ಕನ್ನಡ ಮೊದಲು ಬಳಗ ಆಯೋಜಿಸಿದ್ದ ಮೊದಲ ದುಂಡು ಮೇಜಿನ ಸಭೆ 
ರಾಜ್ಯ

ಕನ್ನಡ ಕಲಿಸದ ಶಾಲೆಗಳ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾದ ಕನ್ನಡ ಮೊದಲು ಬಳಗ

ಪ್ರಮುಖ ಮುಖ್ಯಾಂಶಗಳು

  • ಭಾಷಾ ಅಧಿನಿಯಮ ಪಾಲನೆ ಆಗದಿದ್ದರೆ ಬಿಇಒ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
  • ರಾಜ್ಯ ವ್ಯಾಪ್ತಿ ಹೋರಾಟ ಮಾಡುತ್ತೇವೆ ಎಂದು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ
  • ಕನ್ನಡ ಭಾಷೆಯನ್ನು ಕನ್ನಡದ ಮಕ್ಕಳು ಕಲಿಯದಿದ್ದರೆ ಭಾಷೆಯ ಅಭಿವೃದ್ಧಿ ಕಷ್ಟವಾಗುತ್ತದೆ
ಬೆಂಗಳೂರು: ಕನ್ನಡ ಭಾಷಾ ಅಧಿನಿಯಮ 2015ರ ಪ್ರಕಾರ ರಾಜ್ಯದ ಎಲ್ಲ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡವನ್ನು ಮೊದಲನೇ ಅಥವಾ ಎರಡನೇ ಭಾಷೆಯಾಗಿ ಕಲಿಸದಿದ್ದರೆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವ ಜತೆಗೆ ಕಾನೂನು ಹೋರಾಟ ಮಾಡುವುದಾಗಿ ‘ಕನ್ನಡ ಮೊದಲು ಬಳಗ’ ನಿರ್ಣಯ ಕೈಗೊಂಡಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಕನ್ನಡ ಮೊದಲು ಬಳಗ ಆಯೋಜಿಸಿದ್ದ ಮೊದಲ ದುಂಡು ಮೇಜಿನ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಜತೆಗೆ ಭಾಷಾ ಅಧಿನಿಯಮ ಪಾಲನೆ ಆಗದಿದ್ದರೆ ಬಿಇಒ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ. ಈ ವಿಚಾರದ ಮೂಲಕ ರಾಜ್ಯ ವ್ಯಾಪ್ತಿ ಹೋರಾಟ ಮಾಡುತ್ತೇವೆ ಎಂದು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಸಭೆಯಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ, ಇಂಗ್ಲಿಷ್ ಶಾಲೆಗಳಲ್ಲಿ ಆಂಗ್ಲ ಭಾಷೆಯನ್ನು ಕಲಿಸುತ್ತಾ ಕಡ್ಡಾಯವಾಗಿ ಒಂದು ಅಥವಾ ಎರಡನೇ ಭಾಷೆಯಾಗಿ ಕನ್ನಡವನ್ನು ಕಲಿಸಬೇಕು. ಕನ್ನಡ ಭಾಷೆಯನ್ನು ಕನ್ನಡದ ಮಕ್ಕಳು ಕಲಿಯದಿದ್ದರೆ ಭಾಷೆಯ ಅಭಿವೃದ್ಧಿ ಕಷ್ಟವಾಗುತ್ತದೆ ಎಂದು ಹೇಳಿದರು.
ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿ, ಕನ್ನಡ ಭಾಷಾ ಅಧಿನಿಯಮ 2015 ಜಾರಿಯಲ್ಲಿದ್ದು ಅದನ್ನು ಮತ್ತೆ ಸಮಗ್ರ ಭಾಷಾ ಅಧಿನಿಯಮ 2023ರಲ್ಲಿ ಅದನ್ನು ಎತ್ತಿ ಹಿಡಿದಿದ್ದರೂ ಶಾಲೆಗಳು ಕನ್ನಡವನ್ನು ಈಗಲೂ ಮೂರನೇ ಭಾಷೆಯಾಗಿ ಕಳಿಸುತ್ತಿರುವುದು ಶಾಲೆಗಳು ಮಾಡುತ್ತಿರುವ ನಾಡ ದ್ರೋಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಮೊದಲು ಬಳಗದ ಅಧ್ಯಕ್ಷ ಜ್ಞಾನೇಶ್ವರ್ ಮಾತನಾಡಿ, ಎಲ್ಲ ಶಾಲೆಗಳು ಕನ್ನಡವನ್ನು ಒಂದು ಅಥವಾ ಎರಡನೇ ಭಾಷೆಯಾಗಿ ಮಾತ್ರ ಕಲಿಸಬೇಕು. ಕನ್ನಡದ ಶಿಕ್ಷಣದ ನೀತಿ ಜಾರಿಯಾದರೆ ಜನಸಾಮಾನ್ಯರ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವುದರ ಮೂಲಕ ಕನ್ನಡದ ಭಾಷೆ ಬೆಳೆಯುತ್ತದೆ, ಉಳಿಯುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಕನ್ನಡಪರ ಹೋರಾಟಗಾರರಾದ ಧರ್ಮೇಂದ್ರ ಅರೇನಹಳ್ಳಿ, ನೇ.ಭ. ರಾಮಲಿಂಗಶೆಟ್ಟಿ, ಪಾಲನನೇತ್ರ ಸೇರಿ ಹಲವರು ಉಪಸ್ಥಿತರಿದ್ದರು.
"

ಕನ್ನಡವನ್ನು ಮೂರನೇ ಭಾಷೆಯಾಗಿ ಆಯ್ಕೆ ನೀಡುತ್ತಿರುವ ಶಾಲೆಗಳು ಕಾನೂನು ಉಲ್ಲಂಘನೆ ಮಾಡುತ್ತಿವೆ. ಇದನ್ನು ತುರ್ತಾಗಿ ಸರ್ಕಾರ ನಿಲ್ಲಿಸಲು ಕಾರ್ಯಪ್ರವೃತ್ತರಾಗಬೇಕು.

— - ಡಾ. ವಿ. ನಾಗೇಂದ್ರ ಪ್ರಸಾದ್, ಚಿತ್ರ ಸಾಹಿತಿ