ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ
- 4,839 ಸರ್ಕಾರಿ ಪ್ರೌಢ ಶಾಲೆಯ 8,07,334 ಮಕ್ಕಳಿಗೆ ಯೋಜನೆ ಲಾಭ ದೊರೆಯಲಿದ್ದು, ಇದಕ್ಕಾಗಿ 4.35 ಕೋಟಿ ರೂ. ಅನುದಾನಕ್ಕೆ ಅನುಮೋದನೆ
- 5647 ಹಿರಿಯ ಪ್ರಾಥಮಿಕ ಶಾಲೆಯ 5,21,850 ಮಕ್ಕಳಿಗಾಗಿ 5.08 ಕೋಟಿ ರೂ. ಅನುದಾನ ಬಿಡುಗಡೆಗೆ ಕೇಂದ್ರ ಶಿಕ್ಷಣ ಮಂತ್ರಾಲಯವು ಅನುಮೋದನೆ
- ‘ರಾಣಿ ಲಕ್ಷ್ಮೀಬಾಯಿ ಆತ್ಮರಕ್ಷಾ ಪ್ರಶಿಕ್ಷಣ’ (ಕರಾಟೆ) ಎಂಬ ತರಬೇತಿ ಆರಂಭಿಸುವುದಾಗಿ ಶಿಕ್ಷಣ ಇಲಾಖೆ ಆದೇಶ
- ಉತ್ತಮ ಮತ್ತು ಕೆಟ್ಟ ಸ್ಪರ್ಶ, ಸುರಕ್ಷಿತ ವರ್ತನೆ ಹಾಗೂ ಕಾನೂನುಬದ್ಧ ಹಕ್ಕುಗಳ ಬಗ್ಗೆ ಜಾಗೃತಿ
ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಆತ್ಮರಕ್ಷಣೆ, ಮಕ್ಕಳ ರಕ್ಷಣೆಗಿರುವ ಕಾನೂನುಗಳ ಅರಿವು ಸೇರಿ ಒಟ್ಟು ಸ್ವಯಂ ರಕ್ಷಣೆಗಾಗಿ ‘ರಾಣಿ ಲಕ್ಷ್ಮೀಬಾಯಿ ಆತ್ಮರಕ್ಷಾ ಪ್ರಶಿಕ್ಷಣ’ (ಕರಾಟೆ) ಎಂಬ ತರಬೇತಿ ಆರಂಭಿಸುವುದಾಗಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಪ್ರತಿಕೂಲ ಸನ್ನಿವೇಶಗಳಲ್ಲಿ ರಕ್ಷಿಸಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿರುವಂತೆ ಮಾಡುವ ಉದ್ದೇಶದಿಂದ ಸ್ವರಕ್ಷಣಾ ಕೌಶಲಗಳನ್ನು ಕಲಿಸಲಾಗುತ್ತಿದೆ. 2026-27ನೇ ಸಾಲಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕೇಂದ್ರ ಶಿಕ್ಷಣ ಮಂತ್ರಾಲಯವು ಅನುಮತಿ ನೀಡಿದೆ. ಜತೆಗೆ, ಅನುದಾನವನ್ನು ಕೂಡ ನೀಡಿದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿದೇಶಕರು ಆದೇಶ ಹೊರಡಿಸಿದ್ದಾರೆ.
13 ಲಕ್ಷ ವಿದ್ಯಾರ್ಥಿಗಳಿಗೆ ಯೋಜನೆ ಲಾಭ:
4,839 ಸರ್ಕಾರಿ ಪ್ರೌಢ ಶಾಲೆಯ 8,07,334 ಮಕ್ಕಳಿಗೆ ಯೋಜನೆ ಲಾಭ ದೊರೆಯಲಿದ್ದು, ಇದಕ್ಕಾಗಿ 4.35 ಕೋಟಿ ರೂ. ಅನುದಾನಕ್ಕೆ ಅನುಮೋದನೆ ದೊರೆತಿದೆ. 5647 ಹಿರಿಯ ಪ್ರಾಥಮಿಕ ಶಾಲೆಯ 5,21,850 ಮಕ್ಕಳಿಗಾಗಿ 5.08 ಕೋಟಿ ರೂ. ಅನುದಾನ ಬಿಡುಗಡೆಗೆ ಕೇಂದ್ರ ಶಿಕ್ಷಣ ಮಂತ್ರಾಲಯವು ಅನುಮೋದನೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯೋಜನೆ ಉದ್ದೇಶ
- ವಿದ್ಯಾರ್ಥಿಗಳಲ್ಲಿ ಸ್ವರಕ್ಷಣಾ ಕೌಶಗಳನ್ನು ಬೆಳೆಸಿ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು
- ವೈಯಕ್ತಿಕ ಸುರಕ್ಷತೆ, ಸೈಬರ್ ಭದ್ರತೆ ಮತ್ತು ತುರ್ತು ಪರಿಸ್ಥಿತಿಗಳ ನಿರ್ವಹಣೆ ಕುರಿತು ಅರಿವು
- ದೈಹಿಕ- ಮಾನಸಿಕ ಸ್ಥೈರ್ಯ, ಲಿಂಗ ಸಮಾನತೆ ಹಾಗೂ ಪರಸ್ಪರ ಗೌರವದ ಮನೋಭಾವ ಬೆಳೆಸುವುದು
- ಉತ್ತಮ ಮತ್ತು ಕೆಟ್ಟ ಸ್ಪರ್ಶ, ಸುರಕ್ಷಿತ ವರ್ತನೆ ಹಾಗೂ ಕಾನೂನುಬದ್ಧ ಹಕ್ಕುಗಳ ಬಗ್ಗೆ ಜಾಗೃತಿ
ತರಬೇತಿ ಅನುಷ್ಠಾನ ಹೇಗೆ?
- ಜಿಲ್ಲಾವಾರು 100ಕ್ಕಿಂತ ಹೆಚ್ಚು ದಾಖಲಾತಿಯುಳ್ಳ ಆಯ್ದ ಸರ್ಕಾರಿ ಹಾಗೂ 50ಕ್ಕಿಂತ ಹೆಚ್ಚು ದಾಖಲಾತಿಯುಳ್ಳ ಹಿರಿಯ ಪ್ರಾಥಮಿಕ ಶಾಲೆಗಳ ಆಯ್ಕೆ
- ಬ್ಯಾಚ್‌ವಾರು ವಿದ್ಯಾರ್ಥಿಗಳನ್ನು ವಿಂಗಡಣೆ ಮಾಡಿ, ಮಧ್ಯಾಹ್ನದ ನಂತರದ ತರಗತಿಗಳಲ್ಲಿ ಅಥವಾ ಶನಿವಾರ ತರಬೇತಿ ನೀಡುವುದು
- ಸೆಪ್ಟೆಂಬರ್‌ನಿಂದ ಆರಂಭಿಸಿ ನವೆಂಬರ್‌ನೊಳಗೆ ತರಬೇತಿ ಪೂರ್ಣಗೊಳಿಸಿದ ಬಳಿಕ ಅನುದಾನ ಬಿಡುಗಡೆಯಾಗಲಿದೆ
- ವಾರದಲ್ಲಿ ಮೂರು ದಿನಗಳಂತೆ ಮೂರು ತಿಂಗಳ 36 ಗಂಟೆ ತರಬೇತಿ ನೀಡಬೇಕು
- ತರಬೇತಿ ವೇಳೆ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಕಿಟ್ ಮತ್ತು ಧ್ವನಿವರ್ಧಕದ ವ್ಯವಸ್ಥೆ ಕಲ್ಪಿಸಬೇಕು
ತರಬೇತುದಾರರ ಅರ್ಹತೆ, ಮಾನದಂಡ
-ಕನಿಷ್ಠ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರಬೇಕು ಮತ್ತು ಮಾನ್ಯತೆ ಪಡೆದ ಕರಾಟೆ ಸಂಸ್ಥೆಯಿಂದ ಪ್ರಮಾಣಪತ್ರ ಹೊಂದಿರಬೇಕು
- ಕನಿಷ್ಠ 2ರಿಂದ 3 ವರ್ಷಗಳ ಕರಾಟೆ ತರಬೇತಿ ನೀಡಿದ ಅನುಭವ ಇರಬೇಕು
- ಪ್ರತಿ ತಿಂಗಳ ಮೂರು ಸಾವಿರದಂತೆ ಒಂಭತ್ತು ಸಾವಿರ ರೂ. ಗೌರವಧನ ನೀಡುವುದು
ಯಾವುದೇ ಸಂದರ್ಭದಲ್ಲಿ ಮಕ್ಕಳು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಸಹಾಯವಾಗಲಿ ಎಂಬ ಉದ್ದೇಶದಿಂದ ಕರಾಟೆ ತರಬೇತಿ ನೀಡಲಾಗುತ್ತಿದೆ.
— - ಕೆ. ವಿದ್ಯಾಕುಮಾರಿ, ರಾಜ್ಯ ಯೋಜನಾ ನಿರ್ದೆಶಕರು, ಸಮಗ್ರ ಶಿಕ್ಷಣ ಕರ್ನಾಟಕ