ಕರ್ನಾಟಕದ ನಿಜವಾದ ಆಸ್ತಿ ಇಲ್ಲಿನ ಜ್ಞಾನ, ಸಂಸ್ಕೃತಿ ಮತ್ತು ಪ್ರತಿಭೆಯಾಗಿದ್ದು, ಅದರ ಹಿರಿಮೆಗಾಗಿ ದುಡಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯ ಮೂಲಕ ಗೌರವಿಸಲಾಗಿದೆ. ಈ ಸಾಧಕರ ಬದುಕು ಮತ್ತು ಸೇವೆ ಮುಂದಿನ ಪೀಳಿಗೆಗೆ ಪ್ರೇರಣೆ ಎಂದು ಸಿಎಂ ಡಿ.ಕೆ.ಶಿವಕುಮಾರ ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಹೊಂದುವುದರ ಜತೆಗೆ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬೇಕು. ಇಂದು 71 ಸಾಧಕರನ್ನು ಸನ್ಮಾನಿಸಿದ್ದೇವೆ. ಆದರೆ ಲಕ್ಷಾಂತರ ಜನರು ಕನ್ನಡ ನೆಲ-ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯಕ್ಕಾಗಿ ದುಡಿಯುತ್ತಿದ್ದಾರೆ. ಈ 71 ಜನರ ಮೂಲಕ ಆ ಎಲ್ಲ ಸಾಧಕರನ್ನು ಗೌರವಿಸುವ ಕೆಲಸ ಮಾಡಿದ್ದೇವೆ.
ಕನ್ನಡದ ವಿಚಾರದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಅವಕಾಶವಿರಬಾರದು. ವಿವಿಧ ರಾಜಕೀಯ ಪಕ್ಷಗಳಲ್ಲಿರುವವರೂ ಕನ್ನಡಕ್ಕಾಗಿ ದುಡಿದಿದ್ದಾರೆ. ಅವರನ್ನು ನಾಡಿನ ಸೇವೆಯ ದೃಷ್ಟಿಯಿಂದ ಗುರುತಿಸಬೇಕು. ಕನ್ನಡದ ಪರವಾಗಿ ದುಡಿದವರನ್ನು ಪಕ್ಷಾತೀತವಾಗಿ ಗುರುತಿಸುವುದು ಸರ್ಕಾರದ ಜವಾಬ್ದಾರಿ. ನಾಡಿನ ಏಕೀಕರಣಕ್ಕಾಗಿ ಹಲವು ಹಿರಿಯರು ದುಡಿದಿದ್ದಾರೆ. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕರ್ನಾಟಕ ಎಂಬ ನಾಮಕರಣವನ್ನು ಮಾಡಿದ ದೇವರಾಜು ಅರಸು ಅವರ ಹೆಸರು ಎಂದೆಂದೂ ಶಾಶ್ವತವಾಗಿರಲಿದೆ. ಕನ್ನಡಿಗರ ಸ್ವಾಭಿಮಾನದ ನಾಡಧ್ವಜವನ್ನು ಅಧಿಕೃತಗೊಳಿಸುವ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸುತ್ತೇವೆ. ಸಂವಿಧಾನದಲ್ಲಿ ಅದಕ್ಕೆ ಅವಕಾಶವಿದ್ದು, ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಸಿಎಂ ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಬಿ.ವಿ.ಆಚಾರ್ಯ, ಕರ್ನಾಟಕದ ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿ ತೆರೇಸಾ ಭಟ್ಟಾಚಾರ್ಯ, ಕೃಷಿತಜ್ಞ ಚನ್ನಪ್ಪಗೌಡ, ಹಿರಿಯ ಲೇಖಕಿ ಇಂದಿರಾ ಹೆಗಡೆ, ರಾಜಗುರು ಬಿ.ಎಸ್.ದ್ವಾರಕಾನಾಥ, ವಾಸ್ತುತಜ್ಞ ಬಿ.ಪಿ.ಹರೀಶ್ ಆರಾಧ್ಯ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಜಿ.ಎಸ್.ಪಾಟೀಲ್, ಸಭಾಪತಿ ಸಲೀಂ ಅಹಮದ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಪ್ರಧಾನ ಕಾರ್ಯದರ್ಶಿ ಮಂಜುಶ್ರೀ, ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಉಪಸ್ಥಿತರಿದ್ದರು.
ಆಯ್ಕೆ ಹಿಂದಿನ ರಹಸ್ಯ ಬಿಚ್ಚಿಟ್ಟ ಸಿಎಂ
ಕನ್ನಡದ ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಈ ಹಿಂದೆ ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಚಿತ್ರನಟ ಅಶೋಕ್ ಅವರಿಗೆ ಇಂದು ಪ್ರಶಸ್ತಿ ನೀಡಿದ್ದೇವೆ. ಹೋರಾಟಗಾರರಾಗಿದ್ದ ವಾಟಾಳ್ ನಾಗರಾಜ್ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ ಅವರೇ ನಯವಾಗಿ ನಿರಾಕರಿಸಿ, ತಮ್ಮ ಹೆಸರನ್ನು ಪರಿಗಣಿಸಿದ್ದಕ್ಕೆ ಧನ್ಯವಾದ ಹೇಳಿದರು. ಹಿರಿಯರಾದ ಕಾಗೋಡು ತಿಮ್ಮಪ್ಪ ಅವರ ಹೋರಾಟವನ್ನು ಆಯ್ಕೆಗೆ ಪರಿಗಣಿಸಿದ್ದೇವೆ. ನಾನು ಇನ್ನೂ ಮಂತ್ರಿಯಾಗದಿದ್ದ ಕಾಲದಲ್ಲೇ ರಾಜುಗುರು ದ್ವಾರಕನಾಥ್ ಅವರು ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶವಿದೆ ಎಂದು ಹೇಳಿ ಮಾರ್ಗದರ್ಶನ ಮಾಡಿದ್ದಾರೆ. ನನಗೆ ಸಂಸ್ಕೃತ ಪಾಠ ಕಲಿಸಿದ ಶಿಕ್ಷಕರನ್ನು ಪ್ರಶಸ್ತಿ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಕೊನೇ ಘಳಿಗೆಯಲ್ಲಿ ಜಿಲ್ಲಾವಾರು ಬೇರೆಯವರಿಗೆ ಅವಕಾಶ ನೀಡುವುದಕ್ಕಾಗಿ ಅವರ ಹೆಸರನ್ನು ಕೈಬಿಡಲಾಯಿತು ಎಂದು ಸಿಎಂ ಆಯ್ಕೆ ಹಿಂದಿನ ಕುತೂಹಲಗಳನ್ನು ಬಿಚ್ಚಿಟ್ಟರು. ಪ್ರಶಸ್ತಿ ಪುರಸ್ಕೃತ ಜಿಮ್ ರವಿ ಪ್ರಶಸ್ತಿ ಸ್ವೀಕರಿಸಿದ ನಂತರ ತನ್ನ ದೇಹದಾರ್ಢ್ಯ ಪ್ರದರ್ಶಿಸಿ ಸಭಿಕರ ಗಮನ ಸೆಳೆದರು.
ನಾಡಿನ ಏಳ್ಗೆಗಾಗಿ ದುಡಿದ ಹಿರಿಯರನ್ನು ಆಯ್ಕೆ ಮಾಡಿ ಗೌರವಿಸುವ ಸರ್ಕಾರದ ಕ್ರಮ ಮೆಚ್ಚುವಂತದ್ದು. ವಿಶೇಷವಾಗಿ ಈ ಬಾರಿ ಯಾವುದೇ ಗೊಂದಲಗಳಿಲ್ಲದ ಅರ್ಹ ಸಾಧಕರನ್ನು ಆಯ್ಕೆ ಮಾಡುವಲ್ಲಿ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಯಶಸ್ವಿಯಾಗಿದ್ದಾರೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ.ಬಿ.ವಿ.ಆಚಾರ್ಯ, ಹಿರಿಯ ನ್ಯಾಯವಾದಿ
ದೇಶದಲ್ಲೇ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಹೊಂದಿರುವ ಕರ್ನಾಟಕ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿಗೆ ಘನ ಸರ್ಕಾರ ಆಯ್ಕೆ ಮಾಡಿರುವುದು ಸಂತಸ ಮೂಡಿಸಿದೆ. ಈ ಪ್ರಶಸ್ತಿಯು ಶೃಂಗೇರಿ ಪೀಠದ ಶಾರದಾ ಪರಮೇಶ್ವರಿ ಅಮ್ಮನವರ ಕೃಪೆ, ಜಗದ್ಗುರು ಮಹಾಸನ್ನಿಧಾನಂಗಳ ಆಶೀರ್ವಾದ ಹಾಗೂ ಗಾಣಗಾಪುರದ ಶ್ರೀಗುರು ದತ್ತಾತ್ರೇಯರ ಕರುಣೆಯ ಪ್ರಸಾದವೆಂದು ಭಾವಿಸಿದ್ದೇನೆ.ರಾಜಗುರು ಬಿ.ಎಸ್.ದ್ವಾರಕಾನಾಥ್, ಜ್ಯೋತಿಷಿಗಳು