- ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿಕೆ
- ಮಂಡಳಿ ಅನುದಾನ ಸಂಪೂರ್ಣ ಬಳಕೆ ಗುರಿ
ಕಲಬುರಗಿ: ರಾಜ್ಯದ ಸರಾಸರಿ ಹೋಲಿಸಿದಾಗ ಕಲ್ಯಾಣ ಭಾಗದಲ್ಲಿ ಜಿಡಿಪಿ, ತಲಾ ಆದಾಯ ತುಂಬಾ ಕಡಿಮೆ ಇದೆ. ಇದನ್ನು ಹೆಚ್ಚಿಸಲು ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಜವಳಿ ಕ್ಷೇತ್ರದಲ್ಲಿ ಈ ಭಾಗಕ್ಕೆ ಪ್ರತ್ಯೇಕ ನೀತಿ ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ರತ್ಯೇಕ ನೀತಿ ರೂಪಿಸಿ ಜಾರಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ಸಿಂಗ್ ಹೇಳಿದರು.
ನಗರದ ಐವಾನ್-ಇ-ಶಾಹಿ ಅತಿಥಿಗೃಹದಲ್ಲಿ ಸೋಮವಾರ ರಾತ್ರಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಆಚೆ 2 ಮತ್ತು 3ನೇ ಹಂತದ ನಗರಗಳ ಬೆಳವಣಿಗೆ ಹೊಂದಲು, ಪ್ರಾದೇಶಿಕ ಅಸಮಾನತೆ ನೀಗಿಸಲು ಈ ಮೂಲಕ ಸಾಧ್ಯವಾಗಲಿದೆ.ಹೀಗಾಗಿ ಕಲ್ಯಾಣ ಕರ್ನಾಟಕ ಎಕಾನಾಮಿ ಮಿಷನ್ ಅಡಿ ಹೂಡಿಕೆಗೆ ಪ್ರಯತ್ನಿಸಲಾಗುವುದು. ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ನಾಲ್ಕು ಕಡೆ ಜಿಟಿಟಿಸಿ ಸ್ಥಾಪನೆ
ಮಂಡಳಿ ಸಭೆಯಲ್ಲಿ 5,000 ಕೋಟಿ ರೂ. ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸಲು ಮಂಡಳಿ ಒಮ್ಮತದ ರ್ನಿಣಯ ಕೈಗೊಂಡಿದೆ. ಆಯವ್ಯಯದಲ್ಲಿ ಘೋಷಿಸಿದ ಯೋಜನೆಗಳಿಗೆ ಆಯಾ ಇಲಾಖೆಯ ಅನುದಾನ ಜತೆಗೆ ಹೆಚ್ಚುವರಿಯಾಗಿ ಮಂಡಳಿ ಅನುದಾನ ನೀಡಲಾಗುವುದು. ಆರೋಗ್ಯ-ಶಿಕ್ಷಣ ಆವಿಷ್ಕಾರ, ಕಲ್ಯಾಣ ಪಥ, ವಸತಿ ನಿಲಯ ಯೋಜನೆಗಳಿಗೆ ಈ ವರ್ಷವೂ ಅನುದಾನ ನೀಡಲಾಗುವುದು ಎಂದರು.
ಕಳೆದ ವರ್ಷ ಕಲಬುರಗಿ&ಯಾದಗಿರಿಯಲ್ಲಿ ಇಂಡಸ್ಟ್ರಿ ಹಬ್ ಸ್ಥಾಪನೆಗೆ ಅನುದಾನ ಮೀಸಲಿಡಲಾಗಿತ್ತು. ಈ ವರ್ಷ ರಾಯಚೂರು-ಕೊಪ್ಪಳದಲ್ಲಿ ಕೈಗಾರಿಕೆ ಹಬ್ ಸ್ಥಾಪನೆಗೆ ಒತ್ತು ನೀಡಲಾಗುತ್ತಿದೆ. ಸರ್ಕಾರ ರಾಜ್ಯದ ಇತರೆ ನಿಗಮಕ್ಕೆ ಬಸ್ ನೀಡುತ್ತದೆ. ಆದರೆ ಕೆಕೆಆರ್ಟಿಸಿಗೆ ಮಂಡಳಿಯಿಂದ ಬಸ್ ಖರೀದಿ ಮಾಡಿಕೊಳ್ಳಲು ನಿರ್ದೇಶನ ನೀಡುತ್ತದೆ. ಹೀಗಾದರೆ ಮೀಸಲಾತಿ ಎಲ್ಲಿ ಸಿಕ್ಕಂತಾಗುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಜಯಸಿಂಗ್, ಸರ್ಕಾರ ಇತರೆ ನಿಗಮಕ್ಕೆ ನೀಡಿದಂತೆ ಕೆಕೆಆರ್ಟಿಸಿಗೂ ಬಸ್ ನೀಡಿದಲ್ಲಿ ಮಾತ್ರ ಹೆಚ್ಚುವರಿ ಬಸ್ ಒದಗಿಸಲು ಮಂಡಳಿ ಸಿದ್ಧವಿದೆ. ಒಂದು ವೇಳೆ ಸರ್ಕಾರ ಕೆಕೆಆರ್ಟಿಸಿಗೆ ಬಸ್ ನೀಡದಿದ್ದಲ್ಲಿ ಮಂಡಳಿಯಿಂದಲೂ ಅನುದಾನ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆ.ಪಿ.ಎಸ್ ಶಾಲೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚಿಸಲಾಗಿದೆ. ಡಿಪಿಆರ್ ಕಾರ್ಯ ನಡೆಯುತ್ತಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತು ಸಭೆಯಲ್ಲಿ ಸುದೀರ್ವಾಗಿ ಚರ್ಚಿಸಲಾಗಿದೆ. ಕಳೆದ 2025&25ಕ್ಕೆ ವರ್ಷಕ್ಕೆ ಹೋಲಿಸಿದರೆ 2025-26ನೇ ವರ್ಷದ ಫಲಿತಾಂಶದಲ್ಲಿ ಶೇಕಡಾವಾರು ಪ್ರಮಾಣ ಹೆಚ್ಚಳವಾಗಿದೆ. ಪ್ರೊ.ಛಾಯಾ ದೇಗಾಂವಕರ್ ವಿವರವಾಗಿ ಮಾಹಿತಿ ನೀಡಿದ್ದಾರೆ. ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ಇತ್ತೀಚೆಗೆ ಆರ್ಥಿಕ ತ ಪ್ರೊ.ಗೋವಿಂದರಾವ್ ಸಮಿತಿ ತನ್ನ ವರದಿ ನೀಡಿದ್ದು, ಮುಂದಿನ 5 ವರ್ಷದಲ್ಲಿ ಶಿಕ್ಷಣ ಮತ್ತು ಅರೋಗ್ಯಕ್ಕೆ ತಲಾ 12,000 ಕೋಟಿ ರೂ., ನೀರಾವರಿಗೆ 10,000 ಕೋಟಿ ರೂ., ಕೃಷಿಗೆ 2,000 ಕೋಟಿ ರೂ. ಸೇರಿ ವಿವಿಧ ವಲಯಗಳಲ್ಲಿ ಒಟ್ಟು 43,914 ಕೋಟಿ ರೂ. ಹಣ ಪ್ರದೇಶಕ್ಕೆ ವಿನಿಯೋಗಿಸಲು ವರದಿ ನೀಡಿದೆ. ಅದರಂತೆ ಕಳೆದ ವರ್ಷ ನೀರಾವರಿ ೇತ್ರಕ್ಕೆ 200 ಕೋಟಿ ರೂ. ಖರ್ಚು ಮಾಡಿ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಲಾಗಿದೆ ಎಂದರು.
ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್ ಇದ್ದರು.
"
ಉದ್ಯೋಗ ಮತ್ತು ಉದ್ಯೋಗಾಧರಿತ ಕೌಶಲ ಹೆಚ್ಚಿಸಲು ಸೇಡಂ, ಜೇವರ್ಗಿ, ಸಿಂಧನೂರು, ರಾಯಚೂರಿನಲ್ಲಿ ತಲಾ 73 ಕೋಟಿ ರೂ. ವೆಚ್ಚದಲ್ಲಿ ಜಿ.ಟಿ.ಟಿ.ಸಿ ಸ್ಥಾಪನೆ ಮಾಡಲಾಗುವುದು.
— ಡಾ.ಅಜಯಸಿಂಗ್, ಅಧ್ಯಕ್ಷ, ಕೆಕೆಆರ್ಡಿಬಿ ಕಲಬುರಗಿ.