Kannada needs encouragement on the border
ಪಾವಗಡ: ಅನ್ಯಭಾಷೆ ಪ್ರಭಾವವಿರುವ ಗಡಿಭಾಗದಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ದೊರೆಯಬೇಕಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ನ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ನಗರ, ಪಟ್ಟಣ ಎನ್ನದೆ ತಾಲೂಕು, ಹೋಬಳಿ, ಹಳ್ಳಿಯ ಮೂಲೆ ಮೂಲೆಗೂ ಕನ್ನಡದ ಘನತೆ ಪಸರಿಸುತ್ತಿದೆ. ಈ ಕಾರ್ಯದಲ್ಲಿ ತೊಡಗಿಸಿಕೊಂಡು ಸಂಸ್ಥೆಯನ್ನು ಮುನ್ನಡೆಸಿದ ಪ್ರತಿಯೊಬ್ಬರೂ ಸಂಸ್ಥೆಯ ಮೂಲಕ ಕನ್ನಡ ನಾಡು-ನುಡಿಯ ಸೇವೆಗಾಗಿ ಸಮರ್ಪಿಸಿಕೊಂಡಿದ್ದಾರೆ ಎಂದರು.
ಕೋಶಾಧ್ಯಕ್ಷ ಪ್ರಭಾಕರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸತಿಯ ಉಳಿವಿಗಾಗಿ ಶ್ರಮಿಸುತ್ತಿರುವ ಪ್ರಮುಖ ಸ್ವಾಯತ್ತ ಸಂಸ್ಥೆಯಾಗಿದೆ. ಇದರ ಸದಸ್ಯರಾಗಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ ಎಂದರು.