ಡ್ರಮ್ಮರ್ ದೇವ ನಿಧನ! 
ರಾಜ್ಯ

ಕನ್ನಡದ ಶಿವಮಣಿ ಖ್ಯಾತಿಯ ಡ್ರಮ್ಮರ್ ದೇವ ನಿಧನ! | Drummer Deva

ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ಸಂಗೀತ ಲೋಕದಲ್ಲಿ ಕನ್ನಡದ ಶಿವಮಣಿ ಎಂದೇ ಖ್ಯಾತಿ ಗಳಿಸಿದ್ದ ಡ್ರಮ್ಮರ್ ದೇವ (64) ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಸ್ಕಂದಶ್ರೀ ಅಪಾರ್ಟ್‌ಮೆಂಟ್‌ನ ತಮ್ಮ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದು, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ದೇವ ಅವರಿಗೆ ಗ್ಯಾಂಗ್ರೀನ್ ಬಾಧಿಸಿದ್ದರಿಂದ ಶಸ್ತ್ರಚಿಕಿತ್ಸೆ ಮೂಲಕ ಬಲಗಾಲನ್ನು ತೆರವುಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಅವರಿಗೆ ಪಾರ್ಶ್ವವಾಯು (ಸ್ಟ್ರೋಕ್) ಕೂಡ ಎದುರಾಗಿದ್ದರಿಂದ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಕ್ಷೀಣಿಸಿತ್ತು. ವೈದ್ಯರ ಸಲಹೆಯಂತೆ ಮನೆಯಲ್ಲೇ ನಿರಂತರ ವೈದ್ಯಕೀಯ ಆರೈಕೆ ನೀಡಲಾಗುತ್ತಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾಗಿದ್ದಾರೆ.

ಹಿರಿಯ ನಟ ವಿ ರವಿಚಂದ್ರನ್​ ಜೊತೆ ದೇವ್​

ಸಂಗೀತ ರಂಗಕ್ಕೆ ತಳಹಂತದಿಂದ ಬಂದ ದೇವ ಅವರು, ಆರಂಭದಲ್ಲಿ ವಾದ್ಯಸಂಗೀತ ತಂಡಗಳಲ್ಲಿ ಉಪಕರಣಗಳನ್ನು ಒರೆಸುವ ಮತ್ತು ನಿರ್ವಹಿಸುವ ಕೆಲಸ ಮಾಡುತ್ತಿದ್ದರು. ಆದರೆ, ಸಂಗೀತದ ಮೇಲಿನ ಅಪಾರ ಪ್ರೀತಿ ಹಾಗೂ ನಿರಂತರ ಶ್ರಮದಿಂದ ಪ್ರತಿಭಾವಂತ ಡ್ರಮ್ಸ್ ವಾದಕರಾಗಿ ಬೆಳೆದರು. ಭಾರತೀಯ ಸಂಗೀತ ದೈತ್ಯ ಇಳಯರಾಜ ಸೇರಿದಂತೆ ಕನ್ನಡದ ಹಿರಿಯ ಸಂಗೀತ ನಿರ್ದೇಶಕರಾದ ಹಂಸಲೇಖ ಮತ್ತು ಸಾಧು ಕೋಕಿಲ ಅವರ ವಾದ್ಯವೃಂದಗಳಲ್ಲಿ ಪ್ರಮುಖ ಡ್ರಮ್ಮರ್ ಆಗಿ ದೀರ್ಘಕಾಲ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ.

ರೆಬೆಲ್ ಸ್ಟಾರ್​ ಅಂಬರೀಶ್​ ಜೊತೆ ಶಿವಮಣಿ
ದೇವ್​ ಜೊತೆ ಡ್ರಮ್​ ಬಾರಿಸಿದ್ದ ನಟ ಸುದೀಪ್​

ವಾದ್ಯಗಾರರಾಗಿಷ್ಟೇ ಅಲ್ಲದೆ 5 ಈಡಿಯಟ್ಸ್ ಹಾಗೂ ಪ್ರೀತಿ ನೀ ಹಿಂಗ್ಯಾಕೆ ನಂತಹ ಕೆಲವು ಕನ್ನಡ ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ ಪಂದ್ಯಗಳ ವೇಳೆ ತಮ್ಮ ಲೈವ್ ಡ್ರಮ್ ಬೀಟ್ಸ್‌ ಮೂಲಕ ಸಾವಿರಾರು ಅಭಿಮಾನಿಗಳಲ್ಲಿ ಉತ್ಸಾಹ ತುಂಬುತ್ತಿದ್ದ ಇವರ ಶೈಲಿ ಕ್ರೀಡಾಭಿಮಾನಿಗಳ ಮನಗೆದ್ದಿತ್ತು. ಕನ್ನಡದ ಶಿವಮಣಿ ಎಂದೇ ಗುರುತಿಸಿಕೊಂಡಿದ್ದ ದೇವ ಅವರ ಅಗಲಿಕೆಗೆ ಚಿತ್ರರಂಗ, ಸಂಗೀತ ಕ್ಷೇತ್ರ ಹಾಗೂ ಅಪಾರ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.