ರಾಯಚೂರಿನ ಪೇಟೆಲ್ ರಸ್ತೆಯಲ್ಲಿ ಸೋಮವಾರ ರಾತ್ರಿ ಹೋಳಿ ಹಬ್ಬದ ನಿಮಿತ್ತ ಸಾರ್ವಜನಿಕರು ಕಾಮದಹನ ಮಾಡಿದರು. 
ರಾಜ್ಯ

ನಗರದಲ್ಲಿ ಸಂಭ್ರಮದೊಂದಿಗೆ ಕಾಮದಹನ

ರಾಯಚೂರು ಹೋಳಿ ಹಬ್ಬದ ನಿಮಿತ್ತ ಸೋಮವಾರ ರಾತ್ರಿ ನಗರದ ನಾನಾ ಕಡೆ ಸಡಗರ ಸಂಭ್ರಮದೊಂದಿಗೆ ಕಾಮದಹನ ಮಾಡಲಾಯಿತು.
ನಾನಾ ಬೀದಿಯ ಯುವಕರು ಮನೆ- ಮನೆಗೆ ಹೋಗಿ ಸೌದೆ, ಬೆರಣಿ, ಒಣಗಿದ ತೆಂಗಿನಗರಿ, ಹಳೆಯ ರಟ್ಟಿನ ಪೆಟ್ಟಿಗೆ ಇನ್ನಿತರ ವಸ್ತುಗಳನ್ನು ಸಂಗ್ರಹಿಸಿಕೊಂಡು ಒಂದು ಸ್ಥಳದಲ್ಲಿ ರಾಶಿ ಹಾಕಿ ನಂತರ ಪೂಜಿಸಿ ಬೆಂಕಿ ಇಟ್ಟು ಸುಟ್ಟರು. ಶ್ರೀ ಕೋಟೆ ನರಸಿಂಹಸ್ವಾಮಿ ದೇವಸ್ಥಾನ, ಈಶ್ವರ ದೇವಸ್ಥಾನ, ಲಕ್ಷ್ಮೀ ವೆಂಕಟೇಶ ದೇವಸ್ಥಾನ, ಶ್ರೀರಾಮ ಮಂದಿರ, ಪಟೇಲ್ ರಸ್ತೆ, ಬಂಗಾರ ಬಜಾರ, ಬೇಸ್ತವಾರ ಪೇಟೆ ಹತ್ತಿರ ಕೆಲವರು ಕಾಮದಹನ ಮಾಡಿದರೆ ಮಾರ್ವಾಡಿ ಸಮುದಾಯದ ಯುವಕರು ಪಾರಸ್ ಗಾರ್ಡನ್ ಬಳಿ ಕಾಮದಹನ ಮಾಡಿದರು.
ಇನ್ನು ಕೆಲವರು ತಮ್ಮ ಮನೆಗಳ ಅಂಗಳದಲ್ಲಿ ಕಾಮದೇವನ ಪ್ರತಿಮೆಯನ್ನಿರಿಸಿ ಸರಳವಾಗಿ ಪೂಜಿಸಿ ಕಾಮದಹನ ಮಾಡಿದರು. ಕಾಮದಹನವನ್ನು ಮನಸ್ಸಿನ ಮದ-ಮೋಹ-ಮತ್ಸರ ಇವುಗಳನ್ನು ಗೆದ್ದು ಬರುವ ಸಂಕೇತವಾಗಿ ಆಚರಿಸಲಾಗುತ್ತದೆಂದು ವಿಜಯವಾಣಿಗೆ ಮಾರ್ವಾಡಿ ಸಮಾಜದ ಪ್ರಮುಖ ಪ್ರವೀಣ್ ಹೇಳಿದರು.