಯಾರ್ಥಿಗಳು ಮತ್ತು ಎನ್ಸಿಸಿ ಕೆಡೆಟ್ಗಳು 250 ಅಡಿ ಉದ್ದದ ತಿರಂಗಾ ಹಿಡಿದು ಹೆಜ್ಜೆ ಹಾಕಿದರು. ಈ ಮೂಲಕ ಭಾರತೀಯ ಯೋಧರ ಶೌರ್ಯ, ತ್ಯಾಗ ಹಾಗೂ ಬಲಿದಾನಕ್ಕೆ ಗೌರವ ನಮನ ಸಲ್ಲಿಸಲಾಯಿತು. ಬಳಿಕ, "ಕಾರ್ಗಿಲ್ ವಿಜಯ್ ದಿವಸ್" ಸಭಾ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಸಂಸದ ಡಾ.ಸಿ.ಎನ್. ಮಂಜುನಾಥ್ ಚಾಲನೆ ನೀಡಿದರು. ಇದೇ ವೇಳೆ ಸೈನಿಕರನ್ನು ಸನ್ಮಾನಿಸಲಾಯಿತು. ಸಪ್ತಗಿರಿ ಎನ್ಪಿಎಸ್ ಯೂನಿವರ್ಸಿಟಿ ಡೆಪ್ಯುಟಿ ರಿಜಿಸ್ಟ್ರಾರ್ ಮತ್ತು ಸಪ್ತಗಿರಿ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಚಾರ್ಯ ಡಾ.ತುಳಸೀದಾಸ್, ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆ ಚೇರ್ಮನ್ ಡಾ.ಎಂ.ಆರ್.ಹುಲಿನಾಯ್ಕರ್, ಸಿದ್ದಿಬಯೋ ಎಂಡಿ ಎನ್.ಆರ್.ಅಕ್ಷಯ್, ವಿಆರ್ಎಲ್ ಮೀಡಿಯಾ ಪೆ.ಲಿ.ಉಪಾಧ್ಯಕ್ಷ ಕೆ.ಆರ್.ಅರುಣ್, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ ಮತ್ತಿತರರಿದ್ದರು.
ಯಾವುದೇ ದೇಶ ಆಕ್ರಮಣ ಮಾಡಿದರೆ ಗೆಲ್ಲುತ್ತೇವೆ: ಕಾರ್ಗಿಲ್ ಯುದ್ಧವು ಭಾರತದ ಮಿಲಿಟರಿ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಿದರೆ, "ಆಪರೇಷನ್ ಸಿಂಧೂರ" ಕಾರ್ಯಾಚರಣೆಯಿಂದ ದೇಶದ ರಕ್ಷಣಾ ಶಕ್ತಿಯನ್ನು ಇಡೀ ಜಗತ್ತು ಮೆಚ್ಚಿಕೊಂಡಿದೆ. ಹಾಗಾಗಿ, ವಿಶ್ವದ ಯಾವುದೇ ರಾಷ್ಟ್ರವು ನಮ್ಮ ಮೇಲೆ ಆಕ್ರಮಣ ಮಾಡಿದರೆ ನಾವು ಗೆಲ್ಲುತ್ತೇವೆ ಎಂದು ಡಾ.ಸಿ.ಎನ್. ಮಂಜುನಾಥ್ ಹೇಳಿದರು. ಕಾರ್ಗಿಲ್ ಯುದ್ಧ ಬಹಳ ವಿಶೇಷವಾದದ್ದು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅತಿ ಎತ್ತರದ ಪ್ರದೇಶದಲ್ಲಿ ಭಾರತದ ಸೈನಿಕರು ಕೆಳಗಡೆ ಮತ್ತು ಪಾಕಿಸ್ತಾನದ ಸೈನಿಕರು ಮೇಲಗಡೆ ಇದ್ದರು. ಪ್ರತಿಕೂಲ ವಾತಾವರಣದಲ್ಲಿ ಯುದ್ಧ ಮಾಡುವುದು ಸುಲಭವಲ್ಲ. ಕೊರೆಯುವ ಚಳಿ, ಮಂಜಿನಲ್ಲಿಯೂ ಸೈನಿಕರು ಮತ್ತು ವಾಯುಸೇನೆ ಜಂಟಿಯಾಗಿ ಶತ್ರುಗಳನ್ನು ಸದೆಬಡಿಯಿತು. ಈ ಮೂಲಕ ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶ ಪ್ರಚಂಡ ವಿಜಯ ಸಾಧಿಸಿತು. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ತಾಣಗಳನ್ನು ಕ್ಷಣಾರ್ಧದಲ್ಲೇ ಧ್ವಂಸ ಮಾಡಲಾಯಿತು. ಈ ಮೂಲಕ ಬ್ರಹ್ಮೋಸ್ ಮಿಸೈಲ್ ಶಕ್ತಿ ಇಡೀ ವಿಶ್ವಕ್ಕೆ ಗೊತ್ತಾಯಿತು ಎಂದರು. ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಾಪಡೆ ಶಕ್ತಿ, ದೇಶದ ರಕ್ಷಣಾ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ಪರಿಚಯಿಸಲಾಯಿತು. ಆತ್ಮರಕ್ಷಣೆಗೆ ಧಕ್ಕೆ ಬಂದಾಗ ಮಾತ್ರ ನಮ್ಮ ದೇಶ, ಶತ್ರುಗಳ ಮೇಲೆ ಯುದ್ಧ ಮಾಡುತ್ತದೆ ಹೊರತು ಪ್ರಚೋದನೆಗಾಗಿ ಯುದ್ಧ ಮಾಡುವುದಿಲ್ಲ ಎಂದರು.
ಕಾರ್ಗಿಲ್ ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಿದ ಸಂಸದ ಡಾ.ಸಿ.ಎನ್.ಮಂಜುನಾಥ. ಬೇರೆ ದೇಶಕ್ಕೆ ರಪ್ತು
ರಕ್ಷಣಾ ಕ್ಷೇತ್ರದಲ್ಲಿ ನಮ್ಮ ದೇಶವು ಹಲವು ಸುಧಾರಣೆ ಕಂಡಿದೆ. ಕಳೆದ ಬಜೆಟ್ನಲ್ಲಿ ಕೇಂದ್ರ ಸರ್ಕಾರವು, ರಕ್ಷಣಾ ಕ್ಷೇತ್ರದ ಬಲವರ್ಧನೆಗೆ ಮತ್ತು ಆಧುನೀಕರಣಕ್ಕೆ ಬರೋಬ್ಬರಿ 8 ಲಕ್ಷ ಕೋಟಿ ರೂ. ಅನುದಾನ ಕೊಟ್ಟಿದೆ. "ಆತ್ಮನಿರ್ಭರ ಭಾರತ" ಹಾಗೂ "ಮೇಕ್ ಇನ್ ಇಂಡಿಯಾ" ಪರಿಕಲ್ಪನೆಯಡಿ ಭಾರತವು ಶೇಕಡ 30 ಯುದ್ಧೋಪಕರಣಗಳು, ಯುದ್ಧವಿಮಾನಗಳು, ನೌಕೆಗಳು, ಹೆಲಿಕಾಪ್ಟರ್ಗಳು, ಯುದ್ಧನೌಕೆಗಳು ಮತ್ತು ಬ್ರಹ್ಮೋಸ್ ಮಿಸೈಲ್ ಸೇರಿ ಅನೇಕ ಯುದ್ಧ ಸಾಮಗ್ರಿ ತಯಾರಿಸುತ್ತಿದೆ. ಕೆಲವು ಮಿಸೈಲ್ಗಳನ್ನು ಉತ್ಪಾದಿಸಿ ಬೇರೆ ದೇಶಕ್ಕೆ ರಫ್ತು ಮಾಡುವ ಹಂತಕ್ಕೆ ನಾವು ಬೆಳೆದಿದ್ದೇವೆ ಎಂದು ದೇಶದ ರಕ್ಷಣಾ ಸಾಮರ್ಥ್ಯದ ಬಗ್ಗೆ ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟಿಡ್ಗೆ (ಎಚ್ಎಎಲ್) 97 ಯುದ್ಧವಿಮಾನ ತಯಾರಿಸಲು ಕೇಂದ್ರವು 63 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ದೇಶದ ಸುತ್ತಮುತ್ತ ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾದೇಶದಂತಹ ಶತ್ರುರಾಷ್ಟ್ರಗಳಿವೆ. ಇಂತಹ ರಾಷ್ಟ್ರಗಳ ವಿರುದ್ಧ ಹೋರಾಟ ನಡೆಸಲು ನಮ್ಮ ದೇಶವು ಬಲಿಷ್ಠವಾಗಿದೆ ಎಂದರು.
ಯುದ್ಧ ಸಾರಿದ್ದ ದೇಶಕ್ಕೆ ಬುದ್ಧನ ಕೊಟ್ಟಿದ್ದು ಭಾರತ
ಕೊಪ್ಪಳ: "ಬಾಯಲ್ಲಿ ಭಾಯಿ, ಭಾಯಿ... ಎಂದು ಹೇಳಿ ಹಿಂದಿನಿಂದ ಯುದ್ಧ ಸಾರಿದ್ದ ಚೀನಾಕ್ಕೆ ಬುದ್ಧನಂಥವನನ್ನು ನೀಡಿದ್ದು ಭಾರತ. ನಾವು ಯುದ್ಧಪ್ರಿಯರಲ್ಲ. ಶಾಂತಿಪ್ರಿಯರು" ಎಂದು ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ವಿಜಯವಾಣಿಯಿಂದ ಸಿವಿಸಿ ಫೌಂಡೇಷನ್ ಸಹಯೋಗದಲ್ಲಿ ನಗರದ ಪಾನಂಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 27ನೇ ಕಾರ್ಗಿಲ್ ವಿಜಯ ದಿವಸ್ ಹಾಗೂ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕೊಪ್ಪಳದಲ್ಲಿ ವಿಜಯವಾಣಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಿವಿಸಿ ಫೌಂಡೇಷನ್ ಅಧ್ಯಕ್ಷ ಸಿ.ವಿ.ಚಂದ್ರಶೇಖರ, ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಕ್ರೀಡಾಧಿಕಾರಿ ವಿಠ್ಠಲ ಜಾಬಗೌಡರ, ಹಿರಿಯ ವಕೀಲ ರಾಘವೇಂದ್ರ ಪಾನಂಟಿ ಇದ್ದರು. ಕಾರ್ಗಿಲ್ ಕೇವಲ ಯುದ್ಧವಲ್ಲ. ಭಾರತೀಯರ ಹೆಮ್ಮೆ, ತ್ಯಾಗ, ಬಲಿದಾನದ ಸಂಕೇತ. ನಾವು ಮತ್ತು ನೀವೆಲ್ಲ ಬಂದೂಕು ಹಿಡಿದು ಹೋರಾಡಲಾಗದು. ಕೈಯಲ್ಲಿ ಝಂಡಾ ಹಿಡಿದು, ಮನದಲ್ಲಿ ಬೇರೆ ಅಜೆಂಡಾ ಇಟ್ಟುಕೊಂಡವರು ದೇಶಭಕ್ತರಲ್ಲ. ದೇಶಕ್ಕೆ ಭಾರವಾಗದಂತೆ ಬದುಕುವವರೇ ನಿಜ ಭಾರತೀಯರು. ಕಸ ತೆಗೆಯುವುದು, ದಾರಿಯಲ್ಲಿ ಅಡ್ಡ ಬಿದ್ದ ಕಲ್ಲನ್ನು ಪಕ್ಕಕ್ಕೆ ಸರಿಸುವುದೂ ದೇಶಸೇವೆ. ಮಕ್ಕಳಿಗೆ ಇಂಥ ವಿಷಯ ತಿಳಿಸುವ ಕೆಲಸ ಮಾಡಿದ ವಿಜಯವಾಣಿ, ಸಿವಿಸಿ ಫೌಂಡೇಷನ್ ಕಾರ್ಯ ಶ್ಲಾಘನೀಯ ಎಂದರು.
ಗಮನ ಸೆಳೆದ ವಾಕಥಾನ್: ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಕೊಪ್ಪಳದ ಸಾರ್ವಜನಿಕ ಮೈದಾನದಿಂದ ಪಾನಂಟಿ ಕಲ್ಯಾಣ ಮಂಟಪವರೆಗೆ ಎರಡು ಕಿ.ಮೀ ವಾಕಥಾನ್ ನಡೆಯಿತು. 100 ಅಡಿ ತ್ರಿವರ್ಣ ಧ್ವಜ ಹಿಡಿದ ವಿವಿಧ ಶಾಲಾ ಮತ್ತು ಕಾಲೇಜುಗಳ 600ಕ್ಕೂ ಹೆಚ್ಚು ಮಕ್ಕಳು ರಾಷ್ಟ್ರಭಕ್ತಿ ಘೋಷಣೆ ಕೂಗಿ ಜಾಗೃತಿ ಮೂಡಿಸಿದರು. ಸಾವಿರಾರು ಮಕ್ಕಳು ಭಾಗಿಯಾದರು. ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ 11 ನಿವೃತ್ತ ಸೈನಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕೊಪ್ಪಳದಲ್ಲಿ ವಿಜಯವಾಣಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಿವಿಸಿ ಫೌಂಡೇಷನ್ ಅಧ್ಯಕ್ಷ ಸಿ.ವಿ.ಚಂದ್ರಶೇಖರ, ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಕ್ರೀಡಾಧಿಕಾರಿ ವಿಠ್ಠಲ ಜಾಬಗೌಡರ, ಹಿರಿಯ ವಕೀಲ ರಾಘವೇಂದ್ರ ಪಾನಂಟಿ ಇದ್ದರು.