ಕನ್ನಡ ಮೊದಲು ಬಳಗವು ಕನ್ನಡ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆ
- ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಸದಸ್ಯರನ್ನಾಗಿಸಲಾಗಿದೆ. ಪ್ರಾಧಿಕಾರದ ಅಧ್ಯಕ್ಷರು ಸದಸ್ಯರಾಗಿ ಹೇಗೆ ನಿರ್ಣಯ ಕೈಗೊಳ್ಳಲು ಸಾಧ್ಯ?
- ಪ್ರಾಧಿಕಾರವನ್ನು ಮುಚ್ಚಿಬಿಡಿ ಇಲ್ಲವಾದಲ್ಲಿ ಕಾಯ್ದೆಗೆ ಸ್ವಲ್ಪ ಬದಲಾವಣೆ ತಂದು ಕನ್ನಡ ಅನುಷ್ಠಾನವನ್ನು ಪ್ರಾಧಿಕಾರಕ್ಕೆ ಕೊಡಿ
- ಸರ್ಕಾರಿ ಪ್ರಾಯೋಜಿತ ಸಮಿತಿ ಇರುವ ಈ ಕಾಯ್ದೆ ಅನುಷ್ಠಾನವಾದ ಬಳಿಕ ನಿಧಾನವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾವು ಬರಲಿದೆ
ಬೆಂಗಳೂರು: ರಾಜ್ಯದಲ್ಲಿ ಕನ್ನಡ ಅನುಷ್ಠಾನದ ಒಂದೇ ಉದ್ದೇಶಕ್ಕೆ ಎರಡೆರಡು ಕಾಯ್ದೆಗಳೇಕೇ?, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ- 1994ರ ನಿಯಮಗಳನ್ನೇ ಕಾಪಿ ಪೇಸ್ಟ್ ಮಾಡಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ-2022ದಿಂದ ನಿಧಾನವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ (ಕಅಪ್ರಾ) ಸಾವಾಗಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.
ಕನ್ನಡ ಮೊದಲು ಬಳಗವು ಕನ್ನಡ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಆಂಗ್ಲ ಶಾಲೆಗಳಲ್ಲಿ ಕನ್ನಡ ಕಲಿಕೆ ಮತ್ತು ಸಮಗ್ರ ಕನ್ನಡ ಅನುಷ್ಠಾನದ ಕ್ರಿಯಾ ಯೋಜನೆ’ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಕಾಯ್ದೆಯ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗಳು ಇದ್ದಾರೆ. ಹೀಗಾಗಿ, 2022ರ ಕಾಯ್ದೆಯು ಬಲಶಾಲಿಯಾಗಿದೆ. ಆದರೆ, ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಸದಸ್ಯರನ್ನಾಗಿಸಲಾಗಿದೆ. ಪ್ರಾಧಿಕಾರದ ಅಧ್ಯಕ್ಷರು ಸದಸ್ಯರಾಗಿ ಹೇಗೆ ನಿರ್ಣಯ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಪ್ರಶ್ನಿಸಿದರು.
ಈ ಸಂಬಂಧ ‘ಒಂದು ಪ್ರಾಧಿಕಾರವನ್ನು ಮುಚ್ಚಿಬಿಡಿ ಇಲ್ಲವಾದಲ್ಲಿ ಕಾಯ್ದೆಗೆ ಸ್ವಲ್ಪ ಬದಲಾವಣೆ ತಂದು ಕನ್ನಡ ಅನುಷ್ಠಾನವನ್ನು ಪ್ರಾಧಿಕಾರಕ್ಕೆ ಕೊಡಿ ಎಂದು ಕೇಳಲಾಗಿದೆ’. ಹೀಗೆ ತಿದ್ದುಪಡಿ ಮಾಡುವುದಕ್ಕೆ ಕಾನೂನು ವಿಭಾಗಕ್ಕೆ ಕಳುಹಿಸಿ ಎಂಟು ತಿಂಗಳಾಗಿದೆ. ಇಲ್ಲಿಯವರೆಗೂ ತಿದ್ದುಪಡಿಯಾಗಿಲ್ಲ. ಈ ಕಾರಣದಿಂದಲೇ ಹೇಳುತ್ತಿದ್ದೇನೆ. ಸರ್ಕಾರಿ ಪ್ರಾಯೋಜಿತ ಸಮಿತಿ ಇರುವ ಈ ಕಾಯ್ದೆ ಅನುಷ್ಠಾನವಾದ ಬಳಿಕ ನಿಧಾನವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾವು ಬರಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಅನುಷ್ಠಾನದ ವಿಚಾರದಲ್ಲಿ ಜಿಲ್ಲಾಧಿಕಾರಿಗಳನ್ನು ನಾವು ಪ್ರಶ್ನಿಸುತ್ತೇವೆ, ಈಗ ಅವರನ್ನೇ ಸದಸ್ಯರಾಗಿ ಮಾಡಿದರೆ ನಾವು ಯಾರನ್ನು ಕೇಳುವುದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ಮಾಡಿದರೆ ಅವರಿಗೆ ಪುರುಷೊತ್ತು ಇರುತ್ತದೆಯೇ? ನೂರಾರು ಕೆಲಸಗಳ ನಡುವೆ ಕನ್ನಡ ವಿಚಾರಕ್ಕೆ ಉತ್ಸಾಹ, ಸಮಯ ಇರುತ್ತದೆಯೇ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಎಲ್.ಎನ್. ಮುಕುಂದರಾಜ್, ಕಅಪ್ರಾ ಮಾಜಿ ಅಧ್ಯಕ್ಷ ಎಲ್. ಹನುಮಂತಯ್ಯ, ಮುಖ್ಯಮಂತ್ರಿ ಚಂದ್ರು, ಹಿರಿಯ ಸಾಹಿತಿ ವಸುಂಧರಾ ಭೂಪತಿ ಮತ್ತು ಕನ್ನಡ ಬಳಗದ ಜ್ಞಾನೇಶ್ವರ್ ಉಪಸ್ಥಿತರಿದ್ದರು.
ಕನ್ನಡಕ್ಕೆ ಮೂರು ಆಯಾಮಗಳಲ್ಲಿ ಸಮಸ್ಯೆ
ರಾಜ್ಯಮಟ್ಟದಲ್ಲಿ ಸಮಸ್ಯೆ- ಶಾಲೆಗಳ ಅಭಿವೃದ್ಧಿ, ಇಲಾಖೆಯಲ್ಲಿರುವ ಪ್ರಾಧಿಕಾರಗಳ ನಡುವಿನ ಹೊಂದಾಣಿಕೆ ಮಾಡುವುದು.
ರಾಷ್ಟ್ರೀಯ ಸಮಸ್ಯೆ- ಭಾಷೆ ವಿಚಾರದಲ್ಲಿ ಸಮಸ್ಯೆಯಾಗಿದೆ. ಇತ್ತೀಚಿಗೆ ಸಿಬಿಎಸ್‌ಇ ಹೊರತಂದಿರುವ ಕನ್ನಡ ಮೂರನೇ ಭಾಷೆ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಒಂದೇ ಒಂದು ಮಾತು ಕೇಳಿಲ್ಲ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿರುವುದರಿಂದ ಸಂಬಂಧಪಟ್ಟ ರಾಜ್ಯವನ್ನು ಸಂಪರ್ಕಿಸಬೇಕಿತ್ತು. ಆಶ್ರಮವೊಂದರ ಶಾಲೆಯನ್ನು ಸಂಪರ್ಕಿಸಿರುವುದು ಎಷ್ಟು ಸರಿ?
ಮೂರನೆಯದಾಗಿ ಸಂವಿಧಾನದಲ್ಲಿ ಹಿಂದಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಸಮಸ್ಯೆಯಾಗಿದೆ. ಇದು ಕೇವಲ ಕನ್ನಡದ ಸಮಸ್ಯೆ ಮಾತ್ರವಲ್ಲ, ಹಿಂದಿಯೇತರ ರಾಜ್ಯಗಳ ಪ್ರಾದೇಶಿಕ ಭಾಷೆಗಳ ಸಮಸ್ಯೆಯಾಗಿದೆ.
ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ, ಎಸ್‌ಇಪಿ ಅನುಷ್ಠಾನ ಮಾಡಿ
ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ನಡೆಸಬೇಕೆಂದು ಸಂವಿಧಾನಕ್ಕೆ ತಿದ್ದುಪಡಿ ತಂದು ಸಂಸತ್ತಿನಲ್ಲಿ ಬಿಲ್ ಪಾಸ್ ಮಾಡಿದೆ ಹೊರತು ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಭಾರೀ ಕಷ್ಟ. ಅದರ ಜತೆಗೆ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ)ಯನ್ನು ಸರಿಯಾಗಿ ಜಾರಿಗೊಳಿಸಿದರೆ ಕನ್ನಡ ಉಳಿಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.