- ಆರ್‌ಎಸ್‌ಎಸ್‌ಗೆ ಬೈಯ್ದರೆ ದೊಡ್ಡವರಾಗಲ್ಲ
- ಊಟ-ಪ್ರವಾಸಕ್ಕೂ ಪರವಾನಿಗೆ ಕೇಳಿದರೂ ಅಚ್ಚರಿಯಿಲ್ಲ
- ಹುಚ್ಚುಚ್ಚು ಮಾತಾಡೋದು ಸ್ವಭಾವ ಅಲ್ಲ
ವಿಜಯಪುರ: ‘ದೊಡ್ಡವರಿಗೆ ಬೈಯ್ದರೆ ಆರಾಮಾಗಿ ಪ್ರಚಾರ ಸಿಗಲಿದೆ ಎಂಬ ಟೆಕ್ನಿಕ್ ಕೆಲವರಿಗೆ ಗೊತ್ತಾಗಿದೆ, ಹೀಗಾಗಿ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದರೆ ಕೆಲವರು ದೊಡ್ಡವರಾಗುತ್ತೇವೆ ಅಂದುಕೊಂಡಿದ್ದಾರೆ, ವಿನಾಶ ಕಾಲೇ ವಿಪರೀತ ಬುದ್ದಿ’ ಎಂದು ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಖಾರವಾಗಿ ಪ್ರತಿಕ್ರಿಯಿಸಿದರು.
ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಪರವಾನಿಗೆ ಪಡೆಯಬೇಕೆಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಂಬಂಧಿಸಿದಂತೆ ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೆಲವರಿಗೆ ಗೊತ್ತಾಗಿದೆ ಪ್ರಚಾರ ಯಾವುದರಿಂದ ಸಿಗುತ್ತೆ ಎಂದು. ಹೀಗೆ ಮಾಡುತ್ತಾ ಹೋದರೆ ತಮ್ಮ ಅವನತಿ ಬೇಗ ತಂದುಕೊಳ್ಳುತ್ತಾರೆ ಎನ್ನಿಸುತ್ತದೆ ಎಂದರು.
ಇಂದು ಪಥ ಸಂಚಲನಕ್ಕೆ ಪರವಾನಿಗೆ ಕೇಳುವವರು, ನಾಳೆ ಊಟ ಮಾಡಲು, ಪ್ರವಾಸ ಮಾಡಲು ಸಹ ಪರವಾನಿಗೆ ಕೇಳುತ್ತಾರೆ. ಹುಚ್ಚುಚ್ಚು ಮಾತಾಡೋದು ಸ್ವಭಾವ ಅಲ್ಲ, ಅಂಥದ್ದೊಂದು ರೋಗ ಬಂದಿರಬೇಕೆಂದು ಅನ್ನಿಸುತ್ತದೆ. ವಿನಾಶ ಕಾಲೇ ವಿಪರೀತ ಬುದ್ದಿ. ಅವರ ತಂದೆಯವರಾದರೂ ಹೇಳಬೇಕಿತ್ತು. ಅವರ ತಂದೆ ಹಳಬರು, ಬುದ್ದಿವಂತರಿದ್ದಾರೆ. ಅವರೂ ಹೇಳುತ್ತಿಲ್ಲ. ತಂದೆಯವರಿಗಿಂತಲೂ ಎರಡು ಹೆಜ್ಜೆ ಮುಂದೆ ಹೋಗಿದ್ದಾರೆನ್ನಿಸುತ್ತದೆ. ಕಾಮಣಿ ಆದವರಿಗೆ ಜಗತ್ತೆಲ್ಲ ಹಳದಿ ಎಂಬಂತೆ ಆರ್‌ಎಸ್‌ಎಸ್ ಅನ್ನು ಯಾವ ದೃಷ್ಠಿಯಿಂದ ನೋಡುತ್ತಾರೋ ಆ ತೆರನಾಗಿ ಕಾಣುತ್ತದೆ. ಅವರಿಗೆ ಕಾಣುವುದು ಅವರ ಮನಸ್ಸಿನಲ್ಲಿದ್ದದ್ದೇ ಹೊರತು ಬೇರೇನೂ ಅಲ್ಲ ಎಂದರು.
ನೊಣದಲ್ಲಿ ಎರಡು ರೀತಿಯ ನೊಣಗಳಿರುತ್ತವೆ. ಒಂದು ಜೇನು ನೊಣ, ಇನ್ನೊಂದು ಹೊಲಸಿನ ಮೇಲೆ ಕೂರುವ ನೊಣ. ಜೇನು ನೊಣ ದೂರ ಹೋಗಿ ಮಕರಂದ ತರುತ್ತವೆ. ಹೊಲಸಿನಲ್ಲಿರುವ ನೋಣ ಪಕ್ಕದಲ್ಲೇ ಹೂಗಳಿದ್ದರೂ ಹೊಲಸಿನ ಮೇಲೆಯೇ ಕೂರುತ್ತವೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.